ಮಳೆ ಇಲ್ಲದೆ ಒಣಗುತ್ತಿರುವ ಹೂ, ತರಕಾರಿ ಬೆಳೆ : ಹೀಗೆ ಆದ್ರೆ ಮುಂದೇನು..?
ಜಿಲ್ಲೆಯಲ್ಲಿ ವರುಣದೇವ ಮಳೆ ಕರುಣಿಸದೆ ಬರಿ ಮೋಡ ಮುಸುಕಿದ ವಾತಾವರಣದ ಜೊತೆ ತುಂತುರು ಮಳೆ ಸಿಂಚನವನ್ನಷ್ಟೆ ನೀಡಿ, ಮರೆಯಾಗಿದ್ದು ಬಿಸಿಲಿನ ಧಗೆ ಇನ್ನಷ್ಟು ಹೆಚ್ಚಾಗಿದ್ದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಚಿಕ್ಕಬಳ್ಳಾಪುರ ; ಜಿಲ್ಲೆಯಲ್ಲಿ ವರುಣದೇವ ಮಳೆ ಕರುಣಿಸದೆ ಬರಿ ಮೋಡ ಮುಸುಕಿದ ವಾತಾವರಣದ ಜೊತೆ ತುಂತುರು ಮಳೆ ಸಿಂಚನವನ್ನಷ್ಟೆ ನೀಡಿ, ಮರೆಯಾಗಿದ್ದು ಬಿಸಿಲಿನ ಧಗೆ ಇನ್ನಷ್ಟು ಹೆಚ್ಚಾಗಿದ್ದು ಕೃಷಿಕರಲ್ಲಿ ಆತಂಕ ಮೂಡಿಸಿದೆ.
ಈ ಭಾರಿ ಫೆಬ್ರವರಿ, ಮಾರ್ಚ್. ಏಪ್ರಿಲ್ ಮತ್ತು ಮೇ ಮಾಹೇಯಿಂದಲೇ ಎಂದೆಂದೂ ಕಂಡರಿಯದ ಬಿಸಿಲಿನ ತಾಪಮಾನಕ್ಕೆ ನಗರ ಪ್ರದೇಶವು ಸೇರಿದಂತೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ತಮ್ಮ ಜಮೀನಿನಲ್ಲಿ ಇಟ್ಟ ಬೆಳೆ ಇಟ್ಟಲ್ಲೇ ಒಣಗಿವೆ. ಕಳೆದ ಸಾಲಿನಲ್ಲಿನ ಬರದಿಂದ ತ್ತರಿಸಿದ್ದ ಜಿಲ್ಲೆಯು ಇನ್ನು ಮಳೆ ಆರಂಭವಾಗುವ ದಿನಗಳ ಹಿನ್ನೆಲೆಯಲ್ಲಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಖರೀದಿಸಿದ್ದ ಬಿತ್ತನೆ ಬೀಜಗಳನ್ನು ಹಾಗೆಯೆ ಇಟ್ಟುಕೊಂಡು ಕಾಯುವಂತಾಗಿದೆ.
ಜಿಲ್ಲೆಯಲ್ಲಿ ಮಳೆಯ ಸುಳಿವಿಲ್ಲ
ಬಯಲುಸೀಮೆ ಪ್ರದೇಶದ ಚಿಕ್ಕಬಳ್ಳಾಪುರ ನೆರೆ ಜಿಲ್ಲೆಗಳಾದ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಂದೆರಡು ದಿನಗಳಿಂದ ಮಳೆ ಬಂದು ತಂಪು ಎರೆದಿದ್ದರೂ ಚಿಕ್ಕಬಳ್ಳಾಪುರ ಭಾಗಕ್ಕೆ ಮಳೆ ಬಾರದೆ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದೆ.
ಚಿಕ್ಕಬಳ್ಳಾಪುರ ನಗರ ಸೇರಿದಂತೆ ಈ ಭಾಗದ ಎಲ್ಲ ಗ್ರಾಮಗಳಲ್ಲಿ ಸಾಮಾನ್ಯವಾಗಿ ಕೆಂಪುಭೂಮಿ ಯಿರುವುದರಿಂದ ತಮ್ಮ ಸಾಂಪ್ರದಾಯಿಕ ರಾಗಿ, ಜೋಳ, ದ್ರಾಕ್ಷಿ, ಹಿಪ್ಪು ನೇರಳೆ ಬಗೆ ಬಗೆಯ ಹೂವು, ತರಕಾರಿಗಳನ್ನು ತಮ್ಮ ಜೀವನಾಧಾರ ಬೆಳೆಯನ್ನಾಗಿ ಬೆಳೆಯುತ್ತಾರೆ. ಇನ್ನು ತರಕಾರಿ ಮತ್ತು ದ್ರಾಕ್ಷಿ ಹಾಗೂ ಹೂವು ಕೃಷಿಕರ ಸಂಕಷ್ಟವಂತೂ ಹೇಳತೀರದಾಗಿದೆ.
ಒಣಗಿದ ಹೂ ತೋಟಗಳು
ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೂವಿನ ತೋಟ ಸಂಪೂರ್ಣವಾಗಿ ಒಣಗಿದ್ದು ಸುಳಿಕಳಚಿ ಬಿದ್ದಿವೆ. ಇದ್ದ ಬದ್ದ ನೀರು ಉಣಿಸಿ ತೋಟ ಉಳಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಟ್ಟರೂ ಬಿಸಿಲಿನ ಬೇಗೆಗೆ ಹೂವಿನ ತೋಟಗಳು ಕಮರಿ ಹೋಗುತ್ತಿವೆ. ಇದ್ದ ಹಣವನ್ನೆಲ್ಲಾ ಬೋರ್‌ವೆಲ್ ಕೊರೆಸಲು ಸುರಿದು, ಟ್ಯಾಂಕ್ ಮೂಲಕ ತೋಟಗಳಲ್ಲಿ ಪ್ಲಾಸ್ಟಿಕ್ ತೊಟ್ಟಿ ನಿರ್ಮಿಸಿ ಇಲ್ಲಿವರಗೆ ದ್ರಾಕ್ಷಿ, ಹಿಪ್ಪುನೆರಳೆ ಹೂವಿನ ತೋಟಗಳಿಗೆ ನೀರು ಕೊಟ್ಟ ಉಳ್ಳವರು ಈಗ ಕೈಚಲ್ಲಿದ್ದಾರೆ.
ಸಾಮಾನ್ಯವರ್ಗದ ರೈತರು ಕನಿಷ್ಠ ತಮ್ಮ ಜಾನುವಾರು ಸಂರಕ್ಷ ಣೆಗೆ ಮೇವನ್ನಾದರೂ ಬೆಳೆಯೋಣ ಎಂದು ಗೋವಿನ ಜೋಳ, ಮೆಕ್ಕೆಜೋಳ, ರಾಗಿಯನ್ನಾದರೂ ಬೆಳೆಯಲು ಕನಿಷ್ಠ ಮಳೆ ಬಂದರೆ ಸಾಕು ಇಲ್ಲದಿದ್ದರೆ ನಮ್ಮ ಜಾನುವಾರು ಮಾರಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಿಕೆಬಿ-2 ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿ ಬಿಸಿಲಿಗೆ ಚೆಂಡು ಹೂವಿನ ತೋಟ ಸಂಪೂರ್ಣ ಒಣಗಿರುವುದು.