ವರದಿ : ಬಿ. ಶೇಖರ್‌ ಗೋಪಿನಾಥಂ

 ಮೈಸೂರು (ಅ.26):  ಕಳೆದ ಎರಡು ದಶಕಗಳಿಂದ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಅಭಿಮನ್ಯು ಆನೆಗೆ 21 ವರ್ಷಗಳ ಬಳಿಕ ಮೊದಲ ಬಾರಿಗೆ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಹೊರುವ ಅವಕಾಶ ಸಿಕ್ಕಿದೆ.

ಜಂಬೂಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿಯನ್ನು ಎಳೆಯುವ ಜವಾಬ್ದಾರಿ ನಿರ್ವಹಿಸಿದ್ದ ಅಭಿಮನ್ಯು ಆನೆಯು ನಂತರ ನೌಫತ್‌ ಆನೆಯಾಗಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಅಲ್ಲದೆ, ಶ್ರೀರಂಗಪಟ್ಟಣ ದಸರೆಯಲ್ಲಿ ಮರದ ಅಂಬಾರಿಯನ್ನು 7- 8 ವರ್ಷ ಹೊತ್ತಿರುವ ಅನುಭವ ಸಹ ಹೊಂದಿದೆ. 2020ನೇ ದಸರೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯೊಂದಿಗಿನ ಚಿನ್ನದ ಅಂಬಾರಿಯನ್ನು ಹೊರಲು ಅಭಿಮನ್ಯು ಆನೆ ಸಜ್ಜಾಗಿದೆ. 54 ವರ್ಷದ ಅಭಿಮನ್ಯು ಆನೆಯನ್ನು ಮಾವುತ ವಸಂತ ಮುನ್ನಡೆಸಲಿದ್ದು, ಕಾವಾಡಿಯಾಗಿ ರಾಜು ಕಾರ್ಯ ನಿರ್ವಹಿಸಲಿದ್ದಾರೆ.

ನವರಾತ್ರಿಗೆ ಶುಭಕೋರಿದ ಯದುವೀರ್ ಒಡೆಯರ್ ..

ಕೊರೋನಾ ಮಹಾಮಾರಿ ಕಾರಣ ಈ ಬಾರಿ 5 ಆನೆಗಳನ್ನು ಮಾತ್ರ ಕಾಡಿನಿಂದ ನಾಡಿಗೆ ಕರೆ ತರಲಾಗಿದೆ. ಮೈಸೂರು ಅರಮನೆ ಆವರಣದಲ್ಲೇ ಎಲ್ಲಾ ರೀತಿಯ ತಾಲೀಮು ನಡೆಸಿ ಅಂತಿಮ ಹಂತದ ಜಂಬೂಸವಾರಿಗೆ ಸಿದ್ಧವಾಗಿವೆ. ಅಭಿಮನ್ಯು ಆನೆ ಅಂಬಾರಿ ಹೊರಲಿದ್ದು, ಇದರ ಅಕ್ಕಪಕ್ಕದಲ್ಲಿ ವಿಜಯ ಮತ್ತು ಕಾವೇರಿ ಕುಮ್ಕಿ ಆನೆಗಳು ಸಾಗಲಿವೆ. ನೌಫತ್‌ ಆನೆಯಾಗಿ ವಿಕ್ರಮ, ನಿಶಾನೆ ಆನೆಯಾಗಿ ಗೋಪಿ ಮೆರವಣಿಗೆಯಲ್ಲಿ ಸಾಗಲಿವೆ.

ದಸರಾ ಜಂಬೂಸವಾರಿಯಲ್ಲಿ ಮೊದಲು ದ್ರೋಣ ಆನೆಯು ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ಬಾರಿ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಗೆ ಅಂಬಾರಿ ಹೊರಿಸಲಾಯಿತು. ಒಮ್ಮೆ ವಾಪಸ್‌ ಮೆರವಣಿಗೆಯಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸತತ 8 ವರ್ಷ ಅಂಬಾರಿ ಹೊರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತು. ಆದರೆ, ಈಗ ಅರ್ಜುನ ಆನೆಗೆ 60 ವರ್ಷ ತುಂಬಿರವ ಕಾರಣ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಆನೆಗೆ ವಹಿಸಲಾಗಿದೆ.

ದಸರಾ ಜಂಬೂಸವಾರಿಗೆ ಗಜಪಡೆ ಎಲ್ಲ ರೀತಿಯ ತಾಲೀಮು ನಡೆಸಿ ಸಜ್ಜಾಗಿವೆ. ಇದೇ ಮೊದಲ ಬಾರಿಗೆ ಅಭಿಮನ್ಯು ಆನೆಯು ಅಂಬಾರಿ ಹೊರಲಿದ್ದು, ಅದರ ಅಕ್ಕಪಕ್ಕದಲ್ಲಿ ಕುಮ್ಕಿಗಳಾಗಿ ವಿಜಯ ಮತ್ತು ಕಾವೇರಿ ಸಾಗಲಿವೆ. ನೌಫತ್‌ ಆನೆಯಾಗಿ ವಿಕ್ರಮ, ನಿಶಾನೆ ಆನೆಯಾಗಿ ಸಾಗಲಿದೆ. ಎಲ್ಲಾ ಆನೆಗಳ ಆರೋಗ್ಯ ಸ್ಥಿರವಾಗಿದೆ.

- ಡಾ.ಡಿ.ಎನ್‌. ನಾಗರಾಜು, ದಸರಾ ಆನೆ ವೈದ್ಯ

ಯಾವ ಆನೆಗೆ ಏನು ಕೆಲಸ?

ಅಂಬಾರಿ ಆನೆ- ಅಭಿಮನ್ಯು

ಅಂಬಾರಿ ಆನೆಗೆ ಕುಮ್ಕಿ ಆನೆಗಳು- ವಿಜಯ ಮತ್ತು ಕಾವೇರಿ

ನಿಶಾನೆ ಆನೆ- ಗೋಪಿ

ನೌಫತ್‌ ಆನೆ- ವಿಕ್ರಮ