ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು ಸಿಡಿ ಫ್ಯಾಕ್ಟರಿ ಮೂಲಕ ಷಡ್ಯಂತ್ರ ನಡೆಯುತ್ತಿದೆ ಎಂದು ಬಿ.ಶ್ರೀರಾಮುಲು ಆರೋಪಿಸಿದ್ದಾರೆ. ನಕಲಿ ವಿಡಿಯೋ ಬಳಸಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹೊಸಪೇಟೆ: ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಆಗದಂತೆ ರಾಜಕೀಯ ಮಾಡಿಕೊಂಡು ಬಂದ ಹಿಂದುಳಿದ ವರ್ಗದ ದೊಡ್ಡ ನಾಯಕ. ಅವರ ವೈಯಕ್ತಿಕ ಜೀವನಕ್ಕೆ ಕಪ್ಪು ಚುಕ್ಕೆ ತರಲು ಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ರಮೇಶ್ ಜಾರಕಿಹೊಳಿ ವಿಡಿಯೋ ಪ್ರಕರಣ ನಡೆದಿತ್ತು. ಕಾಂಗ್ರೆಸ್ ಮುಖಂಡ ರಾಜಣ್ಣ ವಿರುದ್ಧವೂ ಷಡ್ಯಂತ್ರ ನಡೆದಿತ್ತು.ಇದಕ್ಕೂ ಮೊದಲು ಅನೇಕ ಜನರಿಗೆ ಇದೇ ರೀತಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ರೀತಿ ಈಗ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದ್ದಾರೆ. ಈಗ ಸಿದ್ದರಾಮಯ್ಯ ಪಾಳೆ ಬಂದಿದೆ. ಸಿದ್ದರಾಮಯ್ಯ ತೇಜೋವಧೆ ಮಾಡಲು ತಂತ್ರಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಯಾವ ವಿಡಿಯೋ ಇರಲು ಸಾಧ್ಯವಿಲ್ಲ
ಸಿದ್ದರಾಮಯ್ಯ ರಾಜ್ಯ ರಾಜಕಾರಣದ ಮಾಸ್ ಲೀಡರ್. ಸಿದ್ದರಾಮಯ್ಯ ಅವರನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯ ಅವರದ್ದು ಎನ್ನಲಾಗುವ ಯಾವ ವಿಡಿಯೋ ಇರಲು ಸಾಧ್ಯವಿಲ್ಲ. ಅದೇನಿದ್ದರೂ ತಂತ್ರಜ್ಞಾನ ಬಳಸಿ ಸೃಷ್ಟಿಸಿದ ವಿಡಿಯೊ ಇರಬಹುದು. ಅದನ್ನು ಇಟ್ಟುಕೊಂಡು ಅಧಿಕಾರ ಹಸ್ತಾಂತರಿಸಿದ ನಂತರವೂ ಬೆದರಿಸಲಾಗುತ್ತಿದೆ ಎಂದು ಹೇಳಿದರು.
ವೈಯಕ್ತಿಕ ಜೀವನದೊಳಗೆ ಇಣುಕಿ ನೋಡುವ ಪ್ರಯತ್ನ
ರಾಜಕಾರಣದಲ್ಲಿ ನಾನಾ ವರ್ಗದ ಜನರನ್ನು ಭೇಟಿ ಮಾಡಬೇಕಿರುತ್ತದೆ. ವೈಯಕ್ತಿಕ ಜೀವನದೊಳಗೆ ಇಣುಕಿ ನೋಡುವ ಪ್ರಯತ್ನ ಯಾರೂ ಮಾಡಬಾರದು. ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರುವ ಕೆಲಸ ಆಗುತ್ತಿದೆ. ಅದೇ ವೀಡಿಯೋ ಇಟ್ಟುಕೊಂಡು ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರ ಬೇಡಿಕೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿದೆ. ರಾಜ್ಯ ಸರ್ಕಾರ ಸಹ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.


