Asianet Suvarna News Asianet Suvarna News

ಗದಗ: ಮಳೆ ಮುನಿಸು, ಶೇ. 90 ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ, ಅತಂಕದಲ್ಲಿ ಅನ್ನದಾತ..!

ಈಗಾಗಲೇ ಮುಂಗಾರು ಬಿತ್ತನೆಯ ಕೊನೆಯ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ನಂತರ ಬಿತ್ತನೆ ಮಾಡಲು ಹಲವಾರು ದಿನಗಳೇ ಬೇಕಾಗುವ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಬರಗಾಲದ ಛಾಯೆ ಮಧ್ಯೆಯೇ ಮತ್ತಷ್ಟು ಸಾಲ ಮಾಡಿಕೊಂಡು ಒಣ ಮಣ್ಣಿನಲ್ಲಿಯೇ ಬಿತ್ತನೆ ಮಾಡುತ್ತಿದ್ದಾರೆ.

90 Percent Sowing Not Been Done Due to Monsoon Rain Delay at Shirahatti in Gadag
Author
First Published Jul 7, 2023, 11:30 PM IST

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಜು.07):  ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದ್ದರೂ ಅದೇಕೋ ಮಳೆರಾಯ ಶಿರಹಟ್ಟಿತಾಲೂಕಿನತ್ತ ಮುಖಮಾಡುತ್ತಿಲ್ಲ. ಮುಂಗಾರು ಬಿತ್ತನೆಯ ಅವಧಿ ಮುಗಿಯುತ್ತಾ ಬಂದರೂ ಕೇವಲ 105 ಮಿಮೀ ಮಳೆಯಾಗಿದೆ. ಹಾಗಾಗಿ ಶೇ. 90ಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯೇ ಆಗಿಲ್ಲ.

ಬೀಜದ ಮಳೆಗಳು ಎಂದು ಕರೆಯುವ ಅಶ್ವಿನಿ, ಭರಣಿ, ರೋಹಿಣಿ, ಕೃತ್ತಿಕಾ ಮಳೆಯಾಗದೇ ಮುಂಗಾರು ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಜೂನ್‌ 8ರಿಂದ ಪ್ರಾರಂಭವಾಗಿದ್ದ ಮೃಗಶಿರ ಮಳೆ ಕೂಡಾ ಕೇವಲ ಮೋಡಕವಿದ ವಾತಾವರಣ ಹಾಗೂ ಆಗಾಗ್ಗೆ, ಜಿಟಿ ಜಿಟಿ ಉದುರುವುದನ್ನು ಬಿಟ್ಟರೆ ಗಟ್ಟಿಮಳೆ ಇದುವರೆಗೂ ಆಗಿಲ್ಲ.

ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!

719 ಹೆಕ್ಟೇರ್‌ ಬಿತ್ತನೆ:

ತಾಲೂಕು ವ್ಯಾಪ್ತಿಯಲ್ಲಿ 32960 ಹೆಕ್ಟೇರ್‌ ಪ್ರದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಅದಕ್ಕಾಗಿ ಬೇಕಾಗುವಷ್ಟುಬೀಜ, ಗೊಬ್ಬರ ಸಿದ್ಧಪಡಿಸಿಕೊಂಡಿದ್ದರು. ಆದರೆ ಜೂನ್‌ ಅಂತ್ಯದವರೆಗೂ ಶಿರಹಟ್ಟಿ ತಾಲೂಕಿನಲ್ಲಿ ಬಿತ್ತನೆಯಾಗಿರುವುದು ಕೇವಲ 719 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ. ಇದರಲ್ಲಿ ಕೊಳವೆಬಾವಿ ನೀರಾವರಿಯೇ ಸಿಂಹಪಾಲು.

103 ಮಿಮೀ ಮಳೆ ಕೊರತೆ:

ಕೆಂಪು ಮತ್ತು ಕಪ್ಪು ಸೇರಿದಂತೆ ಎರಡೂ ರೀತಿಯ ಅತ್ಯುತ್ತಮ ಕೃಷಿ ಭೂಮಿಯನ್ನು ಹೊಂದಿರುವ ಶಿರಹಟ್ಟಿತಾಲೂಕಿನಲ್ಲಿ ಏಪ್ರಿಲ್‌, ಮೇ, ಜೂನ್‌ ಅವಧಿಯಲ್ಲಿ ತಾಲೂಕಿನಲ್ಲಿ ಒಟ್ಟು ಸರಾಸರಿ 208 ಮಿಮೀ ಮಳೆಯಾಗಬೇಕಿತ್ತು. ಆದರೆ ಮುಂಗಾರು ಪೂರ್ವ ಎಂದು ಪರಿಗಣಿಸುವ ಈ ಮೂರು ತಿಂಗಳಲ್ಲಿ ಆಗಿರುವುದು ಕೇವಲ 105 ಮಿಮೀ ಮಳೆ. ಒಟ್ಟು 103 ಮಿಮೀ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಇಂದಿಗೂ ಕೃಷಿ ಭೂಮಿಗಳು ಬೆಳೆಗಳಿಲ್ಲದೇ ಭಣಗುಡುತ್ತಿವೆ.

ಆಕಾಶದತ್ತ ಅನ್ನದಾತರ ಚಿತ್ತ:

ರೈತರು ಹೊಲಗಳಲ್ಲಿ ಮುಂಬರ್ತಿ ಹೊಡೆದು ಕಸವನ್ನು ಸ್ವಚ್ಛ ಮಾಡಿದ್ದಾರೆ. ಹೊಲದಲ್ಲಿ ಬೆಳೆದ ಕಸವನ್ನು ಮತ್ತೆ ಮತ್ತೆ ಗಳೆ ಹೊಡೆದು ಹಸನ ಮಾಡಿಕೊಂಡು, ಇಂದಲ್ಲ ನಾಳೆ ಮಳೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿಯೇ ದಿನ ದೂಡುತ್ತಿದ್ದಾರೆ. ಮುಂಗಾರು ಮಳೆ ಎಂದರೆ ರೈತರ ವರ್ಷದ ಜೀವನಾಡಿಯಾಗಿದ್ದು, ಆರ್ಥಿಕವಾಗಿ ರೈತರು ಸಬಲರಾಗುವುದೇ ಮುಂಗಾರು ಮಳೆಯ ಆಧಾರದಲ್ಲಿ, ಹಾಗಾಗಿ ಸಂಪೂರ್ಣ ಮಳೆ ಇಲ್ಲದೇ ಇರುವುದು ತಾಲೂಕಿನ ಆರ್ಥಿಕ ಬೆಳವಣಿಗೆಗೆ ದೊಡ್ಡ ಪೆಟ್ಟು ನೀಡಲಿದೆ.

ಒಣ ಮಣ್ಣಿನಲ್ಲಿಯೇ ಬಿತ್ತನೆ

ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿನ ರೈತರು ರಾಜ್ಯದ ಇನ್ನುಳಿದ ಭಾಗಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಧೈರ್ಯ ಮಾಡಿ ಒಣ ಮಣ್ಣಿನಲ್ಲಿಯೇ ಬಿತ್ತನೆ ಮಾಡುತ್ತಿದ್ದಾರೆ. ಬಿತ್ತನೆ ಮಾಡಿದ ನಾಲ್ಕೈದು ದಿನಗಳಲ್ಲಿ ಮಳೆ ಸುರಿದಲ್ಲಿ ಬೀಜಗಳು ಹುಟ್ಟಿಕೊಳ್ಳುತ್ತವೆ. ಈಗಾಗಲೇ ಮುಂಗಾರು ಬಿತ್ತನೆಯ ಕೊನೆಯ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ನಂತರ ಬಿತ್ತನೆ ಮಾಡಲು ಹಲವಾರು ದಿನಗಳೇ ಬೇಕಾಗುವ ಹಿನ್ನೆಲೆಯಲ್ಲಿ ತಾಲೂಕಿನ ರೈತರು ಬರಗಾಲದ ಛಾಯೆ ಮಧ್ಯೆಯೇ ಮತ್ತಷ್ಟು ಸಾಲ ಮಾಡಿಕೊಂಡು ಒಣ ಮಣ್ಣಿನಲ್ಲಿಯೇ ಬಿತ್ತನೆ ಮಾಡುತ್ತಿದ್ದಾರೆ.

ಮಳೆ ಕೊರತೆ: ಕಪ್ಪತ್ತಗುಡ್ಡದಲ್ಲಿ ಕುಡಿವ ನೀರಿಗಾಗಿ ಪರಿತಪಿಸುತ್ತಿರುವ ಪ್ರಾಣಿಗಳು !

ಜಿಲ್ಲೆಯಲ್ಲಿಯೇ ಅತ್ಯಂತ ಕನಿಷ್ಠ

ಪ್ರಸಕ್ತ ಸಾಲಿನ ಮುಂಗಾರು ಶಿರಹಟ್ಟಿ ತಾಲೂಕಿನ ಮೇಲೆ ಎಷ್ಟೊಂದು ಮುನಿಸಿಕೊಂಡಿದೆ ಎಂದರೆ ಗದಗ ಜಿಲ್ಲೆಯಲ್ಲಿಯೇ ಅತ್ಯಂತ ಕನಿಷ್ಠ (ಅಂದರೆ ಶೇ 2ರಷ್ಟು) ಬಿತ್ತನೆಯಾಗಿದೆ. ಶಿರಹಟ್ಟಿ ತಾಲೂಕಿನಲ್ಲಿನ ಪ್ರಸಕ್ತ ಸಾಲಿನ ಬಿತ್ತನೆ ಪ್ರಮಾಣ ಕಳೆದ ಒಂದು ದಶಕದಲ್ಲಿಯೇ ಅತ್ಯಂತ ಕನಿಷ್ಠ ಎನ್ನುವುದನ್ನು ಕೃಷಿ ಇಲಾಖೆಯ ದಾಖಲೆಗಳೇ ಹೇಳುತ್ತಿವೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ಬಿತ್ತನೆ ಪ್ರದೇಶದಲ್ಲಿ ತೀವ್ರ ಕುಸಿತವಾಗಿದೆ. ಹವಾಮಾನ ಇಲಾಖೆ ಉತ್ತಮ ಮಳೆ ಮನ್ಸೂಚನೆ ನೀಡಿದೆ. ಎಲ್ಲರೂ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದೇವೆ ಅಂತ ಶಿರಹಟ್ಟಿ ಕೃಷಿ ಅಧಿಕಾರಿ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ. 

Follow Us:
Download App:
  • android
  • ios