Chikkaballapur: ಭಾರೀ ಮಳೆಗೆ ಸೀತಾಫಲ ಭರ್ಜರಿ ಫಸಲು
- ಭಾರೀ ಮಳೆಗೆ ಸೀತಾಫಲ ಭರ್ಜರಿ ಫಸಲು
- ಗ್ರಾಮೀಣ ರೈತಾಪಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಕೈ ತುಂಬ ಕಾಸು
- ನಗರದಲ್ಲಿ ಹಣ್ಣಿಗೆ ಉತ್ತಮ ಬೇಡಿಕೆ
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಸೆ.21) : ಜಿಲ್ಲೆಯಲ್ಲಿ ಸತತ ಎರಡು, ಮೂರು ತಿಂಗಳಿಂದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿದ್ದ ಪರಿಣಾಮ ಇದೀಗ ನಿಸರ್ಗದತ್ತವಾಗಿ ಸಿಗುವ ಸೀತಾಫಲ ಹಣ್ಣುಗಳ ಭರ್ಜರಿ ಫಸಲು ಜಿಲ್ಲಾದ್ಯಂತ ಕಾಣಿಸಿಕೊಂಡಿದೆ. ಹೌದು, ಮಳೆಗಾಲದ ವಿಶೇಷ ಅತಿಥಿ ಎಂದೇ ಕರೆಯುವ ಸೀತಾಫಲ ಹಣ್ಣಿಗೆ ರೈತಾಪಿ ವಲಯದಲ್ಲಿ ವಿಶೇಷ ಸ್ಥಾನ ಇದೆ. ಕಾಡಿಂಚಿನಲ್ಲಿ ಅದರಲ್ಲೂ ಬೆಟ್ಟ, ಗುಡ್ಡಗಳಲ್ಲಿ ಮರಗಳ ಪೊದೆಗಳಲ್ಲಿ ಅಪರೂಪಕ್ಕೆ ಕಂಡು ಬರುವ ಈ ಸೀತಾಫಲ ಹಣ್ಣುಗಳು ರುಚಿಯಲ್ಲಿ ಯಾವ ಹಣ್ಣುಗಳಗಿಂತ ಕಡಿಮೆ ಇಲ್ಲ.
ತಿನ್ನಲು ಬಲು ರುಚಿ, ಆರೋಗ್ಯಕ್ಕೂ ಹಿತ ಸೀತಾಫಲ..!
ಹುಡುಕಾಡಿ ಹಣ್ಣು ಸಂಗ್ರಹಿಸಿ ಮಾರಾಟ:
ಜಿಲ್ಲೆಯಲ್ಲಿ ಸತತವಾಗಿ ಮಳೆ ಆಗುತ್ತಿರುವ ಪರಿಣಾಮ ಈ ಬಾರಿ ನಿರೀಕ್ಷೆಗೂ ಮೀರಿ ಸೀತಾಫಲ ಗಿಡಗಳು ಫಸಲು ಬಿಟ್ಟಿವೆ. ಗ್ರಾಮೀಣ ಭಾಗದ ಕುರಿ, ಮೇಕೆ, ದನ ಕಾಯುವ ಹುಡುಗರಿಗೆ ಹಾಗೂ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತಾಪಿ ಕೂಲಿ ಕಾರ್ಮಿಕರಿಗೆ ಸೀತಾಫಲ ಹಣ್ಣುಗಳು ಕಾಶ್ಮೀರ ಸೇಬುನಷ್ಟೆರುಚಿ ನೀಡುವ ಮೂಲಕ ಹಸಿವಿನ ದಾಹ ನೀಗಿದರೆ, ಮತ್ತೊಂದಡೆ ಸೀತಾಫಲ ಹಣ್ಣುಗಳನ್ನು ದಿನವೀಡಿ ಹುಡುಕಾಡಿ ಕಿತ್ತು ತಂದು ಅವುಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಪಾದನೆಯಲ್ಲಿ ತೊಡಗಿದ್ದಾರೆ. ಮೊದ ಮೊದಲು ಸೀತಾಫಲ ಹಣ್ಣುಗಳು ಸಾಕಷ್ಟುಅಗ್ಗದ ದರದಲ್ಲಿ ಗ್ರಾಹಕರಿಗೆ ಕೈಗೆಟುಕುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅವು ಮರ ಸೇಬು, ಆ್ಯಪಲ್, ಕಿತ್ತಳೆ, ದ್ರಾಕ್ಷಿ, ಪಪ್ಪಾಯಿ, ಮಾವು ಹಣ್ಣಿನಷ್ಟೇ ಬೆಲೆ ಹೆಚ್ಚಿಕೊಂಡು ಗ್ರಾಹಕರಿಗೆ ಹೊರೆಯಾಗಿವೆ.
ವಾಣಿಜ್ಯ ಬೆಳೆ ಆಗಲಿಲ್ಲ: ವಿಪರ್ಯಾಸವೆಂದರೆ ಜಿಲ್ಲೆಯಲ್ಲಿ ಇಂದಿಗೂ ಕೂಡ ಸೀತಾಫಲ ಗಿಡಗಳನ್ನು ರೈತರು ಒಂದು ವಾಣಿಜ್ಯ ಬೆಳೆಯಾಗಿ ಬೆಳೆಯುವುದಕ್ಕೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ರೈತರಿಗೆ ಸಿಗದಿರುವುದು ಎದ್ದು ಕಾಣುತ್ತಿದೆ. ಮಳೆಗಾಲದಲ್ಲಿ ಮಾತ್ರ ಸೀತಾಫಲ ಹಣ್ಣಿನ ರುಚಿಯನ್ನು ಸವಿಯಬೇಕಿದೆ.
ಜಿಲ್ಲಾದ್ಯಂತ ಎಲ್ಲಿ ನೋಡಿದರೂ ಸೀತಾಫಲ ಹಣ್ಣುಗಳ ಕಾರುಬಾರು ಜೊರಾಗಿದೆ. ವಯೋ ವೃದ್ದರು, ರೈತರು, ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಗ್ರಾಮೀಣ ಭಾಗದ ಬೆಟ್ಟಗುಡ್ಡಗಳಲ್ಲಿ ಸಿಗುತ್ತಿರುವ ಸೀತಾಫಲ ಹಣ್ಣುಗಳನ್ನು ಹುಡಕಿ ಕಿತ್ತು ತಂದು ನಗರದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ ಸಮೀಪ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಬದುಕು ಸಾಗಿಸುತ್ತಿದ್ದಾರೆ. ವಯೋವೃದ್ಧ ಮಹಿಳೆಯರು ಹೆಚ್ಚಾಗಿ ಸೀತಾಫಲ ಹಣ್ಣುಗಳ ಮಾರಾಟದಲ್ಲಿ ತೊಡಗಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದೆ.
ಸೀತಾಫಲ ಕೆಜಿಗೆ 50, 60 ರು: ಕೆಜಿ ಸೀತಾಫಲ ಮಾರುಕಟ್ಟೆಯಲ್ಲಿ 50 ರಿಂದ 60 ರು, ವರೆಗೂ ಮಾರಾಟ ಆಗುತ್ತಿದೆ. ಹಿಂದಿನ ವರ್ಷಗಳಲ್ಲಿ ಸೀತಾಫಲಕ್ಕೆ ಅಷ್ಟೊಂದು ಬೇಡಿಕೆ ಇರಲಿಲ್ಲ. ಬೆಲೆ ಕಡಿಮೆ ಇತ್ತು. ಆದರೆ ಇತ್ತೀಚೆಗೆ ಹಲವು ವೈದ್ಯಕೀಯ ಸಂಶೋಧನೆಗಳ ಪ್ರಕಾರ ಸೀತಾಫಲ ಆರೋಗ್ಯಕ್ಕೆ ಉತ್ತಮ ಎಂಬ ವರದಿ ಹಿನ್ನೆಲೆಯಲ್ಲಿ ಸಾಕಷ್ಟುಬೇಡಿಕೆ ಇರುವ ಕಾರಣಕ್ಕೆ ನಗರದ ಜನತೆ ಹುಡುಕಾಟ ನಡೆಸಿ ಸೀತಾಫಲ ಹಣ್ಣುಗಳ ಖರೀದಿಯಲ್ಲಿ ತೊಡಗಿರುವ ಕಾರಣ ಈಗ ಎಲ್ಲಿಲ್ಲದ ಬೇಡಿಕೆ ಇದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಾರಾಟ ಜೋರಾಗಿಯೆ ಸಾಗಿದೆ. ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?