Asianet Suvarna News Asianet Suvarna News

ರಾಜ್ಯದ ರೈತರಿಗೆ 950 ಕೋಟಿ ಬೋನಸ್‌

ಕಬ್ಬು ಬೆಳೆಗಾರ ರೈತರ 39 ದಿನದ ಹೋರಾಟಕ್ಕೆ ಜಯ ಸಂದಿದ್ದು, ರಾಜ್ಯದ ರೈತರಿಗೆ . 950 ಕೋಟಿ ಹಣ ಹೆಚ್ಚುವರಿಯಾಗಿ ಸಿಗುತ್ತದೆ ಎಂದು ರಾಜ್ಯ ಕಬ್ಬು ಬೆಳೆದಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

950 crore bonus for the farmers of the state snr
Author
First Published Jan 3, 2023, 6:31 AM IST

 ಮೈಸೂರು (ಜ.03):  ಕಬ್ಬು ಬೆಳೆಗಾರ ರೈತರ 39 ದಿನದ ಹೋರಾಟಕ್ಕೆ ಜಯ ಸಂದಿದ್ದು, ರಾಜ್ಯದ ರೈತರಿಗೆ Rs 950 ಕೋಟಿ ಹಣ ಹೆಚ್ಚುವರಿಯಾಗಿ ಸಿಗುತ್ತದೆ ಎಂದು ರಾಜ್ಯ ಕಬ್ಬು ಬೆಳೆದಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸತತ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರವು ಟನ್‌ಗೆ   Rs 150 ಹೆಚ್ಚುವರಿ ದರ ನಿಗದಿ ಮಾಡಿ, ಒಟ್ಟಾರೆ ಟನ್‌ ಕಬ್ಬಿಗೆ . 3200 ನೀಡಲು ಆದೇಶ ಹೊರಡಿಸಿರುವುದು ಸ್ವಲ್ಪ ಮಟ್ಟಿಗೆ ರೈತರಿಗೆ ಸಮಾಧಾನವಾಗಿದೆ ಎಂದರು.

ಮೊದಲ ಹಂತದ ಜಯ, ರೈತರ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ರಾಜ್ಯದ ಕಬ್ಬು ಬೆಳೆಗಾರರ ಸತತ ಹೋರಾಟಕೆ ಮಣಿದು ಸರ್ಕಾರ ತಲೆಬಾಗಿದೆ, ಸ್ವಾಭಿಮಾನಿ ರೈತ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ನಡೆಸುತ್ತಿದ್ದ ಕಬ್ಬು ಬೆಳೆಗಾರರ 39 ದಿನದ ಹೋರಾಟ ಕೈ ಬಿಟ್ಟಿದ್ದೇವೆ ಎಂದು.

ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಯಾವುದೇ ಮಾನದಂಡವಿಲ್ಲದೆ, ಯಾರ ಅನುಮತಿ ಇಲ್ಲದೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚವನ್ನು ಪ್ರತಿ ಟೈಮ್‌ಗೆ Rs . 250 ರಿಂದ  300 ಏರಿಕೆ ಮಾಡಿರುವ ಹಣದಲ್ಲಿ ಕಾರ್ಖಾನೆಗಳಿಂದ  Rs 150 ಕಡಿಮೆ ಮಾಡುವ ಮುಖ್ಯಮಂತ್ರಿ ಭರವಸೆ ಜಾರಿಯಾದರೆ, ಕಬ್ಬು ಕಟಾವು ಲಗಣಿ ವಸೂಲಿ ತಪ್ಪಿಸುವ ಕ್ರಮ ಕೈಗೊಂಡರೆ, ರೈತರ ಕಬ್ಬು ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗುವಂತಾಗುತ್ತದೆ. ಈ ಬಗ್ಗೆ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ 20 ದಿನಗಳ ಒಳಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಒಂದು ತಿಂಗಳು ಒಳಗೆ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಎಫ್‌ಆರ್‌ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿ 10.25ಕ್ಕೆ ಏರಿಕೆ ಮಾಡಿರುವುದನ್ನು ಇಳಿಕೆ ಮಾಡಲು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಇತ್ತೀಚೆಗೆ ದೆಹಲಿಯಲ್ಲಿ ಸಂಸದರು ಹಾಗೂ ರೈತ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದರು.

ಕೃಷಿ ಸಾಲ ನೀಡುವಾಗ ಬ್ಯಾಂಕುಗಳು ಸಿಬಿಲ್‌ ಸ್ಕೋರ್‌ ಮಾನದಂಡ ಅಳವಡಿಸಬಾರದು. ಈ ಬಗ್ಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆ ಇದೆ. ಜನವರಿಯಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಆರ್‌ಬಿಐ ಮುಖ್ಯ ವ್ಯವಸ್ಥಾಪಕರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೀಡಿದ್ದಾರೆ ಎಂದರು.

ಡಿಪಿಆರ್‌ ಅನುಮೋದನೆಗೆ ಸ್ವಾಗತ:

ನಾಲ್ಕು ದಶಕಗಳ ಹೋರಾಟದಿಂದ ನನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ್‌ ಜಿಲ್ಲೆಗಳ 390 ಟಿಎಂಸಿ ಕುಡಿಯುವ ನೀರು ಕಳಸಾ- ಬಂಡೂರಿ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ . 1300 ಕೋಟಿ ಡಿಪಿಆರ್‌ ಅನುಮೋದನೆ ಮಾಡಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮ. ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಜ್ಯದ ಜನತೆಗೆ, ರೈತರಿಗೆ ಸಂತೋಷದ ಸಂಗತಿಯಾಗಿದೆ. ಇದು ರೈತರ ಹೋರಾಟಕ್ಕೆ ಸಂದ ಜಯ ಎಂದು ಅವರು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಜಿಲ್ಲಾ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್‌, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮೀಪುರ ವೆಂಕಟೇಶ್‌ ಇದ್ದರು.

ನಂದಿನಿ ಹಾಲು ಮಾರಾಟ ಮಹಾಮಂಡಲದ ಜೊತೆ ಗುಜರಾತಿನ ಅಮೂಲ್‌ ಡೇರಿ ವಿಲೀನ ಬೇಡ. ಖಾಸಗಿಕರಣದ ಲಾಬಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ರಾಜ್ಯದ 36 ಲಕ್ಷ ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದು ಮುಂದೆ ರೈತರಿಗೆ ಮಾರಕವಾಗಲಿದೆ. ನಂದಿನಿ ಹಾಲು ಉತ್ಪಾದಕ ಸದಸ್ಯರ ಜೊತೆ ಹೋರಾಟ ಮಾಡಬೇಕಾಗುತ್ತದೆ.

- ಕುರುಬೂರು ಶಾಂತಕುಮಾರ್‌, ರಾಜ್ಯಾಧ್ಯಕ್ಷ, ರಾಜ್ಯ ಕಬ್ಬು ಬೆಳೆಗಾರರ ಸಂಘ

ನಾಟಕದ ಮಂತ್ರಿ- ಕಿಡಿ

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ನಾಟಕದ ಮಂತ್ರಿ. ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾದ ಮೇಲೆ ಒಮ್ಮೆ ಸಹ ರೈತರ ಸಭೆ ನಡೆಸಿಲ್ಲ. ಇಂತಹ ಸಚಿವರನ್ನು ಬದಲಾಯಿಸಿ, ಬೇರೆಯವರನ್ನು ನೇಮಿಸಬೇಕು. ಅವರೊಬ್ಬ ಬೇಜವಾಬ್ದಾರಿ ಮಂತ್ರಿ ಎಂದು ರಾಜ್ಯ ಕಬ್ಬು ಬೆಳೆದಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಕಿಡಿಕಾರಿದರು.

Follow Us:
Download App:
  • android
  • ios