Asianet Suvarna News Asianet Suvarna News

ಚನ್ನಪಟ್ಟಣ ಟಿಕೆಟ್‌ಗೆ ಮೈತ್ರಿ ಮುಖಂಡರಲ್ಲಿ ಹಗ್ಗಜಗ್ಗಾಟ!?

ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಮೈತ್ರಿ ಪಕ್ಷಗಳಲ್ಲಿ ಹಗ್ಗಜಗ್ಗಾಟ ಶುರುವಾಗಿದೆಯೇ?

A tug-of-war among alliance leaders for Channapatna ticket!? snr
Author
First Published Jun 15, 2024, 12:36 PM IST

-ವಿಜಯ್ ಕೇಸರಿ

 ಚನ್ನಪಟ್ಟಣ : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಮೈತ್ರಿ ಪಕ್ಷಗಳಲ್ಲಿ ಹಗ್ಗಜಗ್ಗಾಟ ಶುರುವಾಗಿದೆಯೇ? ತಮ್ಮ ಪಕ್ಷಕ್ಕೆ ಟಿಕೆಟ್ ಕೊಡಬೇಕೆಂಬ ನಿಟ್ಟಿನಲ್ಲಿ ಮೈತ್ರಿ ಪಕ್ಷದ ಮುಖಂಡರು ಒತ್ತಡ ಹಾಕುವ ತಂತ್ರಗಾರಿಕೆ ನಡೆಸಿದ್ದಾರೆಯೇ? ಇಂಥದೊಂದು ಅನುಮಾನ ಕಾಡುವಂತೆ ಬೆಳವಣಿಗೆಗಳು ಬೊಂಬೆನಾಡಿನಲ್ಲಿ ಆರಂಭಗೊಂಡಿದೆ.

ಒಕ್ಕಲಿಗರ ಭದ್ರಕೋಟೆಯಾದ ಚನ್ನಪಟ್ಟಣ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದುಕೊಂಡಿದೆ. ಪ್ರತಿಷ್ಠತ ಕ್ಷೇತ್ರವೆನಿಸಿರುವ ಇದು ಸದಾ ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಗಿದ್ದು, ಈ ಬಾರಿಯೂ ಕ್ಷೇತ್ರದ ಶಾಸಕರು ಆಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೂ ಮುನ್ನವೇ ಟಿಕೆಟ್‌ಗಾಗಿ ಮೈತ್ರಿ ಪಕ್ಷದಲ್ಲಿ ಸದ್ದಿಲ್ಲದೇ ಹಗ್ಗಜಗ್ಗಾಟ ಆರಂಭಗೊಂಡಿದೆ.

ಕ್ಷೇತ್ರದ ಶಾಸಕರು ಆದ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದು, ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದ್ದು, ಈಗಿನಿಂದಲೇ ಮೈತ್ರಿ ಪಕ್ಷದ ಟಿಕೆಟ್‌ಗಾಗಿ ಬಿಜೆಪಿ-ಜೆಡಿಎಸ್ ಪಕ್ಷಗಳು ಕಸರತ್ತು ಆರಂಭಿಸಿವೆ.

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದೆನಿಸಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷಗಳ ಸಂಘಟನೆ ಬಲಿಷ್ಠವಾಗಿದೆ.

ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾರಣಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದರೆ, ಜೆಡಿಎಸ್ ಸಹ ಕ್ಷೇತ್ರದಲ್ಲಿ ಭದ್ರ ನೆಲೆ ಹೊಂದಿದೆ. ಕಳೆದ ಹಲವಾರು ದಶಕಗಳಿಂದ ಪರಸ್ಪರ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದ ಎರಡು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬದಲಾದ ಸನ್ನಿವೇಶದಲ್ಲಿ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಯನ್ನು ಒಂದಾಗಿ ಎದುರಿಸಿದ್ದಾರೆ. ಇದೀಗ ವಿಧಾನಸಭೆ ಉಪಚುನಾವಣೆ ಸಜ್ಜಾಗುವ ಹೊತ್ತಿನಲ್ಲಿ ತಮ್ಮದೇ ಆದ ತಂತ್ರಗಾರಿಕೆ ಅನುಸರಿಸುವ ಮೂಲಕ ಕ್ಷೇತ್ರದ ಟಿಕೆಟ್‌ಗಾಗಿ ಒತ್ತಡ ಹಾಕುವ ತಂತ್ರಗಾರಿಕೆ ನಡೆಸಿದ್ದಾರೆ.

ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡ ಜೆಡಿಎಸ್:

೨೦೧೮ರ ವಿಧಾನಸಭೆಯಲ್ಲಿ ಜಿಲ್ಲೆಯಲ್ಲಿನ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದು, ಜಿಲ್ಲೆ ಜೆಡಿಎಸ್ ಭದ್ರಕೋಟೆ ಎನ್ನಿಸಿತ್ತು. ಆದರೆ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಿದೆ. ಕನಕಪುರ, ಮಾಗಡಿ, ರಾಮನಗರ ಕ್ಷೇತ್ರಗಳ ಕೈವಶವಾಗಿದ್ದರೆ, ಜೆಡಿಎಸ್ ಚನ್ನಪಟ್ಟಣದಲ್ಲಿ ಮಾತ್ರ ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಇದೀಗ ಕುಮಾರಸ್ವಾಮಿ ಮಂಡ್ಯದ ಸಂಸದರಾಗಿದ್ದು, ಚನ್ನಪಟ್ಟಣದ ಶಾಸಕತ್ವಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ, ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಜೆಡಿಎಸ್ ಮುಖಂಡರದಾಗಿದೆ.

ಕಮಲ ಅರಳಿಸುವ ತವಕ:

20111 ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಯೋಗೇಶ್ವರ್ ಕಮಲ ಅರಳಿಸಿದ್ದರು. ಆ ನಂತರ 2018 ರಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಏರಿ ಗೆಲುವು ಸಾಧಿಸಿದ್ದರು. ಮತ್ತೆ ಬಿಜೆಪಿಗೆ ಮರಳಿದ ಯೋಗೇಶ್ವರ್ ೨೦೧೮ ಹಾಗೂ 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರಾದರೂ ಜೆಡಿಎಸ್‌ನ ಕುಮಾರಸ್ವಾಮಿ ಎದುರು ಪರಾಜಿತರಾಗಿದ್ದರು. ಇದೀಗ ಮತ್ತೆ ಉಪಚುನಾವಣೆ ಎದುರಾಗಲಿದ್ದು, ಬಿಜೆಪಿಯಿಂದ ಸ್ಪರ್ಧಿಸಿ ಕ್ಷೇತ್ರದಲ್ಲಿ ಕಮಲ ಅರಳಿಸುವ ತವಕದಲ್ಲಿದ್ದಾರೆ. ಆದರೆ, ಮೈತ್ರಿ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬುದು ಇನ್ನು ನಿರ್ಧಾರವಾಗಿಲ್ಲ.

ದಾಳ ಉರುಳಿಸುತ್ತಿರುವ ನಾಯಕರು:

ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪ್ರಮುಖರು ಟಿಕೆಟ್ ತಮ್ಮ ಪಕ್ಷಕ್ಕೆ ದೊರೆಕಿಸುವ ನಿಟ್ಟಿನಲ್ಲಿ ತಮ್ಮದೇ ಆದ ದಾಳ ಉರುಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ಎರಡು ಪಕ್ಷದ ಪ್ರಮುಖ ಮುಖಂಡರು ಎನಿಸಿರುವ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯುಮುತ್ತು ಒಂದೇ ದಿನ ಟಿಕೆಟ್ ವಿಚಾರದಲ್ಲಿ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಗ್ಗಜಗ್ಗಾಟ ನಡೆದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ಬಿಜೆಪಿಗೆ ಅಸ್ತಿತ್ವ ಇರುವುದು ಚನ್ನಪಟ್ಟಣದಲ್ಲಿ ಮಾತ್ರ. ರಾಮನಗರ, ಮಾಗಡಿ, ಕನಕಪುರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಆದರೆ, ಚನ್ನಪಟ್ಟಣದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತರಲಾಗುವುದು. ಯಾರೇ ಎನ್‌ಡಿಎ ಅಭ್ಯರ್ಥಿಯಾದರೂ ಎರಡು ಪಕ್ಷದವರು ಸೇರಿ ಕೆಲಸ ಮಾಡುತ್ತೇವೆ.

-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ

ರಾಜ್ಯದಲ್ಲಿ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಅವರಿಗೆ ಸ್ಥಾನಮಾನ ಸಿಗುವುದು ಅಗತ್ಯ. ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಬಯಸಿದ್ದಾರೆ. ನಮ್ಮ ಆಸೆಯೂ ಅದೇ ಆಗಿದೆ. ಈ ಕುರಿತು ಪಕ್ಷದ ವರಿಷ್ಠರ ಗಮನ ಸೆಳೆಯುತ್ತೇವೆ.

-ಎಚ್.ಸಿ.ಜಯಮುತ್ತು, ಜೆಡಿಎಸ್ ತಾಲೂಕು ಅಧ್ಯಕ್ಷ

Latest Videos
Follow Us:
Download App:
  • android
  • ios