ಸೆಂಟ್ ಜಾನ್ಸ್ ಮತ್ತು ಲಿವರ್ ಪೂಲ್ ಸೇರಿದಂತೆ ಒಂಬತ್ತು ವಿ.ವಿ.ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಬೆಂಗಳೂರು (ಫೆ.14): ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕ್ವಿನ್ ಸಿಟಿಯಲ್ಲಿ ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳು ಬರಲಿದ್ದು, ಸೆಂಟ್ ಜಾನ್ಸ್ ಮತ್ತು ಲಿವರ್ ಪೂಲ್ ಸೇರಿದಂತೆ ಒಂಬತ್ತು ವಿ.ವಿ.ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕ್ವಿನ್ ಸಿಟಿ ಯೋಜನೆ ಸಂಬಂಧ 30ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಸಚಿವರು ಈ ಮಾಹಿತಿ ನೀಡಿದರು.
ಒಂಬತ್ತು ವಿವಿಗಳ ಜೊತೆ ಒಡಂಬಡಿಕೆ ಮಾತ್ರವಲ್ಲದೆ, ಹೆಸರಾಂತ ಬಿರ್ಲಾ ತಾಂತ್ರಿಕ ವಿಜ್ಞಾನಗಳ ಸಂಸ್ಥೆ (ಬಿಟ್ಸ್) ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಹೆಸರಾಗಿರುವ ವರ್ಲ್ಡ್ ಹಾರ್ಟಿ ಸೆಂಟರ್ ಸೇರಿದಂತೆ ಇನ್ನೂ ಹಲವು ದೇಶಗಳ ವಿ.ವಿ.ಗಳು ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯುವ ಒಲವು ತೋರಿವೆ. ಇಂತಹ ಸಂಸ್ಥೆಗಳ ಜತೆ ಚರ್ಚೆ ಪ್ರಗತಿಯಲ್ಲಿದೆ ಎಂದರು. ಯುಜಿಸಿ ನಿಯಮಗಳು ಅಗ್ರಶ್ರೇಣಿಯ 500 ವಿ.ವಿ.ಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಅವಕಾಶ ಕೊಟ್ಟಿವೆ. ಪಾಶ್ಚಾತ್ಯ ದೇಶಗಳ ವಿ.ವಿ.ಗಳು ಕಡಿಮೆ ಖರ್ಚಿನಲ್ಲೇ ಕ್ವಿನ್ ಸಿಟಿಯಲ್ಲಿ ನೆಲೆಯೂರಲು ನಿಚ್ಚಳ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅದರ ಅಭಿವೃದ್ಧಿಯ ನೇರ ಅನುಭವ ದೊರಕಿಸಿ ಕೊಡಲಾಗುವುದು ಎಂದು ಹೇಳಿದರು.
ಪಠ್ಯಕ್ರಮ ಸುಧಾರಣೆಗೆ ಸಮಿತಿ ರಚನೆ: ಸಭೆಯ ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ನಮ್ಮ ವಿದ್ಯಾರ್ಥಿಗಳಿಗೆ ಬಹುಮುಖಿಯಾದ ಕೌಶಲ್ಯ ತರಬೇತಿಯೂ ಸೇರಿದಂತೆ ಸಮಕಾಲೀನ ಜಗತ್ತಿಗೆ ತಕ್ಕಂತೆ ಪರಿಪೂರ್ಣ ಕಲಿಕೆಗೆ ಪೂರಕವಾಗಿ ಉನ್ನತ ಶಿಕ್ಷಣದ ಪಠ್ಯಕ್ರಮ ಮರು ರೂಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳನ್ನೊಳಗೊಂಡ ಜಂಟಿ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು. ಉದ್ಯಮಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಪಠ್ಯಕ್ರಮ ಬದಲಿಸಲು ಕೇಳುತ್ತಿರುವುದು ಸಾಧುವಲ್ಲ. ಕಲಿಕೆ ಮತ್ತು ಶಿಕ್ಷಣದ ಸ್ವರೂಪವನ್ನು ಒಂದು ವಲಯಕ್ಕೆ ತಕ್ಕಂತೆ ಬದಲಿಸಲು ಸಾಧ್ಯವಿಲ್ಲ. ಅದರಿಂದ ಶಿಕ್ಷಣದ ವ್ಯಾಪ್ತಿ ಸೀಮಿತವಾಗಿ, ಹೊಸ ಸಮಸ್ಯೆಗಳು ಉದ್ಭವಿಸುತ್ತವೆ.
ಕ್ಲಸ್ಟರ್ ಮಾದರಿ ಕೈಗಾರಿಕೆ ಸ್ಥಾಪನೆಗೆ ನೆರವು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಹಾಗಾಗಿ, ವಿದ್ಯಾರ್ಥಿಗಳ ಕಲಿಕೆ ಸಮಗ್ರವಾಗಿ ಇರಬೇಕಾಗಿದ್ದು, ಬಹುಮುಖಿಯಾದ ಕೌಶಲ್ಯಗಳನ್ನು ಕಲಿಸುವ ಅಗತ್ಯವಿದೆ. ಆಗ ಮಾತ್ರ ಯುವಜನರು ಒಂದಿಲ್ಲೊಂದು ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಿಕೊಳ್ಳಬಹುದು. ಆದ್ದರಿಂದ ಪಠ್ಯಕ್ರಮ ಸುಧಾರಣೆ ಹೇಗಿರಬೇಕೆಂದು ನಿರ್ಧರಿಸಿಲು ಜಂಟಿ ಸಮಿತಿಯನ್ನು ರಚಿಸಲಾಗುವುದು. ಒಟ್ಟಾರೆ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ಯುಜಿಸಿ ಜತೆಯಲ್ಲೂ ಸಮಾಲೋಚಿಸಲಾಗುವುದು. ನಮ್ಮ ಯುವಜನರಿಗೆ ಇಲ್ಲಿಯೇ ವಿಶ್ವದರ್ಜೆಯ ಶಿಕ್ಷಣ ಸಿಕ್ಕಬೇಕಾದ್ದು ಮುಖ್ಯ ಎಂದರು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣಪ್ರಕಾಶ ಪಾಟೀಲ್, ಕೆಎಲ್ಇ ಸೊಸೈಟಿ ಮುಖ್ಯಸ್ಥ ಡಾ। ಪ್ರಭಾಕರ ಕೋರೆ, ಪಿಇಎಸ್ ವಿ.ವಿ.ಯ ಸಮ ಕುಲಾಧಿಪತಿ ಪ್ರೊ.ಜವಾಹರ್, ಆರ್.ವಿ.ಶಿಕ್ಷಣ ಸಂಸ್ಥೆಯ ನಾಗರಾಜು ಉಪಸ್ಥಿತರಿದ್ದರು. ರಾಜ್ಯ, ದೇಶ ಮತ್ತು ವಿದೇಶಗಳ 30 ವಿಶ್ವವಿದ್ಯಾಲಯಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
