ರಾಜ್ಯದಲ್ಲಿ ನೀರಾವರಿ ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ಸಂಖ್ಯೆಗಳನ್ನು ಸಂಬಂಧಿಸಿದ ಗ್ರಾಹಕರ ಆಧಾರ್‌ ನಂಬರ್‌ ಜತೆಗೆ ಆರು ತಿಂಗಳೊಳಗಾಗಿ ಲಿಂಕ್‌ ಮಾಡಬೇಕು. ಇಲ್ಲದಿದ್ದರೆ ಅಂತಹ ಆರ್‌.ಆರ್‌. ಸಂಖ್ಯೆಗಳಿಗೆ ಸಹಾಯಧನ ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್‌ಸಿ ಶುಕ್ರವಾರ ಆದೇಶ ಹೊರಡಿಸಿದೆ. ಇದು ರೈತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಬೆಂಗಳೂರು (ಮೇ.12) : ರಾಜ್ಯದಲ್ಲಿ ನೀರಾವರಿ ಕೃಷಿ ಪಂಪ್‌ಸೆಟ್‌ಗಳ ಆರ್‌.ಆರ್‌. ಸಂಖ್ಯೆಗಳನ್ನು ಸಂಬಂಧಿಸಿದ ಗ್ರಾಹಕರ ಆಧಾರ್‌ ನಂಬರ್‌ ಜತೆಗೆ ಆರು ತಿಂಗಳೊಳಗಾಗಿ ಲಿಂಕ್‌ ಮಾಡಬೇಕು. ಇಲ್ಲದಿದ್ದರೆ ಅಂತಹ ಆರ್‌.ಆರ್‌. ಸಂಖ್ಯೆಗಳಿಗೆ ಸಹಾಯಧನ ಬಿಡುಗಡೆ ಮಾಡುವುದಿಲ್ಲ ಎಂದು ಕೆಇಆರ್‌ಸಿ ಶುಕ್ರವಾರ ಆದೇಶ ಹೊರಡಿಸಿದೆ. ಇದು ರೈತ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಶುಕ್ರವಾರ ಪ್ರಕಟಿಸಿರುವ ವಿದ್ಯುತ್‌ ದರ ಪರಿಷ್ಕರಣೆ ಆದೇಶದಲ್ಲಿ ಈ ಷರತ್ತನ್ನು ವಿಧಿಸಿದ್ದು, ಎಸ್ಕಾಂಗಳು ಕಡ್ಡಾಯವಾಗಿ ಕೃಷಿ ಪಂಪ್‌ಸೆಟ್‌ಗಳ ಗ್ರಾಹಕರಾಗಿರುವ ರೈತರ ಆಧಾರ್‌ ಸಂಖ್ಯೆ(Farmers adhar number)ಯನ್ನು ಸಂಬಂಧಪಟ್ಟಕೃಷಿ ಪಂಪ್‌ಸೆಟ್‌(Agriculture pumpset) ಆರ್‌.ಆರ್‌. ಸಂಖ್ಯೆಗೆ ಲಿಂಕ್‌ ಮಾಡಬೇಕು. ಇದನ್ನು 6 ತಿಂಗಳ ಒಳಗಾಗಿ ಮಾಡದಿದ್ದರೆ ಅಂತಹ ಆರ್‌.ಆರ್‌. ಸಂಖ್ಯೆಯ ಸಹಾಯಧನ ಸರ್ಕಾರದಿಂದ ಎಸ್ಕಾಂಗಳಿಗೆ ಬಿಡುಗಡೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಅನಧಿಕೃತ ಕೃಷಿ ನೀರಾವರಿ ಪಂಪ್‌ಸೆಟ್‌ ಬಳಕೆ ಸಕ್ರಮ

ಈ ಬಗ್ಗೆ ರೈತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕೃಷಿ ಪಂಪ್‌ಸೆಟ್‌ಗಳಿಗೆ ಇರುವ ಉಚಿತ ವಿದ್ಯುತ್‌ ಸೌಲಭ್ಯಗಳನ್ನು ಕಸಿದುಕೊಳ್ಳುವ ಹುನ್ನಾರ. ಯಾವುದೇ ಕಾರಣಕ್ಕೂ ರೈತರ ಆಧಾರ್‌ ಸಂಖ್ಯೆಯನ್ನು ಆರ್‌.ಆರ್‌. ಸಂಖ್ಯೆಗೆ ಲಿಂಕ್‌ ಮಾಡುವುದನ್ನು ಒಪ್ಪುವುದಿಲ್ಲ. ಒಂದು ವೇಳೆ ಬಲವಂತವಾಗಿ ಲಿಂಕ್‌ ಮಾಡಲು ಮುಂದಾದರೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿವೆ.

ಈ ಬಗ್ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಪ್ರತಿಕ್ರಿಯಿಸಿದ್ದು, ಇದು ರೈತರ ಕೃಷಿ ಪಂಪ್‌ಸೆಟ್‌ಗೆ ನೀಡುತ್ತಿರುವ ಉಚಿತ ವಿದ್ಯುತ್‌ ಸೌಲಭ್ಯ ರದ್ದುಪಡಿಸುವ ಕೇಂದ್ರ ಸರ್ಕಾರದ ಹುನ್ನಾರ. ಕೇಂದ್ರದ ಹೊಸ ವಿದ್ಯುತ್‌ ನೀತಿ ಅನ್ವಯ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ ಮಾಡಬೇಕು. ಮೊದಲು ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಶುಲ್ಕವನ್ನು ರೈತರು ಪಾವತಿಸಿದರೆ ಬಳಿಕ ಸಬ್ಸಿಡಿ ಹಣವನ್ನು ಸರ್ಕಾರ ಪಾವತಿಸಬೇಕು ಎಂದು ಹೇಳಲಾಗಿದೆ. ಇದಕ್ಕೆ ದೇಶಾದ್ಯಂತ ರೈತ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ ಎಂದರು.

ಈ ಮೊದಲು ಅಡುಗೆ ಗ್ಯಾಸ್‌ ಬೆಲೆಯನ್ನೂ ಇದೇ ರೀತಿ ಮಾಡಿದ್ದರು. ಮೊದಲು ಗ್ರಾಹಕರು ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕು, ಬಳಿಕ ಸರ್ಕಾರ ಗ್ರಾಹಕರ ಖಾತೆಗೆ ಸಬ್ಸಿಡಿ ಹಣ ವಾಪಸು ಮಾಡುತ್ತದೆ ಎಂದರು. ಎರಡು ತಿಂಗಳು ಹಾಕಿ ಏಕಾಏಕಿ ಸಬ್ಸಿಡಿ ನಿಲ್ಲಿಸಿಬಿಟ್ಟರು. ಜನ ಸಾಮಾನ್ಯರಿಗೆ ಧ್ವನಿ ಇಲ್ಲದಂತೆ ಮಾಡಿ ಅವರ ಸೌಲಭ್ಯಗಳನ್ನು ಕಸಿದುಕೊಳ್ಳುವ ನೀತಿ ಇದು. ಈಗ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದರೆ ಮುಂದೆ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುತ್ತಾರೆ. ಮೀಟರ್‌ ಅಳವಡಿಸಿದ ಬಳಿಕ ರೈತರು ಶುಲ್ಕ ಪಾವತಿಸಬೇಕು, ಬಳಿಕ ಸರ್ಕಾರ ವಾಪಸು ಕೊಡುತ್ತದೆ ಎನ್ನುತ್ತಾರೆ. ಬಳಿಕ ವಾಪಸು ಕೊಡುವುದನ್ನು ನಿಲ್ಲಿಸಿ ವಿದ್ಯುತ್‌ ರೈತರು ಶುಲ್ಕ ಭರಿಸುವಂತೆ ಮಾಡುತ್ತಾರೆ. ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರದ ಹುನ್ನಾರಕ್ಕೆ ನಾವು ಮಣಿಯುವುದಿಲ್ಲ. ಮುಂದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆಧಾರ್‌ ಲಿಂಕ್‌ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಹ್ಯಾಂಡ್ ಪಂಪನ್ನು ಆಟೋಮ್ಯಾಟಿಕ್ ಪಂಪ್ ಮಾಡಿದ ವ್ಯಕ್ತಿ

ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ:

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌, ರೈತರ ಮೇಲೆ ಸವಾರಿ ಮಾಡಲು ಈ ಸರ್ಕಾರಕ್ಕೆ ಯಾಕೆ ಇಷ್ಟುತರಾತುರಿ? ಮೊದಲು ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿ. ಗರಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಿ ಮತ್ತೆ ಇಂತಹವುಗಳಿಗೆ ಕೈಹಾಕಲಿ. ಅದನ್ನು ಮಾಡದೆ ಆಧಾರ್‌ ಲಿಂಕ್‌ನಂತಹ ಪ್ರಯತ್ನಗಳಿಗೆ ಕೈಹಾಕಿದರೆ ಯಾವುದೇ ಸರ್ಕಾರವಾಗಲಿ ಹೋರಾಟ ಮಾಡುತ್ತೇವೆ. ಅದು ಹೇಗೆ ಮಾಡುತ್ತಾರೆ ಎಂಬುದನ್ನು ನಾವೂ ನೋಡುತ್ತೇವೆ ಎಂದು ಎಚ್ಚರಿಕೆ ನೀಡಿದರು.