Asianet Suvarna News Asianet Suvarna News

Kodagu Rains ಕೂರ್ಗ್ ನಲ್ಲಿ ದಾಖಲೆಯ 53.09ಮಿ.ಮೀ ಮಳೆ

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆಗಳ ಅವಧಿಯಲ್ಲಿ ಸರಾಸರಿ 53.09ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 51.88 ಮಿಮೀ ಮಳೆಯಾಗಿತ್ತು

A record 53.09mm rain in Coorg kodagu rav
Author
Bangalore, First Published Jul 17, 2022, 1:35 PM IST | Last Updated Jul 17, 2022, 1:35 PM IST

ಕೊಡಗು (ಜು.17) ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆಗಳ ಅವಧಿಯಲ್ಲಿ ಸರಾಸರಿ 53.09ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 51.88 ಮಿಮೀ ಮಳೆಯಾಗಿತ್ತು.  ಮಡಿಕೇರಿ ತಾಲೂಕಿನಲ್ಲಿ ಶಿನವಾರ ಸರಾಸರಿ 60.20ಮಿಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ 50.17ಮಿಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ 8.90ಮಿಮೀ ಮಳೆಯಾಗಿದೆ.

ಭಾರೀ ಮಳೆ(Heavy rain) ಹಿನ್ನೆಲೆ  ಮನೆ, ಜಮೀನು ಸೇರಿದಂತೆ ಅಪಾರ ಹಾನಿ ಸೃಷ್ಟಿಸಿದೆ ಕಳೆದ ಕೆಲವು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ ಭಾರೀ ಮಳೆ ಹಿನ್ನೆಲೆ ನದಿಗಳು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ.  ಈ ನಡುವೆ ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಜನರಿಗೆ ಭಯದ ಪರಿಸ್ಥಿತಿಯಲ್ಲಿ ಕಾಲಕಳೆಯುವಂತಾಗಿದೆ.

ಮಳೆ(Rain)ಯಿಂದಾಗಿ ಜಿಲ್ಲೆಯಲ್ಲಿ ಶನಿವಾರ ಎರಡು ಜಾನುವಾರುಗಳು ಬಲಿಯಾಗಿವೆ. ದಕ್ಷಿಣ ಕೊಡಗಿನ ನಾಲ್ಕೇರಿ ಗ್ರಾಮದ ನಿವಾಸಿ ಮಂಡೆಟ್ಟಿರ ಪ್ರಭು ಅವರಿಗೆ ಸೇರಿದ ಹಸು ತೋಡಿನಲ್ಲಿ ಬಿದ್ದು ಮೃತಪಟ್ಟಿದೆ. ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿ ಕೆ.ಬಾಡಗ ಗ್ರಾಮದ ನಿವಾಸಿ ಜಾಯ್‌ ಅಯ್ಯಪ್ಪ ಅವರಿಗೆ ಸೇರಿದ ಹಸು ಮೃತಪಟ್ಟಿದ್ದು, ಶ್ರೀಮಂಗಲ ಹೋಬಳಿ ಉಪ ತಹಸೀಲ್ದಾರರು, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿದರು. ಇದನ್ನೂ ಓದಿ: KODAGU NEWS: ಮೂರು ವರ್ಷ ಕಳೆದರೂ ನಿರಾಶ್ರಿತ ಕುಟುಂಬಕ್ಕೆ ಸಿಕ್ಕಿಲ್ಲ ಸೂರು!

ಮಳೆ ಕಡಿಮೆಯಾದರೂ ಕಡಿಮೆಯಾಗದ ನೆರೆ ಪ್ರಮಾಣ: ಜೀವ ನದಿ ಕಾವೇರಿ ಉಕ್ಕಿ ಹರಿದು ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬೇತ್ರಿಯಲ್ಲಿ ಅವಾಂತರ ಸೃಷ್ಟಿಯಾಗಿದೆ. ಬೇತ್ರಿಯಲ್ಲಿ ಕಾವೇರಿ ನದಿ ನೀರು ತೋಟಗಳಿಗೆ ನುಗ್ಗಿದ್ದು, ಅಡಕೆ ಮತ್ತು ಕಾಫಿಯ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ಫಸಲಿಗೆ ಬಂದಿದ್ದ ಕಾಫಿ ಹಾಗೂ ಅಡಕೆ ತೋಟ ನದಿ ನೀರಲ್ಲಿ ಮುಳುಗಿದ್ದು, ಬೆಳೆ ನಷ್ಟಸಂಭವಿಸಬಹುದೆಂದು ರೈತರು ಆತಂಕದಲ್ಲಿದ್ದಾರೆ. ಅಲ್ಲದೆ ಇಲ್ಲಿನ ತೋಟದ ಲೈನ್‌ ಮನೆಯ ಮೆಟ್ಟಿಲಿನವರೆಗೂ ನದಿ ನೀರು ಬಂದಿದ್ದು, ಮನೆ ಕೂಡ ಜಲಾವೃತವಾಗುವ ಭೀತಿ ಎದುರಾಗಿದೆ.

ಹರಿಶ್ಚಂದ್ರ ದೇವಾಲಯ ಜಲಾವೃತ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸಮೀಪದ ಪಾಲೂರು ಗ್ರಾಮದ ಹರಿಶ್ಚಂದ್ರ ದೇವಾಲಯ(Harishchandra Temple) ಜಲಾವೃತವಾಗಿದೆ. ಸುಮಾರು ಒಂದು ಫರ್ಲಾಂಗು ದೂರದ ರಸ್ತೆ ಜಲಾವೃತಗೊಂಡಿದ್ದು ದೇವಾಲಯದ ಸಮೀಪಕ್ಕೆ ತೆರಳಲು ಸಾಧ್ಯವಿಲ್ಲದಂತಾಗಿ ಪೂಜೆ ಸ್ಥಗಿತಗೊಂಡಿದೆ. ಇದನ್ನೂ ಓದಿ:ಸುಳ್ಯ, ಮಡಿಕೇರಿಯಲ್ಲಿ ಮತ್ತೆ ಭೂಕಂಪನ: ಬಿರುಕುಬಿಟ್ಟ ಭೂಮಿ

 ಕೊಡಗಿನಲ್ಲಿ ಮಳೆಗೆ ಮೊದಲ ಬಲಿ: ವಾರದ ಹಿಂದೆ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಸಾವು ಕೊಡಗು(Kodagu) ಜಿಲ್ಲೆಯಲ್ಲಿ ಮಳೆಗೆ ಮೊದಲ ಬಲಿಯಾಗಿದ್ದು, ವಾರದ ಹಿಂದೆ ಮನೆಯ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ವಸಂತಮ್ಮ (70) ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಇಲ್ಲಿಗೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸುಳುಗಳಲೆ ಕಾಲೋನಿಯ ಮಹಿಳೆ ವಸಂತಮ್ಮ ಜುಲೈ 5ರಂದು ಸುರಿದ ಭಾರಿ ಮಳೆಗೆ ವಾಸದ ಮನೆಯ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

 ಶನಿವಾರಸಂತೆ: 103 ಮಿ. ಮೀ. ಮಳೆ ದಾಖಲು: ಹೋಬಳಿ ವ್ಯಾಪ್ತಿಯಲ್ಲಿ ಕಳೆದ 48 ಗಂಟೆಗಳಲ್ಲಿ 103 ಮಿ.ಮೀ. (4. 12) ಇಂಚು ಮಳೆ ದಾಖಲಾಗಿದೆ. ಗುರುವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆ ವರೆಗೆ 103 ಮಿ.ಮೀ.ಮಳೆ ದಾಖಲಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ ಗ್ರಾಮದ ದೊಡ್ಡಕೆರೆ ವಾರದ ಹಿಂದೆಯೆ ಭರ್ತಿಯಾಗಿದ್ದು ಈಗ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಕೆರೆಯ ನೀರು ತೂಬಿನ ಮೂಲಕ ಹರಿಯುತ್ತಿದ್ದರೂ ಹೆಚ್ಚುವರಿ ನೀರು ಕೆರೆ ಏರಿ ದಾಟಿ ಹರಿಯುತ್ತಿದೆ. ಏರಿ ದಾಟಿ ಹೆಚ್ಚುವರಿಯಾಗಿ ಹರಿಯುತ್ತಿರುವ ನೀರು ಬೆಟ್ಟದ ತಪ್ಪಲಿನ ಕೆಳ ಭಾಗದಲ್ಲಿ ವಾಸ ಇರುವ ಮನೆಗಳಿಗೆ ತೆರಳುವ ಕಾಲು ದಾರಿಯಲ್ಲಿ ಕಾಲುವೆಯಂತೆ ಹರಿಯುತ್ತಿದೆ. ಇಲ್ಲಿನ ನಿವಾಸಿಗಳಿಗೆ ರಸ್ತೆಯ ವ್ಯವಸ್ಥೆ ಇಲ್ಲದಿರುವುದರಿಂದ ಕಾಲು ದಾರಿ ಈಗ ಕಾಲುವೆಯಾಗಿ ಮಾರ್ಪಾಡಾಗಿದೆ. ಕಾಲು ದಾರಿಯಲ್ಲಿ ಹರಿಯುತ್ತಿರುವ ಕೆರೆ ನೀರು ಪಕ್ಕದ ವಾಸದ ಮನೆಗಳಿಗೆ ನುಗ್ಗುತ್ತಿದೆ.

Latest Videos
Follow Us:
Download App:
  • android
  • ios