ದೇಶಕಾಯುವ ಸೈನಿಕರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಎಂದು ಸಂಸದ ಜಿ.ಎಸ್‌. ಬಸವರಾಜು ತಿಳಿಸಿದರು.

ತುಮಕೂರು (ಜ. 14): ದೇಶಕಾಯುವ ಸೈನಿಕರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ ಎಂದು ಸಂಸದ ಜಿ.ಎಸ್‌. ಬಸವರಾಜು ತಿಳಿಸಿದರು.

ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿ, ಅಖಿಲ ಕರ್ನಾಟಕ ಮಾಜಿ ಸೈನಿಕರು ತುಮಕೂರು ಜಿಲ್ಲಾ ಘಟಕದ ವತಿಯಿಂದ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ, ಮಾಜಿ ಸೈನಿಕರ ಸಂಘದ ವಾರ್ಷಿಕೋತ್ಸವ ಯೋಧನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಾಲ್‌ಬಹುದ್ದೂರ್‌ ಶಾಸ್ತ್ರೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸೈನಿಕರಿಗೆ ಹೆಚ್ಚಿನ ಮನ್ನಣೆ ನೀಡಿದ್ದರು. ದೇಶಪ್ರೇಮ, ಶಿಸ್ತನ್ನು ಸೈನಿಕರು, ಮಾಜಿ ಸೈನಿಕರಿಂದ ನಾವು ಕಲಿಯಬೇಕಿದೆ ಎಂದರು.

ಟೂಡಾ ಅಧ್ಯಕ್ಷ ಎಚ್‌.ಜಿ.ಚಂದ್ರಶೇಖರ್‌ ಮಾತನಾಡಿ, ಮಾಜಿ ಸೈನಿಕರ ಸಂಘಕ್ಕೆ ಅಗತ್ಯ ಸಿಎ ನಿವೇಶನ ಹಾಗೂ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿದ ಲೇಔಟ್‌ಗಳನ್ನು ನಿವೇಶನ ಮೀಸಲಿಡಲು ಸಂಘದ ಜೊತೆ ಚರ್ಚಿಸಲಾಗಿದೆ. ಸಂಘದವರ ಕೋರಿಕೆಯಂತೆ ಹುತಾತ್ಮ ಯೋಧರ ಸ್ಮರಣೆಯಲ್ಲಿ ಅಮರ್‌ಜವಾನ್‌ ಉದ್ಯಾನವನವನ್ನು ನಗರದ ಹೃದಯ ಭಾಗದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಜೆಡಿಎಸ್‌ ನಗರ ವಿಧಾನಸಭಾ ಅಭ್ಯರ್ಥಿ ಗೋವಿಂದರಾಜು ಮಾತನಾಡಿ, ನನಗೆ ಕ್ಷೇತ್ರದ ಜನತೆ ಅವಕಾಶಮಾಡಿಕೊಟ್ಟಲ್ಲಿ ಮುಂದೆ ಮಾಜಿ ಸೈನಿಕರ ಸಂಘದ ಪ್ರತಿನಿಧಿಯೊಬ್ಬರಿಗೆ ಟೂಡಾದಲ್ಲಿ ಒಂದು ಸದಸ್ಯ ಸ್ಥಾನ ಅವರ ಮೂಲಕ ನಿವೇಶನ ಕೊಡಿಸುವ ಭರವಸೆ ನೀಡಿ, ಸೈನಿಕರು ಆಸ್ತಿ ಮಾಡುವುದಿಲ್ಲ, ಬದಲಾಗಿ ದೇಶ, ನಾಡು, ಸಮಾಜಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಾರೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ ಮಾತನಾಡಿ, ನಾವಿಂದು ನೆಮ್ಮದಿಯಿಂದ ಬದುಕಿತ್ತಿದ್ದೇವೆಯೆಂದರೆ ಸೇನೆಯ ಯೋಧರ ತ್ಯಾಗ, ಪರಿಶ್ರಮ ಕಾರಣ. ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲು ಮಾಜಿ ಸೈನಿಕರು ಸಂಘಟಿತರಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಸಿ.ಪಾಂಡುರಂಗ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಡಾ.ಎನ್‌.ಕೆ.ಶಿವಣ್ಣ ಮಾತನಾಡಿ, ಮಾಜಿ ಸೈನಿಕರ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿದೆ. ವೀರಸೌಧವನ್ನು ಮಾಜಿ ಸೈನಿಕರ ಸಂಘಕ್ಕೆ ವಹಿಸಿಕೊಡಬೇಕು ಎಂದು ಒತ್ತಾಯಿಸಿದರು.

ಗ್ರೂಪ್‌ ಕ್ಯಾಪ್ಟನ್‌ ಭಾಸ್ಕರ್‌. ಕುಂಚಿಟಿಗ ಸಂಘದ ಕಾರ್ಯಾಧ್ಯಕ್ಷ ಆರ್‌.ಕಾಮರಾಜ್‌ ಸಂಘದ ಮಾಜಿ ಅಧ್ಯಕ್ಷ ರೇಣುಕಾಪ್ರಸಾದ್‌, ಉಪಾಧ್ಯಕ್ಷ ಬಿ.ಲಿಂಗಣ್ಣ, ಕಾರ್ಯಾಧ್ಯಕ್ಷ ನಾಗರಾಜಯ್ಯ, ಪ್ರ.ಕಾರ್ಯದರ್ಶಿ ನವೀನ್‌, ಕಾರ್ಯದರ್ಶಿ ವೆಂಕಟರಮಣಸ್ವಾಮಿ, ನಟರಾಜು, ಕ್ಯಾಪ್ಟನ್‌ ಟಿ.ಎನ್‌.ಸತ್ಯನಾರಾಯಣ, ಸಿ.ಪಿ.ಮುಕುಂದರಾವ್‌ ಇತರ ಪದಾಧಿಕಾರಿಗಳಿದ್ದರು. ಸುಲೋಚನಾ, ಪ್ರಸನ್ನದೊಡ್ಡಗುಣಿ ನಿರೂಪಿಸಿದರು.

ಯೋಧರು ಹಾಗೂ ಅವರ ಸಮವಸ್ತ್ರಕ್ಕೆ ಸರ್ವತ್ರ ಬೆಲೆಯಿದೆ. ಅಮಾನಿಕೆರೆ ಅಂಗಳದ ಎತ್ತರದ ರಾಷ್ಟ್ರಧ್ವಜದ ಬಳಿ ಹುತಾತ್ಮ ಸ್ಮಾರಕ ನಿರ್ಮಿಸುವ ಪ್ರಸ್ತಾವನೆಯಿದ್ದು, ಮಾಜಿ ಸೈನಿಕರ ಸಂಘದವರು ಕೋರಿರುವ ವೀರಸೌಧದಲ್ಲಿ ಸ್ಥಳಾವಕಾಶ ಬೇಡಿಕೆ ಸಂಬಂಧ ಡಿಸಿ ಜೊತೆ ಸಭೆ ನಿಗದಿ ಮಾಡಿ ಚರ್ಚಿಸಲಾಗುವುದು. ನಿವೇಶನಗಳ ಹಂಚಿಕೆಗೂ ಜಿಲ್ಲಾಡಳಿತದ ಮೂಲಕವೇ ಪ್ರಸ್ತಾವನೆ ಸಲ್ಲಿಸಬೇಕು

- ಜಿ.ಬಿ.ಜ್ಯೋತಿಗಣೇಶ್‌, ಶಾಸಕ