ಮಂಗಳೂರು(ಏ.14): ಆಶಾದಾಯಕ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಎಂಟನೇ ದಿನವೂ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ದಾಖಲಾದ ಒಟ್ಟು 12 ಮಂದಿ ಸೋಂಕಿತರಲ್ಲಿ ಎಂಟನೇ ವ್ಯಕ್ತಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜನರ ಆತಂಕವನ್ನು ಸದ್ಯದ ಮಟ್ಟಿಗೆ ದೂರ ಮಾಡಿದೆ.

ಇನ್ನು ಕೇವಲ ನಾಲ್ವರು ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಶೀಘ್ರದಲ್ಲೇ ಇವರು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಸುಳ್ಯದ ವ್ಯಕ್ತಿ ಡಿಸ್ಚಾರ್ಜ್:

ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯ ಮೂಲದ 34 ವರ್ಷ ವಯಸ್ಸಿನ ವ್ಯಕ್ತಿ ಸೋಮವಾರ ಡಿಸ್ಚಾಜ್‌ರ್‍ ಆಗಿದ್ದಾರೆ. ಇವರು ದುಬೈಯಿಂದ ಮಾ.18ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದಲ್ಲಿನ ತನ್ನ ಮನೆಗೆ ತೆರಳಿದ್ದರು. ಮಾ.28ರಂದು ಚಿಕಿತ್ಸೆಗಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದರು.

ಕೊರೋನಾ ದೂರವಾಗಲಿ.. ಸ್ವಾಮೀಜಿಗಳು ಮತ್ತು ನಾಯಕರಿಂದ ಇಷ್ಟಲಿಂಗ ಪೂಜೆ

ಮಾ. 31ರಂದು ಕೊರೋನಾ ಸೋಂಕು ತಗುಲಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿತ್ತು. ಚಿಕಿತ್ಸೆ ಯಶಸ್ವಿಯಾಗಿದ್ದು, ಏ.11 ಮತ್ತು 12ರಂದು ನಡೆಸಿದ ಗಂಟಲು ದ್ರವ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅವರು ಇನ್ನೂ 14 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ.

6ನೇ ಸ್ಥಾನಕ್ಕಿಳಿದ ಮಂಗಳೂರು

ರಾಜ್ಯದಲ್ಲಿ ಕೋರೋನಾ ಪ್ರಕರಣಗಳಲ್ಲಿ ಬೆಂಗಳೂರು, ಮೈಸೂರು ನಂತರ 3ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ. ಜಿಲ್ಲೆಯ ಮಟ್ಟಿಗೆ ಇದು ಸಮಾಧಾನಕರ ಸಂಗತಿ. ಆದರೂ, ಇನ್ನೂ ಬಹಳಷ್ಟುಜಾಗರೂಕರಾಗಿರಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.