ನಗರದ ಬಸವೇಶ್ವರ ಗಂಜ್‌ನಲ್ಲಿರುವ ರೈತ ಭವನವು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಹಳ್ಳಿಗಳಿಂದ ಮಾರುಕಟ್ಟೆಗೆ ಬರುವ ರೈತರು ತಂಗಲು ಅನುಕೂಲವಾಗಿರಬೇಕಾಗಿದ್ದ ಈ ಕಟ್ಟಡ ನಿರುಪಯುಕ್ತವಾಗಿದೆ.

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ (ಮೇ.26) : ನಗರದ ಬಸವೇಶ್ವರ ಗಂಜ್‌ನಲ್ಲಿರುವ ರೈತ ಭವನವು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಹಳ್ಳಿಗಳಿಂದ ಮಾರುಕಟ್ಟೆಗೆ ಬರುವ ರೈತರು ತಂಗಲು ಅನುಕೂಲವಾಗಿರಬೇಕಾಗಿದ್ದ ಈ ಕಟ್ಟಡ ನಿರುಪಯುಕ್ತವಾಗಿದೆ.

ರೈತ ಭವನ ಕಟ್ಟಡ 1983ರಲ್ಲಿ 1.10 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕೃಷಿ ಮಾರುಕಟ್ಟೆಗೆ ದವಸ ಧಾನ್ಯ ಮಾರಾಟ, ಖರೀದಿಗೆ ಹಾಗೂ ಸಂತೆಗೆ ಮತ್ತಿತರ ಕಾರ್ಯಗಳಿಗೆ ಬರುವ ಗ್ರಾಮೀಣ ಭಾಗದ ರೈತರು ಉಳಿದುಕೊಳ್ಳಲು ರೈತ ಭವನ ಅನುಕೂಲವಾಗಿತ್ತು. ಆದರೆ, ವ್ಯವಸ್ಥಿತ ಸೌಲಭ್ಯಗಳಿಲ್ಲದೆ ರೈತರಿಗೆ ಉಪಯೋಗಕ್ಕೆ ಬಾರದಂತಾಗಿದೆ.

ಅಕಾಲಿಕ ಮಳೆಗೆ ಬೆಳೆ ಹಾನಿ; ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ!

ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯಲ್ಲಿ 40 ಜನ ಕಮಿಷನ್‌ ಏಜೆಂಟರು, 160 ಟ್ರೇಡರ್ಸ್‌ ಲೈಸೆನ್ಸ್‌ ಹೊಂದಿದ್ದಾರೆ. ಶಹಾಪುರ ತಾಲೂಕಿನಲ್ಲಿ 43856 ಮತ್ತು ವಡಗೇರಾ ತಾಲೂಕಿನಲ್ಲಿ 30058 ರೈತ​ರು ಇದ್ದಾರೆ.

ನಿರ್ವಹಣೆ ಕೊರತೆ:

ರೈತ ಭವನ ಕಟ್ಟಡವು ಸೂಕ್ತ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ಬಂದು ತಲುಪಿದ್ದು, ರೈತರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣವೆಂಬುದು ರೈತ ಸಂಘಟನೆಗಳ ಆರೋಪವಾಗಿದೆ.

ಅನೈತಿಕ ಚಟುವಟಿಕೆಗಳ ತಾಣ:

ಎರಡು ಅಂತಸ್ತಿನ ಸುಸಜ್ಜಿತವಾದ ಮೂಲ ಸೌಲಭ್ಯಗಳಿಂದ ನಿರ್ಮಿತವಾಗಿರುವ ರೈತ ಭವನವು ಈಗ ಪಾಳು ಬಂಗಲೆಯಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ. ಸ್ವಚ್ಛತೆ ಸೇರಿ ಮತ್ತಿತರೆ ನಿರ್ವಹಣೆ ಇಲ್ಲದೇ ಕಟ್ಟಡ ಹಾಳಾಗಿದೆ. ರೈತ ಭವನದ ಸುತ್ತಲೂ ಗಿಡಗಂಟಿಗಳು ಬೆಳೆದು ಅಸಹ್ಯ ಹುಟ್ಟಿಸುತ್ತಿವೆ.

ರೈತ ಭವನವಿದೆವೆನ್ನುವುದೆ ಮರೆತ ರೈತರು:

ಪ್ರಾರಂಭದಲ್ಲಿ ರೈತ ಭವನದಲ್ಲಿ ರೈತರು ಉಳಿದುಕೊಳ್ಳುತ್ತಿದ್ದರು. ಆದರೆ, ಕೆಲ ವರ್ಷಗಳಿಂದ ಯಾವೊಬ್ಬ ರೈತನು ಉಳಿದುಕೊಂಡ ದಾಖಲೆಗಳಿಲ್ಲ. ಉಪಯೋಗಕ್ಕೆ ಬಾರದ ಕಟ್ಟಡ ಇದಾಗಿದ್ದು, ಭವನದಲ್ಲಿ ವಿದ್ಯುತ್‌ ಸಂಪರ್ಕದ ತಂತಿ, ಬೋರ್ಡ್‌ಗಳು ಕೆಲವೆಡೆ ಕಿತ್ತು ಹೋಗಿವೆ. ಮಂಚ, ಗಾದೆಗಳು ಹಾಳಾಗಿವೆ. ನೀರಿನ ಪೈಪ್‌ಗಳು ಕಟ್ಟಾಗಿ ಬಿದ್ದಿವೆ. ಬಹುತೇಕ ರೈತರಿಗೆ ಭವನವಿದೆ ಎನ್ನುವುದು ಮರೆತು ಹೋಗಿದ್ದಾರೆ.

ಬಿಕೋ ಎನ್ನುತ್ತಿರುವ ಕಟ್ಟಡ:

ಮೂಲ ಸೌಕರ್ಯಗಳ ಕೊರತೆಯಿಂದ ರೈತ ಭವನ ಕಟ್ಟಡ ಬಿಕೋ ಎನ್ನುತ್ತಿದೆ. ಕೋಣೆಗಳಿವೆ. ಈ ಕಟ್ಟಡದಲ್ಲಿ ಸಣ್ಣಪುಟ್ಟರಿಪೇರಿ ಕಾಮಗಾರಿಗಳು ಕೈಗೊಂಡಿದ್ದರೆ ಕಟ್ಟಡ ಬಾಳಿಕೆ ಬರುತ್ತಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ನಿರ್ವಹಣೆ ಇಲ್ಲದೇ ಕಟ್ಟಡವು ಹಾಳು ಕೊಂಪೆಯಾಗಿದೆ. ಒಟ್ಟಿನಲ್ಲಿ ಕಟ್ಟಡ ಭೂತ ಬಂಗಲೆಯಂತಾಗಿದೆ ಎಂದು ತಿಪ್ಪನಹಳ್ಳಿ ಗ್ರಾಮದ ರೈತ ನಿಂಗಣ್ಣ ನಾಟೇಕಾರ್‌ ತಿಳಿಸಿದ್ದಾರೆ.

ಕಟ್ಟಡ ಕುಸಿಯುವ ಆತಂಕ:

ಕಟ್ಟಡ ಚಾವಣಿ ಬಿರುಕು ಬಿಟ್ಟು ಉದುರಿ ಬೀಳುತ್ತಿದೆ. ಕಟ್ಟಡದ ಸುತ್ತಲೂ ಗಿಡಗಂಟಿ ಬೆಳೆದು ನಿಂತಿವೆ. ತೇವಾಂಶದಿಂದ ಕಟ್ಟಡದಿಂದ ಗೋಡೆ ಸಂಪೂರ್ಣ ಶಿಥಿಲವಾಗಿದೆ. ತ್ಯಾಜ್ಯ ಸಂಗ್ರಹ, ಮಳೆ ನೀರು ಸಂಗ್ರಹ, ವಿಷ ಜಂತುಗಳ ಹಾವಳಿ, ಹಂದಿಗಳ ತಾಣವಾಗಿದ್ದು, ಕಟ್ಟಡ ಕುಸಿದು ಬೀಳುವ ಹಂತಕ್ಕೆ ತಲುಪಿದೆ.

ಒತ್ತಾಯ:

ಮಾರುಕಟ್ಟೆಗೆ ಬರುವ ರೈತರಿಗೆ ವಸತಿ ಒದಗಿಸಿ ದವಸ ಧಾನ್ಯ ಮಾರಾಟ ಮಾಡಲು, ಕೊಳ್ಳಲು ಬರುವ ರೈತರ ವಾಸಕ್ಕೆ ರೈತ ಭವನದ ಅವಶ್ಯಕತೆ ತುಂಬಾ ಇದ್ದು, ಹೀಗಿರುವ ರೈತ ಭವನ ದುರಸ್ತಿ ಮಾಡಿ ಇಲ್ಲವೇ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ರೈತರ ವಾಸಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ರೈತರ ಒತ್ತಾಯವಾಗಿದೆ.

ಅರಣ್ಯ ಇಲಾಖೆ ಸಸಿಗಳ ಬೆಲೆ ವಿಪರೀತ ಹೆಚ್ಚಳ: ಅನ್ನದಾತರ ಆಕ್ರೋಶ

ರೈತ ಭವನ ಕಟ್ಟಡದ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದ್ದು, ಅವರು ಸ್ಪಂದಿಸಿದ್ದಾರೆ. ಎಲ್ಲಾ ಕಡೆ ಈಗ ಸಾಕಷ್ಟುವಾಹನಗಳ ಸೌಕರ್ಯ ಇರುವುದರಿಂದ ಯಾವ ರೈತರು ಉಳಿದುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ. ಅಲ್ಲದೆ ನಮ್ಮ ಕಚೇರಿಯಲ್ಲಿ ತಾತ್ಕಾಲಿಕವಾಗಿ ರೈತರು ಉಳಿದುಕೊಳ್ಳಲು ಮೂರು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ

- ಶಿವಕುಮಾರ್‌ ದೇಸಾಯಿ, ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಶಹಾಪುರ.

---

ಹೆಸರಿಗಷ್ಟೇ ರೈತ ಭವನವಿದೆ. ಶಿಥಿಲಗೊಂಡಿರುವ ಕಟ್ಟಡವನ್ನು ಶೀಘ್ರವೇ ದುರಸ್ತಿ ಮಾಡಿಸಿ, ಇಲ್ಲವೇ ಹೊಸ ಕಟ್ಟಡ ನಿರ್ಮಾಣ ಮಾಡಿ ಹಳ್ಳಿಗಳಿಂದ ಬರುವ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಕೃಷಿ ಉತ್ಪನ್ನ ಮಾರುಕಟ್ಟೆಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ

- ಬಸವರಾಜ್‌ ಭಜಂತ್ರಿ ಮತ್ತು ಹಣಮಂತ ದೊರೆ, ರೈತ ಮುಖಂಡರು ಶಹಾಪುರ