ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ರಚಿಸಿರುವ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಳಗೊಂಡ 8 ಜನರನ್ನು ಹೊಂದಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ. 

ಚಿಕ್ಕಮಗಳೂರು (ಡಿ.03): ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾಕ್ಕೆ ರಚಿಸಿರುವ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಳಗೊಂಡ 8 ಜನರನ್ನು ಹೊಂದಿರುವ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕು ಎಂದು ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ ಸಂಬಂಧ ಸಂಘಟನೆ ನೇತೃತ್ವದಲ್ಲಿ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಿಂದ ಎಂ.ಜಿ.ರಸ್ತೆಯ ಮೂಲಕ ಆಜಾದ್‌ ಪಾರ್ಕ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇನಾಂ ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾದಲ್ಲಿ ಪೂಜಾ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ಹೈಕೋರ್ಚ್‌ನಲ್ಲಿ ಶಾಖಾದ್ರಿಯವರು ದಾವೆ ಹೂಡಿದ್ದಾರೆ. ಈ ಅರ್ಜಿ ಇನ್ನು ಇತ್ಯರ್ಥವಾಗಿಲ್ಲ, ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟು ರಚನೆ ಮಾಡಿರುವ 8 ಜನರು ಒಳಗೊಂಡ ವ್ಯವಸ್ಥಾಪನಾ ಸಮಿತಿಯಲ್ಲಿ ನಾಮಕಾವಸ್ಥೆಗೆ ಮುಸ್ಲಿಂ ಸಮುದಾಯಕ್ಕೆ ಸೇರಿರುವ ಓರ್ವರನ್ನು ಸೇರಿಸಿಕೊಳ್ಳಲಾಗಿದೆ. ಇದು, ಸಮಂಜಸವಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Chikkamagaluru: ನಿವೇಶನಕ್ಕೆ ಆಗ್ರಹಿಸಿ ಸಿಪಿಐ ಧರಣಿ; ಅಪರ ಜಿಲ್ಲಾಧಿಕಾರಿಗೆ ಮನವಿ

ಕೂಡಲೇ ಈ ಸಮಿತಿಯನ್ನು ರದ್ದುಪಡಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಸಮಿತಿ ಯಾವುದೇ ತೀರ್ಮಾನ ತೆಗೆದುಕೊಂಡರೆ ಅದು ಜಾರಿಗೆ ತರಬಾರದು. ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ ಎಂದು ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಗೌಸ್‌ ಮುನೀರ್‌, ಅಜ್ಮತ್‌ ಪಾಶಾ, ಗೌಸ್‌ ಮೊಹಿಯುದ್ದೀನ್‌, ಜಂಶಿದ್‌ ಖಾನ್‌, ಅಲ್ತಾಫ್‌ ಬಿಳಗೊಳ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

ಮಾಂಸಹಾರಕ್ಕೆ ನಿಷೇಧ: ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಬಳಿ ಮಾಂಸಾಹಾರ ತಯಾರಿಗೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಕೂಡಲೇ ಈ ಆದೇಶವನ್ನು ಕೈ ಬಿಡಬೇಕೆಂದು ಬಾಬಾಬುಡನ್‌ಗಿರಿ ಸಮಿತಿ ಅಧ್ಯಕ್ಷ ಸಿರಾಜ್‌ ಹುಸೇನ್‌ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದ ಸಿರಾಜ್‌ ಹುಸೇನ್‌, ಹರಕೆ ತೀರಿಸಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಪ್ರತಿ ವರ್ಷ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಈ ಹಿಂದೆ ಇಲ್ಲಿ ಮಾಂಸಾಹಾರ ತಯಾರಿಸಲು ನಿಷೇಧ ಇರಲಿಲ್ಲ. ನ್ಯಾಯಾಲಯದ ಆದೇಶವೂ ಇಲ್ಲ, ಆದರೆ, ಜಿಲ್ಲಾಡಳಿತ ಅಡುಗೆ ತಯಾರಿಸಲು ನಿಷೇಧ ಹೇರಿದ್ದು ಸರಿಯಲ್ಲ ಎಂದರು. 2004ರಲ್ಲಿ ಬಾಬಾಬುಡನ್‌ಗಿರಿ ಬಳಿ ಮಾಂಸದ ಅಂಗಡಿ ಇದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. 

ರೈತರಿಗೆ ಅನ್ಯಾಯವಾಗುವ ಕಾಯ್ದೆ ಜಾರಿಯಾಗಲು ಬಿಡಲ್ಲ: ಡಿ.ಕೆ.ಶಿವಕುಮಾರ್‌

ಅದೇ ವರ್ಷ ಅಂದಿನ ಜಿಲ್ಲಾಧಿಕಾರಿ ಆಗಿದ್ದ ರಾಜೇಂದ್ರಕುಮಾರ್‌ ಕಟಾರಿ ಅವರು ಗಿರಿಪ್ರದೇಶದಿಂದ 200 ಮೀ. ದೂರದಲ್ಲಿ ಮಾಂಸದ ಅಂಗಡಿಯನ್ನು ಇಡಲು ಆದೇಶಿಸಿದ್ದರು ಎಂದು ತಿಳಿಸಿದರು. ಬಾಬಾಬುಡನ್‌ಗಿರಿಯಲ್ಲಿ ಮಾಂಸಾಹಾರ ತಯಾರಿಕೆ ನಿಷೇಧಿಸಿ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಒಂದುವೇಳೆ ಬಾಬಾಬುಡನ್‌ ಗಿರಿಯಲ್ಲಿ ಮಾಂಸಾಹಾರ ತಯಾರಿಕೆ ಮಾಡದಂತೆ ನ್ಯಾಯಾಲಯದ ಆದೇಶವಿದ್ದರೇ, ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದು, ಭಕ್ತರಿಗೆ ತೊಂದರೆ ನೀಡದಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದರು. ಮನವಿ ಸಲ್ಲಿಸಿದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್‌ ಸಮಿತಿಯ ಜಿಲ್ಲಾಧ್ಯಕ್ಷ ಜಂಶಿದ್‌ ಖಾನ್‌, ಅವರಂಗ್‌ ಇದ್ದರು.