ನರಸಿಂಹರಾಜಕ್ಕೆ ಅಬ್ದುಲ್ ಖಾದರ್ ಜೆಡಿಎಸ್ ಅಭ್ಯರ್ಥಿ!
ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಣಕ್ಕಿಳಿಯಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ ಅವರೊಂದಿಗೆ ಪಕ್ಷಕ್ಕೆ ಬಂದ ಅಬ್ದುಲ್ ಖಾದರ್ (ಶಾಹಿದ್) ಅವರಿಗೆ ಬಿ ಫಾರಂ ನೀಡಲಾಗಿದೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಣಕ್ಕಿಳಿಯಲಿದ್ದಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆದರೆ ಅವರೊಂದಿಗೆ ಪಕ್ಷಕ್ಕೆ ಬಂದ ಅಬ್ದುಲ್ ಖಾದರ್ (ಶಾಹಿದ್) ಅವರಿಗೆ ಬಿ ಫಾರಂ ನೀಡಲಾಗಿದೆ.
ಕಳೆದ ಬಾರಿ ಈ ಕ್ಷೇತ್ರದಿಂದ ಅಬ್ದುಲ್ಲಾ ಅಭ್ಯರ್ಥಿಯಾಗಿದ್ದರು. 1994 ರಲ್ಲಿ ಅವರು ಇದೇ ಕ್ಷೇತ್ರದಿಂದ ಕೆಸಿಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಪರೋಕ್ಷವಾಗಿ ‘ಸೋಲಿಲ್ಲದ ಸರದಾರ’ ಅಜೀಜ್‌ಸೇಠ್ ಅವರ ಪರಾಭವಕ್ಕೆ ಕಾರಣರಾಗಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಬ್ದುಲ್ಲಾ ಕೆಲಕಾಲ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು.
ಇಬ್ರಾಹಿಂ ಅವರು ತಾವು ಸ್ಪರ್ಧಿಸುವುದಾಗಿ ಹೇಳುತ್ತಾ ಮೊದಲ ಪಟ್ಟಿಯಲ್ಲಿ ತಮಗೆ ಟಿಕೆಟ್ ಘೋಷಿಸಿಲ್ಲ. ಇತ್ತೀಚಿನ ದಿನಗಳಲ್ಲಿ ತಮ್ಮ ಗಮನಕ್ಕೆ ತಾರದೇ ಪದಾಧಿಕಾರಿಗಳ ನೇಮಕಾತಿ ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿ ಅಬ್ದುಲ್ಲಾ ಈ ಬಾರಿ ಸ್ಪರ್ಧೆಗೆ ನಿರಾಕರಿಸಿದ್ದರು. ಅಲ್ಲದೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ನರಸಿಂಹರಾಜ ಮುಸ್ಲಿಂ ಬಾಹುಳ್ಯದ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ತನ್ವೀರ್ ಸೇಠ್ 2002ರ ಉಪ ಚುನಾವಣೆ, 2004,2008, 2013, 2018- ಹೀಗೆ ಸತತ ಐದು ಬಾರಿ ಗೆದ್ದಿದ್ದಾರೆ. ಎಸ್‌ಡಿಪಿಐನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಇಬ್ರಾಹಿಂ ಬರುತ್ತಾರೋ ಇಲ್ಲವೋ ಎಂಬ ಕುತೂಹಲ ಇತ್ತು. ಅದಕ್ಕೆ ಅಂತಿಮವಾಗಿ ತೆರೆಬಿದ್ದಿದೆ.
ಅಬ್ದುಲ್ ಖಾದರ್ ಕಾಂಗ್ರೆಸ್‌ನಲ್ಲಿ ಇದ್ದವರು. ಇಬ್ರಾಹಿಂ ಜೆಡಿಎಸ್ ಸೇರಿದ ನಂತರ ಮೈಸೂರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಿದ ಕಾರಣಕ್ಕೆ ಪಕ್ಷದಿಂದ ಶಿಸ್ತು ಕ್ರಮಕ್ಕೆ ಒಳಗಾಗಿದ್ದರು. ನಂತರ ಜೆಡಿಎಸ್ ಸೇರ್ಪಡೆಯಾಗಿದ್ದರು.
ಇದರೊಂದಿಗೆ ಜೆಡಿಎಸ್ ಜಿಲ್ಲೆಯಲ್ಲಿ 11 ಕ್ಷೇತ್ರಗಳ ಪೈಕಿ 10ಕ್ಕೆ ಅಭ್ಯರ್ಥಿ ಆಖೈರು ಮಾಡಿದಂತಾಗಿದೆ. ಹಾಲಿ ಶಾಸಕರಾದ ಜಿ.ಟಿ. ದೇವೇಗೌಡ- ಚಾಮುಂಡೇಶ್ವರಿ, ಸಾ.ರಾ. ಮಹೇಶ್- ಕೆ.ಆರ್. ನಗರ, ಕೆ. ಮಹದೇವ್- ಪಿರಿಯಾಪಟ್ಟಣ, ಎಂ. ಅಶ್ವಿನ್‌ಕುಮಾರ್-
ಇ. ನರಸೀಪುರ, ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್- ವರುಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ- ಹುಣಸೂರು, ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಸಿ. ಜಯಪ್ರಕಾಶ್- ಎಚ್.ಡಿ. ಕೋಟೆ, ಮಾಜಿ ಶಾಸಕ ದಿವಂಗತ ಎಚ್. ಕೆಂಪೇಗೌಡರ ಪುತ್ರ ಎಚ್.ಕೆ. ರಮೇಶ್- ಚಾಮರಾಜ, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್- ಕೃಷ್ಣರಾಜ, ಅಬ್ದುಲ್ ಖಾದರ್- ನರಸಿಂಹರಾಜ.
ನಂಜನಗೂಡು ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಅಲ್ಲಿ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿ.ಆರ್. ಧ್ರುವನಾರಾಯಣ ಅವರ ಪುತ್ರ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಧ್ರುವನಾರಾಯಣ ಹಾಗೂ ಅವರ ಪತ್ನಿ ವೀಣಾ ಅವರು ಒಂದು ತಿಂಗಳ ಅವಧಿಯಲ್ಲಿ ನಿಧನರಾಗಿರುವುದರಿಂದ ಜೆಡಿಎಸ್ ಅವರನ್ನು ಬೆಂಬಲಿಸಿ, ಅಭ್ಯರ್ಥಿ ಕಣಕ್ಕಿಳಿಸಿಲ್ಲ.