Asianet Suvarna News Asianet Suvarna News

ಉದ್ಯೋಗ ಮಾಡುತ್ತಿದ್ರೂ ಕೃಷಿಯಲ್ಲಿ ಖುಷಿ ಕಂಡ ದಂಪತಿ, 200 ಅಧಿಕ ವಿದೇಶಿ ತಳಿ ಹಣ್ಣು ಬೆಳೆದ ಜೋಡಿ

* ಆಧುನಿಕ ಉದ್ಯೋಗ ಮಾಡುತ್ತಿದ್ದರೂ ಕೃಷಿಯನ್ನು ಬಿಟ್ಟಿರಲಾಗದ ದಂಪತಿ
* ಕರಾವಳಿಯಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಅನ್ನೋರಿಗೆ ಸೆಡ್ಡು
 * ಇನೂರಕ್ಕೂ ಅಧಿಕ ವಿದೇಶಿ ತಳಿಯ ಹಣ್ಣು-ಹಂಪಲು
 * ಕರ್ನಾಟಕದ ಹವಾಮಾನಕ್ಕೆ ಹೊಂದುವ ಹಣ್ಣುಗಳು

A Udupi Couple success In 200 foreign bred fruits tree planting rbj
Author
Bengaluru, First Published Jun 16, 2022, 8:30 PM IST

ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಜೂನ್,16): ಉಡುಪಿಯ ಶಿರ್ವ ಸಮೀಪದ  ಮಂಚಕಲ್ಲಿನ ದಂಪತಿ ಇನ್ನೂರಕ್ಕೂ ಅಧಿಕ ತಳಿಯ ವಿದೇಶಿ ಹಣ್ಣುಹಂಪಲುಗಳನ್ನು ಬೆಳೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಐಟಿ, ಇವೆಂಟ್ ಮ್ಯಾನೇಜ್ಮೆಂಟ್ ನಂತಹಾ ಆಧುನಿಕ ಉದ್ಯೋಗಗಳನ್ನು ಮಾಡುತ್ತಿದ್ದರೂ, ಕೃಷಿಯನ್ನು ಬಿಡಲಾಗದ ಜೋಡಿಯೊಂದರ ಕಥೆ ಇದು ! 

ಕರಾವಳಿಯ ತಾಪಮಾನಕ್ಕೆ ಅನುಗುಣವಾಗಿ ಪೂರ್ವದೇಶಗಳಲ್ಲಿ ಬೆಳೆಯುವ ಬಗೆ ಬಗೆಯ ಹಣ್ಣುಗಳ ಗಿಡಗಳನ್ನು ಇವರು ಸಂಗ್ರಹಿಸಿದ್ದಾರೆ.
ನಮ್ಮೂರಿನಲ್ಲಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ಅನೇಕ ಕೃಷಿಕರು ಕೈಚೆಲ್ಲಿದ ಬೆಲೆಬಾಳುವ  ಹಣ್ಣುಗಳನ್ನು  ಈ ದಂಪತಿಗಳು ಬೆಳೆದು ತೋರಿಸಿದ್ದಾರೆ. ಜೆನ್ ಕಾಡ್ರೆಸ್ ಮತ್ತು ರಾಬಿನ್ ಡಿಕ್ರೋಸ್ ಕಳೆದ ಹಲವು ವರ್ಷಗಳಿಂದ ಈ ಹಣ್ಣಿನ ಗಿಡಗಳನ್ನು ಬೆಳೆಯುವ ಹವ್ಯಾಸ ರೂಡಿಸಿಕೊಂಡಿದ್ದಾರೆ. 

ಕಲಾಪ್ರಪಂಚದ ನಿಜದರ್ಶನ ಮಾಡಿಸುವ ಮುಖವಾಡಗಳು, ಡಾ.ಕಿರಣ್ ಆಚಾರ್ಯರ ಗ್ಯಾಲರಿ ರೌಂಡ್ಸ್

ಬ್ರೆಜಿಲ್ ದೇಶದ ಸುರಿನಾಮ್ ಚೆರ್ರಿ,ಅರಾದಬೋಯಿ, ಥೈಲ್ಯಾಂಡ್ ದೇಶದ ಬರ್ಮಿಸ್ ಗ್ರೇಪ್, ಮೆಕ್ಸಿಕೋ ಸೌತ್ ಅಮೆರಿಕ   ಭಾಗದ ಅಬೀವ್, 18 ವಿಧದ ಜಬೋಟಿಕಾಬಾ, ಸಂತೋಲ್, ಬಿರಿಬಾ, ಲಿನಿಯ ಹೀಗೆ 200 ಕ್ಕೂ ಅಧಿಕ ವಿದೇಶಿ ತಳಿಯ ಹಣ್ಣುಗಳ ಗಿಡಗಳನ್ನು  ಈ ದಂಪತಿಗಳು ಬೆಳೆಯುತ್ತಾರೆ. ಇವುಗಳ ಪೈಕಿ 30 ಗಿಡಗಳು ಈಗ ಫಲ ನೀಡುತ್ತಿವೆ.

A Udupi Couple success In 200 foreign bred fruits tree planting rbj

ಥೈಲ್ಯಾಂಡ್ ಬೋರ್ನಿಯೋ ಇಂಡೋನೇಷ್ಯಾ  ಬ್ರೆಜಿಲ್,  ಸೌತ್ ಅಮೆರಿಕ ಸೇರಿದಂತೆ  ಟ್ರೋಪಿಕಲ್ ಪ್ರದೇಶದ ಗಿಡಗಳು ಕರ್ನಾಟಕದ ಹವಾಮಾನಕ್ಕೆ ಸೂಕ್ತ ಎನ್ನುತ್ತಾರೆ ರಾಬಿನ್ . ಸಹಜವಾಗಿ ಹೆಚ್ಚಿನ ಕೃಷಿಕರು ನೆಲದಲ್ಲೇ ನೇರವಾಗಿ ಗಿಡವನ್ನು ನೆಟ್ಟರೆ ಈ ದಂಪತಿಗಳು ಮಾತ್ರ ಪಾಟ್ ನಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಪಾಟ್ ಗಳಲ್ಲಿ ನೆಟ್ಟ ಗಿಡಗಳು 10 ಅಡಿಯಿಂದ 12 ಅಡಿಯವರೆಗೆ ಬೆಳೆದಿವೆ.ಕೀಟಬಾಧೆ ಮತ್ತು ನೆಲದಲ್ಲಿ ಹರಡುವ ಫಂಗಸ್ ಗಳು ಗಿಡವನ್ನು ಹಾಳು ಮಾಡುವ ಸಾಧ್ಯತೆ ಇದೆ ಹೀಗಾಗಿ ರೋಗ ಬಾಧೆ ತಡೆಗಟ್ಟಲು ಮತ್ತು   ಸಂತುಲಿತ ಪೌಷ್ಟಿಕಾಂಶಗಳನ್ನು ನೀಡಲು ಪಾಟ್ ಗಳಲ್ಲೇ ಗಿಡವನ್ನು ನೆಡುವುದು ಸೂಕ್ತ   ಎನ್ನುವುದು ಇವರ ಅನುಭವದ ಮಾತು.ಇವರು ಬೆಳೆದಿರುವ ಗಿಡಗಳಲ್ಲಿ ಕೆಲವು ಗಿಡಗಳು ಹಣ್ಣನ್ನು ನೀಡಿದರೆ ಕೆಲವು ಗಿಡಗಳು ವರ್ಷಕ್ಕೆ ಮೂರು ಬಾರಿ  ಅಥವಾ ಒಂದೇ ಬಾರಿ ಇಳುವರಿ ಕೊಡುತ್ತವೆ. 

ಸದ್ಯ ಮಾರುಕಟ್ಟೆಗೆ ಕೊಡುವಷ್ಟು ಇಳುವರಿ ಇವರಲ್ಲಿ ಇಲ್ಲವಾದ ಕಾರಣ  ಮನೆ ಬಳಕೆ ಮತ್ತು ಸಂಬಂಧಿಕರು ಮತ್ತು ಮಿತ್ರರಿಗೆ ಈ ಹಣ್ಣುಗಳನ್ನು ಹಂಚುತ್ತಿದ್ದಾರೆ. ಮುಂದೆ ಇವರು ದೊಡ್ಡ ಮಟ್ಟದಲ್ಲಿ ತೋಟ ಮಾಡಬೇಕು ಎಂದು ಯೋಚನೆ ಮಾಡಿದ್ದು ಅದಕ್ಕಾಗಿ ಸ್ಥಳದ ಹುಡುಕಾಟದಲ್ಲಿದ್ದಾರೆ. ಈ ದಂಪತಿಗಳ ಬಳಿಯಿರುವ ಗಿಡಗಳಲ್ಲಿ ಕೆಲವೊಂದು ಗಿಡಗಳನ್ನು 2000ಕ್ಕೂ ಅಧಿಕ ರೂಪಾಯಿಗೆ ಖರೀದಿಸಿದ್ದಾರೆ. ಹೆಚ್ಚಿನ ಗಿಡಗಳನ್ನು ಇವರು ಗ್ರಾಫ್ಟಿಂಗ್ ಮೂಲಕ ಬೆಳೆದಿದ್ದರೆ ಇನ್ನೂ ಒಂದಷ್ಟು ಗಿಡಗಳು ಬೀಜದ ಮೂಲಕ ಪಡೆದಿದ್ದಾರೆ . 
ಈ ಗಿಡಗಳಿಗೆ ಫಂಗಸ್ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . ಗಿಡದ ಕೊಂಬೆಗಳಲ್ಲಿ ಬಿಳಿ ಅಥವಾ ಕಪ್ಪು ಬಣ್ಣದ ಫಂಗಸ್ ಕಾಣಿಸಿಕೊಂಡು ಎಲೆಗಳು ಬಾಡುತ್ತವೆ ಇದನ್ನು ತಡೆಗಟ್ಟಲು ಕೆಲವೊಂದಿಷ್ಟು ಶಿಲೀಂದ್ರ ನಿರೋಧಕಗಳನ್ನು ಬಳಸುತ್ತಾರೆ  ಅದನ್ನು ಹೊರತುಪಡಿಸಿ ಬೇರೆ ಯಾವುದೇ ಕೀಟನಾಶಕಗಳನ್ನು ಇವರು ಬಳಸುವುದಿಲ್ಲ.ಅದರಲ್ಲೂ ಕರಾವಳಿಯಲ್ಲಿ ವಿಶೇಷವಾಗಿ ಡ್ರ್ಯಾಗನ್ ಫ್ರೂಟ್ ಮತ್ತು ಅವಕಾಡೊ ಬೆಳೆದರೆ ಉತ್ತಮ ಫಸಲು ಲಭಿಸುತ್ತದೆ ಎನ್ನುತ್ತಾರೆ ಜೇನ್ ಕ್ವಾಡ್ರಸ್. ಅದೇನೆ ಇರಲಿ ಈ ದಂಪತಿಗಳ ಅಪರೂಪದ ಸಾಹಸಕ್ಕೆ ಕೃಷಿ ಪ್ರೇಮಿಗಳೆಲ್ಲ ಫಿದಾ ಆಗಿದ್ದಾರೆ.

Follow Us:
Download App:
  • android
  • ios