ಪಟಾಕಿ ಅವಾಂತರ, ಬೆಂಗಳೂರಿನ ವಿವಿಧೆಡೆ 9 ಮಂದಿ ಆಸ್ಪತ್ರೆಗೆ ದಾಖಲು
ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಸಿಡಿದು ಬೆಂಗಳೂರಿನಲ್ಲಿ ಈವರೆಗೆ 9 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಅನೇಕರ ಕಣ್ಣಿಗೆ ಪಟಾಕಿ ತಗುಲಿದೆ.
ಬೆಂಗಳೂರು (ಅ.24): ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಸಿಡಿದು ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಮಿಂಟೋ ಆಸ್ಪತ್ರೆಗೆ ಈ ಸಂಬಂಧ ಐವರು ದಾಖಲಾಗಿದ್ದಾರೆ. ಕಲಾಸಿಪಾಳ್ಯದ 35 ವರ್ಷದ ಸುರೇಶ್ ಎಂಬವರ ಮುಖಕ್ಕೆ ಪಟಾಕಿ ಸಿಡಿದು ಗಾಯವಾಗಿದೆ. ಜೆಪಿನಗರದ 10 ವರ್ಷದ ಬಾಲಕ ಮನೋಜ್ ಎಂಬವನ ಕಣ್ಣಿಗೆ ಏಟಾಗಿದೆ. ಗಾಯಾಳು ಮನೋಜ್ ಮೈಮೇಲೆ ಕೂಡ ಪಟಾಕಿಯಿಂದ ಸುಟ್ಟ ಗಾಯಗಳಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಕೆಟ್ ಸಿಡಿದು ಮನೋಜ್ ಬಲ ಭಾಗದ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಮಿಕ್ಕಂತೆ ಥಣಿಸಂಧ್ರದ 7 ವರ್ಷದ ಸ್ಯಾಮುಯೆಲ್ ಎಂಬ ಬಾಲಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಇನ್ನು ಫ್ರೇಜರ್ ಟೌನ್ ಮೂಲದ 7 ವರ್ಷದ ಆದಿತ್ಯ ಎಂಬ ಹುಡುಗನ ಕಣ್ಣಿಗೂ ಏಟು ಬಿದ್ದಿದೆ. ಶ್ರೀನಗರದ ಮದನ್( 18) ಎಂಬಾತನಿಗೆ ಬಿಜಲಿ ಪಟಾಕಿ ಕಣ್ಣಿಗೆ ತಗುಲಿ ಗಾಯವಾಗಿದೆ. ಈವರೆಗೆ ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 5 ಗಂಭೀರ ಪ್ರಕರಣಗಳು ದಾಖಲಾಗಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದೆ. ಒಟ್ಟಾರೆ ನಗರದಲ್ಲಿ ಒಟ್ಟು ಈವರೆಗೆ ಒಂಭತ್ತು ಪ್ರಕರಣ ದಾಖಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆ ನಗರದ ಮಾರುಕಟ್ಟೆ ಹಾಗೂ ರಸ್ತೆ ಅಕ್ಕಪಕ್ಕದಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಹಣತೆ, ಪಟಾಕಿ, ಹೂವು, ಹಣ್ಣು ಹಾಗೂ ಬಾಳೆ-ಕಬ್ಬು ವ್ಯಾಪಾರ ವಹಿವಾಟು ಭರ್ಜರಿಯಿಂದ ನಡೆಯಿತು.
ಮಂಗಳವಾರ ಗ್ರಹಣ ಇರುವ ಕಾರಣ ಬಹುತೇಕ ಮಂದಿ ಸೋಮವಾರವೇ ಲಕ್ಷ್ಮೇ ಪೂಜೆಗೆ ಮುಂದಾಗಿದ್ದು, ಭಾನುವಾರ ಭರದ ತಯಾರಿ ಮಾಡಿಕೊಂಡಿದ್ದಾರೆ. ನಾಲ್ಕು ದಿನ ಆಚರಿಸಲಾಗುವ ದೀಪಾವಳಿ ಹಬ್ಬದ ಸಲುವಾಗಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಮುಂಚಿತವಾಗಿ ಖರೀದಿ ಮಾಡುತ್ತಿದ್ದರೂ, ಪೂಜಾ ಸಾಮಗ್ರಿ, ಪಟಾಕಿಗಳು ನಿತ್ಯ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ.
ದೀಪಾವಳಿಗೆ ಆಕಾಶಬುಟ್ಟಿ, ಬಾಳೆ-ಕಬ್ಬು, ಚೆಂಡು ಹೂ, ಸೇವಂತಿಗೆ, ಕಾಕಡ ಮುಂತಾದ ಹೂಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಪಟಾಕಿ ಖರೀದಿ ಮಾಡಲು ಮಕ್ಕಳು, ಹಿರಿಯರು ಸಾಕಷ್ಟುಸಂಖ್ಯೆಯಲ್ಲಿ ನೆರೆದಿದ್ದರು. ಗ್ರಾಹಕರ ಮನಸೆಳೆಯುವಲ್ಲಿ ವ್ಯಾಪಾರಿಗಳು ಕಸರತ್ತು ನಡೆಸಿದ್ದರು. ಹಬ್ಬದ ಸಂದರ್ಭದಲ್ಲಿ ಮಾತ್ರ ಹೆಚ್ಚು ಮಾರಾಟವಾಗುವ ಪಟಾಕಿ, ಹೂ, ಕಬ್ಬು, ಬಾಳೆ ಮಾರುಕಟ್ಟೆತುಂಬ ಆಕ್ರಮಿಸಿಕೊಂಡಿದ್ದವು. ಇದರಿಂದಾಗಿ ಎಲ್ಲ ನಮೂನೆಯ ಪಟಾಕಿಗಳನ್ನು ಮಾರಾಟಗಾರರು ಮಳಿಗೆಯಲ್ಲಿ ಇಟ್ಟಿದ್ದರು.