ಕೊಪ್ಪಳ: ಅಸ್ಪೃಶ್ಯತೆ ಕೇಸ್, ಜೀವಾವಧಿಗೆ ಗುರಿಯಾದ 98 ಮಂದಿಗೆ ಸಿಕ್ತು ಬೇಲ್!
ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 98 ಜನರಿಗೆ ನೀಡಿದ್ದ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ನೀಡಿದ್ದ 5 ವರ್ಷ ಜೈಲು ಶಿಕ್ಷೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ, ಅರ್ಜಿ ಸಲ್ಲಿಸಿದ್ದ 99 ಮಂದಿಗೆ ಜಾಮೀನು ಮಂಜೂರು ಮಾಡಿದೆ.
ಕೊಪ್ಪಳ(ನ.14): ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ನಡೆದಿದ್ದ ಅಸ್ಪೃಶ್ಯತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 98 ಜನರಿಗೆ ನೀಡಿದ್ದ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ನೀಡಿದ್ದ 5 ವರ್ಷ ಜೈಲು ಶಿಕ್ಷೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲದೆ, ಅರ್ಜಿ ಸಲ್ಲಿಸಿದ್ದ 99 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಈ ಪೈಕಿ, 98 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಏನಿದು ಪ್ರಕರಣ?:
ಮರಕುಂಬಿ ಗ್ರಾಮದಲ್ಲಿ ಕ್ಷೌರದಂಗಡಿ ಮತ್ತು ಹೋಟೆಲ್‌ಗಳಿಗೆ ದಲಿತರಿಗೆ ಪ್ರವೇಶ ನೀಡದೆ ಇರುವ ಕುರಿತು ಹಲವು ವರ್ಷಗಳಿಂದ ಗಲಾಟೆಯಾಗುತ್ತಿತ್ತು. ಈ ಮಧ್ಯೆ, 2014ರ ಆ.28ರಂದು ಗಂಗಾವತಿ ನಗರದ ಶಿವ ಚಿತ್ರಮಂದಿರದಲ್ಲಿ ಚಿತ್ರ ವೊಂದರ ಟಿಕೆಟ್ ತೆಗೆಸುವ ವಿಚಾರಕ್ಕೆ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ದಲಿತ ಯುವಕರ ನಡುವೆ ಜಗಳ ನಡೆದಿತ್ತು. ಇದಾದ ಮೇಲೆ ಮಂಜುನಾಥ ಗ್ರಾಮಕ್ಕೆ ಬಂದು ವಿಷಯ ತಿಳಿಸುತ್ತಿದ್ದಂತೆ ಸವರ್ಣೀಯರು ಕೇರಿಗೆ ನುಗ್ಗಿ ದಾಂಧಲೆ ಮಾಡಿದ್ದರು. ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿ, ಸುಟ್ಟಿದ್ದರು.
ಮರಕುಂಬಿ ಗಲಾಟೆ ಪ್ರಕರಣ: ಕೋರ್ಟ್ ಶಿಕ್ಷೆ ಪ್ರಕಟ ಮಾಡುತ್ತಿದ್ದಂತೆ ಅಪರಾಧಿ ಸಾವು!
ಈ ಪ್ರಕರಣದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2024ರ ಅ.24ರಂದು 101 ಜನರಿಗೆ ಶಿಕ್ಷೆ ಪ್ರಕಟಿಸಿತ್ತು. ಈ ಪೈಕಿ 98 ಮಂದಿಗೆ ಜೀವಾವಧಿ ಹಾಗೂ ಮೂವರಿಗೆ 5 ವರ್ಷಗಳ ಶಿಕ್ಷೆ ಪ್ರಕಟವಾಗಿತ್ತು. ಈ ತೀರ್ಪು ಪ್ರಶ್ನಿಸಿ ಇವರೆಲ್ಲಾ ಧಾರವಾಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ, ಪ್ರಕರಣದ ಎ1 ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿರಲಿಲ್ಲ. ಮತ್ತೊಬ್ಬ ಆರೋಪಿ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಅನಾರೋಗ್ಯದಿಂದ ನಿಧನರಾಗಿದ್ದಾರೆ.