ಕೊರೋನಾ ವರದಿ ನೆಗೆಟಿವ್ ಬಂದರೂ ವ್ಯಕ್ತಿ ಆತ್ಮಹತ್ಯೆಗೆ ಶರಣು!
ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕೊರೋನಾ ನೆಗೆಟಿವ್ ಬಂದಿದ್ದರೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು, (ಮೇ.24): ನಗರದಲ್ಲಿ ವ್ಯಕ್ತಿಯೋರ್ವನಿಗೆ ಕೊರೋನಾ ನೆಗೆಟಿವ್ ಎಂದು ವರದಿ ಬಂದರೂ ಆಸ್ಪತ್ರೆಯ ಶೌಚಗೃಹದಲ್ಲಿ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ.
ಕೊರೋನಾ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಈ ವ್ಯಕ್ತಿಗೆ ಮೇ 19ರಂದು ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಮಾದರಿ ಸಂಗ್ರಹಿಸಿ ಚಿಕ್ಕಮಗಳೂರಿನ ಕೆ.ಎಸ್.ಒ. ಕಟ್ಟಡದಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ವರ್ಗಾವಣೆ ಮಾಡಲಾಗಿತ್ತು.
ಭಾನುವಾರವೂ ಕೊರೋನಾ ರಣಕೇಕೆ: ರಾಜ್ಯದಲ್ಲಿ 2 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ನಂತರ ಮೂಲವ್ಯಾಧಿಯಿಂದ ಬಳಲುತ್ತಿದ್ದ ಇವರನ್ನು ಎಂ.ಸಿ.ಎಚ್. ಬ್ಲಾಕ್ನಲ್ಲಿರುವ ಐಸೋಲೇಷನ್ ವಾಡ್ರ್ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಭಾನುವಾರ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಆಸ್ಪತ್ರೆಯ ಸರ್ಜನ್, ಬೆಳಗ್ಗೆ 9ಕ್ಕೆ ನಡೆಯುವ ದೈನಂದಿನ ತಪಾಸಣೆ ವೇಳೆ ಶೌಚಗೃಹದಲ್ಲಿದ್ದರು. ತಪಾಸಣೆಗೆ ಹಾಜರಾಗಲಿಲ್ಲ. 30 ನಿಮಿಷಗಳ ಬಳಿಕ ಕರ್ತವ್ಯ ನಿರತ ವೈದ್ಯರು ರೋಗಿಯನ್ನು ತಪಾಸಣೆ ಮಾಡಲು ಹುಡುಕಿದಾಗ ಶೌಚಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ತಿಳಿಸಿದರು.
ಮೃತ ವ್ಯಕ್ತಿಗೆ ಕೋವಿಡ್19 ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಮೂಲವ್ಯಾಧಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.