ಉದ್ಘಾಟನೆ ಕಾಣದ ನೂತನ ಪಾಸ್ ಪೋರ್ಟ್ ಸೇವಾ ಕೇಂದ್ರ
ಮೈಸೂರು ಮೃಗಾಲಯ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಪಾಸ್ಪೋರ್ಟ್ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ ಕಾಣದೆ ಪಾಳು ಬೀಳುತ್ತಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದ್ದಾರೆ.
- ಸಂದೇಶ್ ಸ್ವಾಮಿ
ಮೈಸೂರು : ಮೈಸೂರು ಮೃಗಾಲಯ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಪಾಸ್ಪೋರ್ಟ್ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆ ಕಾಣದೆ ಪಾಳು ಬೀಳುತ್ತಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆರೋಪಿಸಿದ್ದಾರೆ.
ಇಟ್ಟಿಗೆಗೂಡು ಲೋಕರಂಜನ್ ಆಕ್ವ ವರ್ಲ್ಡ್ ಎದುರು ಎಂಡಿಎ ವತಿಯಿಂದ ಪಾಸ್ ಪೋರ್ಟ್ ಕಚೇರಿಗಾಗಿ ಕೋಟ್ಯಂತರ ರೂ. ವೆಚ್ಚ ಮಾಡಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ಪೂರ್ಣಗೊಂಡು ಎರಡು ವರ್ಷವಾದರೂ ಇನ್ನೂ ಯಾಕೆ ಉದ್ಘಾಟನೆ ಮಾಡುತ್ತಿಲ್ಲ? ಅಧಿಕಾರಿಗಳು ಕಟ್ಟಡವನ್ನು ಯಾರಿಗಾದರೂ ಬೇರೆ ಉದ್ದೇಶಕ್ಕೆ ಬಳಸಲು ನೀಡುವುದಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆಯೇ? ಎಂಬ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ವಿದೇಶಕ್ಕೆ ತೆರಳುವ ಮೈಸೂರಿನ ನಾಗರೀಕರು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಅಲೆಯಬೇಕಿತ್ತು. ಇದನ್ನು ಮನಗಂಡ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿಗೆ ಪಾಸ್ ಪೋರ್ಟ್ ಕಚೇರಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದರು. ಆದರೆ ಕಚೇರಿ ಕಾರ್ಯಾರಂಭಕ್ಕೆ ಕಟ್ಟಡದ ಸಮಸ್ಯೆ ಎದುರಾಯಿತು. ತಾತ್ಕಾಲಿಕವಾಗಿ ಮೇಟಗಳ್ಳಿಯಲ್ಲಿ ಪಾಸ್ ಪೋರ್ಟ್ ಕಚೇರಿ ಆರಂಭಿಸಲಾಯಿತು ಎಂದಿದ್ದಾರೆ.
ಮೇಟಗಳ್ಳಿ ಅಂಚೆ ಕಚೇರಿಯ ಕಟ್ಟಡದಲ್ಲಿ ಪ್ರಸ್ತುತ ಪಾಸ್ ಪೋರ್ಟ್ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗೆ ನೂರಾರು ಮಂದಿ ಸಾರ್ವಜನಿಕರು ಭೇಟಿ ನೀಡುತ್ತಿರುವ ಕಾರಣ ಸ್ಥಳಾವಕಾಶದ ಸಮಸ್ಯೆ ಹಾಗೂ ಸೂಕ್ತ ಸೌಲಭ್ಯಗಳಿಲ್ಲದೆ ಸಮಸ್ಯೆ ಎದುರಾಗಿದೆ. ಅಲ್ಲದೆ ಕಚೇರಿ ಸಿಬ್ಬಂದಿ ಕೂಡ ಜಾಗದ ಕೊರತೆಯಿಂದ ಸುಗಮವಾಗಿ ಕಾರ್ಯ ನಿರ್ವಹಿಸಲು ತೊಂದರೆ ಪಡುವಂತಾಗಿದೆ ಎಂದಿದ್ದಾರೆ.
ನೂತನವಾಗಿ ನಿರ್ಮಿಸಿರುವ ಪಾಸ್ ಪೋರ್ಟ್ ಕಚೇರಿ ತುಂಬ ವಿಶಾಲವಾಗಿದ್ದು, ಪಾರ್ಕಿಂಗ್ ಸೇರಿದಂತೆ ಉತ್ತಮ ಸೌಲಭ್ಯ ಒಳಗೊಂಡಿದೆ. ಹಾಗೂ ನಗರದ ಹೃದಯ ಭಾಗಕ್ಕೆ ಸಮೀಪ ಇರುವುದರಿಂದ ಬೇರೆ ಊರಿನಿಂದ ಬರುವವರಿಗೆ ಎಲ್ಲಾ ರೀತಿಯ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ. ಜನರ ತೆರಿಗೆ ಹಣದಿಂದ ನಿರ್ಮಿಸಿರುವ ಕಟ್ಟಡ ಪಾಳು ಬೀಳುವ ಮುನ್ನ ಕೂಡಲೇ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಉಪಯೋಗವಾಗುವಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.