ಚಿತ್ರದುರ್ಗ(ಜು.01): ಕೋಟೆ ನಾಡಲ್ಲಿ ಕೋವಿಡ್‌ ಸೋಂಕು ಹರಡುವಿಕೆಗೆ ಈಗ ಮತ್ತಷ್ಟುವೇಗ ಲಭ್ಯವಾಗಿದೆ. ಮಂಗಳವಾರ ಒಂದೇ ದಿನ 9 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. 

ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಒಟಾರೆ 74ಕ್ಕೆ ಏರಿದೆ. ಆದರೆ ಮಂಗಳವಾರ ಸಂಜೆ ಬಿಡುಗಡೆಯಾದ ರಾಜ್ಯ ಬುಲೆಟಿನ್‌ನಲ್ಲಿ ಚಿತ್ರದುರ್ಗದಲ್ಲಿ ಸೋಂಕಿತರ ಸಂಖ್ಯೆ ಕೇವಲ ಮೂರು ಎಂದಷ್ಟೇ ನಮೂದಾಗಿದ್ದು ಅಂಕಿ ಸಂಖ್ಯೆ ತಾಳೆಯಾಗುತ್ತಿಲ್ಲ.

ಮಂಗಳವಾರ ಒಟ್ಟು 68 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 56 ಜನರ ವರದಿ ನೆಗೆಟಿವ್‌ ಬಂದಿದೆ. 9 ಜನರಿಗೆ ಪಾಸಿಟಿವ್‌ ಬಂದಿದ್ದು, ಇನ್ನೂ 5 ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

ಹಿರಿಯೂರಿನ ಸೋಂಕಿತ ವರ್ತಕನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ. 26 ವರ್ಷದ ಪುತ್ರ, 31 ವರ್ಷದ ಇಬ್ಬರಿಗೆ ಸೋಂಕು ತಗುಲಿದೆ. ಇವರೆಲ್ಲಿ ಹಿರಿಯೂರಿನ ನಿವಾಸಿಗಳಾಗಿದ್ದಾರೆ. ಅದೇ ರೀತಿ ಮೊಳಕಾಲ್ಮೂರು ತಾಲೂಕಿನ ಕಾಟನಾಯನಹಳ್ಳಿಯ ಇಬ್ಬರು ಹಣ್ಣಿನ ವ್ಯಾಪಾರಿಗಳಿಗೆ ಸೋಂಕು ತಗುಲಿದೆ. ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆಯಲ್ಲಿ ಇವರು ಹಣ್ಣ ವ್ಯಾಪಾರ ಮಾಡುತಿದ್ದು ಈಗ ಊರಿಗೆ ಹಿಂತಿರುಗಿದ್ದರೆ. 21, 24 ವರ್ಷದ ಯುವಕರಿಗೆ ಸೋಂಕು ದೃಡಪಟ್ಟಿದೆ. ಚಿತ್ರದುರ್ಗ ತಾಲೂಕಿನ ಪಂಡ್ರಹಳ್ಳಿ ಗ್ರಾಮದ 33 ವರ್ಷದ ವ್ಯಕ್ತಿಗೆ ಸೋಂಕು ತಗಲಿದ್ದು ಬೆಂಗಳೂರಿನಿಂದ ಹಿಂತಿರುಗಿದ್ದ. ಹೊಸದುರ್ಗ ಪಟ್ಟಣದ ವಿದ್ಯಾನಗರದ 30 ವರ್ಷದ ನಿವಾಸಿಯೋರ್ವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಕೊರೋನಾ ಅಟ್ಟಹಾಸಕ್ಕೆ ಕರ್ನಾಟಕ ತತ್ತರ: ಸಾವು ಹೆಚ್ಚಳಕ್ಕೆ ಕಾರಣಗಳೇನು..?

45 ಮಂದಿ ಗುಣಮುಖ: 74 ಪ್ರಕರಣಗಳ ಪೈಕಿ ಈಗಾಗಲೆ 45 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು ಹಾಲಿ 29 ಕೋವಿಡ್‌ ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಚಿತ್ರದುರ್ಗದ ಕೋವಿಡ್‌ ಆಸ್ಪತ್ರೆಯಲ್ಲಿ 12, ಧರ್ಮಪುರದ ನಿಗದಿತ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ 10, ಹಿರಿಯೂರು ತಾಲೂಕು ಮರಡಿಹಳ್ಳಿ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ 1, ಭರಮಸಾಗರ-3, ಮೊಳಕಾಲ್ಮೂರು ತಾಲೂಕು ರಾಂಪುರದಲ್ಲಿ 2 ಹಾಗೂ ಹೊಸದುರ್ಗ ತಾಲೂಕು ಬೆಲಗೂರಿನ ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ಓರ್ವ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಜಿಲ್ಲೆಯಲ್ಲಿ 2116 ಜನ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ 5032 ಜನರ ಮಾದರಿ ಸಂಗ್ರಹಿಸಲಾಗಿದ್ದು, 4802 ಜನರ ವರದಿ ನೆಗೆಟಿವ್‌ ಬಂದಿದೆ, ಉಳಿದ 153 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕೃತಗೊಂಡಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.

ಹೊಸದುರ್ಗದ ವಿದ್ಯಾನಗರ ಸೀಲ್ಡೌನ್‌

ಹೊಸದುರ್ಗ: ಪಟ್ಟಣದ ನಿವಾಸಿಯೊಬ್ಬರಿಗೆ ಕೋವಿಡ್‌ 19 ಪಾಸಿಟಿವ್‌ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಟಿ.ಬಿ.ವೃತ್ತದ ಬಳಿಯ ವಿದ್ಯಾನಗರವನ್ನು ಸೀಲ್‌ ಡೌನ್‌ ಮಾಡಿದೆ. ಶ್ರೀರಾಂಪುರ ಕೆಇಬಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಈ ವ್ಯಕ್ತಿ ಕಾರ್ಯನಿರ್ವಹಿಸುತ್ತಿದ್ದಾನೆ. ಹೀಗಾಗಿ ಪಟ್ಟಣದ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆಯೊಂದಿಗೆ ತಾತ್ಕಾಲಿಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರ ಕುಟುಂಬ ವರ್ಗದವರನ್ನು ಬೇರೊಂದು ಕೊಠಡಿಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ ,

ಕೋರೋನಾ ಪಾಸಿಟಿವ್‌ ಬಂದಿರುವ ವ್ಯಕ್ತಿಯ ಜೊತೆಗಿನ ಪ್ರಯಾಣದ ವಿವರಗಳನ್ನು ಕಲೆ ಹಾಕುತ್ತಿದ್ದು ಒಟ್ಟು 48 ವ್ಯಕ್ತಿಗಳನ್ನು ಪ್ರಾಥಮಿಕ ಸಂಪರ್ಕವೆಂದು ಗುರುತಿಸಿ, ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಗೃಹ ಪ್ರತ್ಯೇಕತೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕು ಆಡಳಿತ ತಿಳಿಸಿದೆ.

ಕೊರೋನಾ ದೃಢಪಟ್ಟಿರುವ ವ್ಯಕ್ತಿ ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಜ್ವರಕ್ಕಾಗಿ ಚಿಕಿತ್ಸೆ ಪಡೆದಿದ್ದು ವಾಸಿಯಾಗದ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೋನಾ ಪಾಸಿಟಿವ್‌ ಕಂಡು ಬಂದಿದೆ.

ಶ್ರೀರಾಂಪುರ ಬೆಸ್ಕಾಂ ಕಚೇರಿ ಕೆಲ ಸಿಬ್ಬಂದಿಯನ್ನು ಹೋಂ ಕ್ವಾರೆಂಟೈನ್‌ ಮಾಡಲಾಗಿದ್ದು ಸೋಂಕು ನಿವಾರಣಾ ಔಷಧಿ ಸಿಂಪಡಿಸಲಾಗಿದೆ. ವಿದ್ಯಾನಗರದಲ್ಲಿ ಜೂನಿಯರ್‌ ಕಾಲೇಜು ಪಕ್ಕದ ರಸ್ತೆಯಲ್ಲಿಯೇ ರೋಗಿಯ ಮನೆಯಿರುವುದರಿಂದ ಮನೆಯಿಂದ 200 ಮೀಟರ್‌ವರೆಗ ಸೀಲ್‌ ಡೌನ್‌ ಮಾಡಲಾಗಿದೆ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿದೆ. ಅಲ್ಲಿನ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಹೊಸದುರ್ಗ ಪಟ್ಟಣದ ಬೆಸ್ಕಾಂ ಮುಖ್ಯ ಕಚೇರಿಯ ಮುಖ್ಯದ್ವಾರ ಬೀಗ ಹಾಕಿ ಸಾರ್ವಜನಿಕರ ಪ್ರವೇಶವನ್ನು ಇಂದು ನಿಷೇಧಿಸಲಾಗಿತ್ತು ಎಲ್ಲೆಡೆ ಸೋಂಕು ನಿವಾರಣಾ ಔಷಧಿ ಸಿಂಪಡಿಸಲಾಗುತ್ತಿದೆ.