ಪುತ್ತೂರಿನಲ್ಲಿ ನಕಲಿ ಮುಂಬೈ ಪೊಲೀಸರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ ವ್ಯಕ್ತಿಯೊಬ್ಬರಿಂದ ₹1.31 ಕೋಟಿ ದೋಚಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಡುವ ನೆಪದಲ್ಲಿ ಫೇಸ್‌ಬುಕ್ ಜಾಹೀರಾತು ನಂಬಿದ ವೃದ್ಧರೊಬ್ಬರು ₹1 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುತ್ತೂರು: ಮುಂಬೈ ಪೊಲೀಸ್ ಹಾಗೂ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು, ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸುವ ಮೂಲಕ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬರೋಬ್ಬರಿ ₹1.31 ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಡಿಯೋ ಕರೆಗಳ ಮೂಲಕ ನಿರಂತರ ಬೆದರಿಕೆ
ಆರೋಪಿಗಳು ವಾಟ್ಸ್ಆ್ಯಪ್ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಬೆದರಿಕೆ ಹಾಕಿದ್ದು, ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಆರೋಪಿಗಳ ಮಾತನ್ನು ನಂಬಿದ ದೂರುದಾರರು, 2026ರ ಸೆ. 2ರಿಂದ ಅ. 6ರವರೆಗೆ ಹಂತ ಹಂತವಾಗಿ ಒಟ್ಟು ₹1,31,50,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ನಂತರ ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ದೂರುದಾರರು, ಸೈಬರ್ ಅಪರಾಧ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೈಬರ್ ವಂಚನೆ: 1 ಲಕ್ಷ ರು. ನಗದು ಮೋಸ
ಹಿರಿಯ ನಾಗರಿಕರ ಕಾರ್ಡ್ ಬಗೆಗಿನ ಜಾಹೀರಾತು ನಂಬಿ ಹಿರಿಯರೊಬ್ಬರು 1 ಲಕ್ಷ ರು. ಕಳೆದು ಕೊಂಡಿರುವ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 68 ವರ್ಷದ ದೂರುದಾರರು ಕೖಷಿಕರಾಗಿದ್ದು, ಅ.4ರಂದು ಮೊಬೈಲ್‌ನಲ್ಲಿ ಫೆನ್‌ಬುಕ್ ನೋಡುತ್ತಿದ್ದಾಗ ಆನ್‌ಲೈನ್ ಮುಖಾಂತರ ಸೀನಿಯರ್ ಸಿಟಿಜನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು ಎನ್ನುವ ಜಾಹೀರಾತು ಕಂಡು ಬಂದಿದೆ. ಅ.6ರಂದು ಮತ್ತೆ ಜಾಹೀರಾತು ಕಂಡು ಬಂದಿದ್ದು, ಅದನ್ನು ಕ್ಲಿಕ್ ಮಾಡಿದ್ದಾರೆ.
1 ಲಕ್ಷ ರು. ವರ್ಗಾವಣೆ
ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಸಿನಿಯರ್ ಸಿಟಿಜನ್ ಕಾರ್ಡ್ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲು ಕರೆ ಮಾಡಿರುತ್ತೇನೆ ಎಂದು ತಿಳಿಸಿ, ಮಾಹಿತಿ ಪಡೆದು, ಡೆಬಿಟ್ ಕಾರ್ಡ್ ನಂಬರ್ ಮತ್ತು ಸಿವಿವಿ ಸಂಖ್ಯೆ ಕೇಳಿದ್ದಾನೆ. ದೂರುದಾರರು ಆತನಿಗೆ ನಂಬರ್ ಕೊಟ್ಟಿದ್ದು, ಅದಾದ ಬಳಿಕ ಅವರ ಖಾತೆಯಿಂದ 1 ಲಕ್ಷ ರು. ವರ್ಗಾವಣೆ ಮಾಡಿಕೊಂಡು, ವಂಚಿಸಲಾಗಿದೆ.


