ಪಶ್ಚಿಮ ಘಟ್ಟಗಳ ದಟ್ಟವಾದ ಕಾನನದ ನಡುವೆ ಹಾದು ಹೋಗುತ್ತಾ ಪ್ರಕೃತಿಯ ಸೌಂದರ್ಯ ಸವಿಯಲು ನೈಋುತ್ಯ ರೈಲ್ವೆ ಪ್ರಾರಂಭಿಸಿರುವ ‘ವಿಸ್ಟಾಡೋಮ್‌’ ಬೋಗಿಗಳನ್ನು ಪರಿಚಯಿಸಿ ಆರು ತಿಂಗಳು ಕಳೆದರೂ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗುತ್ತಿಲ್ಲ.

ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು (ಫೆ.11): ಪಶ್ಚಿಮ ಘಟ್ಟಗಳ ದಟ್ಟವಾದ ಕಾನನದ ನಡುವೆ ಹಾದು ಹೋಗುತ್ತಾ ಪ್ರಕೃತಿಯ ಸೌಂದರ್ಯ ಸವಿಯಲು ನೈಋುತ್ಯ ರೈಲ್ವೆ ಪ್ರಾರಂಭಿಸಿರುವ ‘ವಿಸ್ಟಾಡೋಮ್‌’ (Vistadome) ಬೋಗಿಗಳನ್ನು ಪರಿಚಯಿಸಿ ಆರು ತಿಂಗಳು ಕಳೆದರೂ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗುತ್ತಿಲ್ಲ.

ಬೆಂಗಳೂರು (ಯಶವಂತಪುರ)-ಮಂಗಳೂರು ಮಾರ್ಗದ ರೈಲಿನಲ್ಲಿ ಕಳೆದ 2021ರ ಜುಲೈ 12ರಿಂದ ಎರಡು ವಿಸ್ಟಾಡೋಮ್‌ ಬೋಗಿಗಳನ್ನು ಅಳವಡಿಸಿ ಚಾಲನೆ ನೀಡಲಾಗಿತ್ತು. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುತ್ತಿದ್ದರು. ಆದರೆ, ದಿನ ಕಳೆದಂತೆ ಬೆಂಗಳೂರಿನಿಂದ ಶೇ.20 ರಷ್ಟುಆಸನಗಳು ಮಾತ್ರ ಕಾಯ್ದಿರಿಸಲಾಗುತ್ತಿದೆ. ಆದರೆ, ಸಕಲೇಶಪುರದಿಂದ ಮಂಗಳೂರು ಪ್ರಯಾಣಕ್ಕೆ ಶೇ.30ರವರೆಗೂ ಬುಕ್ಕಿಂಗ್‌ ಮಾಡಲಾಗುತ್ತಿದೆ.

ಪ್ರಯಾಣ ದರ ಹೆಚ್ಚಳವೇ ಕಾರಣ: ಬೆಂಗಳೂರಿನಿಂದ ಮಂಗಳೂರಿಗೆ ಸ್ಲೀಪರ್‌ ಕೋಚ್‌ನಲ್ಲಿ ಪ್ರಯಾಣಕ್ಕೆ ಕೇವಲ 255 ರು.ಗಳ ಪ್ರಯಾಣದರ ಇದೆ. ಆದರೆ, ವಿಸ್ಟಾಡೋಮ್‌ ಕೋಚ್‌ನಲ್ಲಿನ ಪ್ರಯಾಣಕ್ಕೆ 1400 ರು. ನಿಗದಿ ಮಾಡಲಾಗಿದೆ. ಹೀಗಾಗಿ ಬೆಂಗಳೂರಿನಿಂದ ವಿಸ್ಟೋಡೋಮ್‌ ಕೋಚ್‌ನಲ್ಲಿ ಪ್ರಯಾಣಿಸುವವರ ಸಂಖ್ಯೆ ಅತ್ಯಂತ ಕಡಿಮೆ ಇರುತ್ತದೆ, ಬಹುತೇಕ ಮಂದಿ ಬೆಂಗಳೂರಿನಿಂದ ಸಕಲೇಶಪುರದವರೆಗೂ ಸಾಮಾನ್ಯ ಕೋಚ್‌ನಲ್ಲಿ ಪ್ರಯಾಣಿಸಿ,ಅಲ್ಲಿಂದ ಮಂಗಳೂರಿನವರೆಗೆ ವಿಸ್ಟಾಡೋಮ್‌ ಕೋಚ್‌ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದರು.

Intercity express Train : ಯಶವಂತಪುರ - ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್‌ ಕೋಚ್‌

ಹೀಗಾಗಿ ವಿಸ್ಟಾಡೋಮ್‌ ಕೋಚ್‌ನಲ್ಲಿ ಹೋಗಿ-ಬರುವುದಕ್ಕೆ ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರಿಗೆ ರಿಯಾಯಿತಿ ಪ್ರಕಟಿಸಬೇಕು. ಆಗ ಮಾತ್ರ ಪ್ರಯಾಣಿಕರ ಸಂಖ್ಯೆ ವೃದ್ಧಿಸಲು ಸಾಧ್ಯ ಎಂದು ರೈಲ್ವೆ ಯೋಜನೆಗಳ ಪರ ಕಾರ್ಯಕರ್ತ ಸಂಜೀವ್‌ ದ್ಯಾಮಣ್ಣವರ್‌ ವಿವರಿಸಿದರು.

ಮಾಹಿತಿ ಕೊರತೆ: ಬೆಂಗಳೂರು ನಗರ ಸೇರಿದಂತೆ ಬಯಲು ಸೀಮೆಯಿಂದ ಲಕ್ಷಾಂತರ ಜನ ಪ್ರವಾಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಯಾಣ ಬೆಳೆಸುತ್ತಾರೆ. ಆದರೆ, ನೈಋುತ್ಯ ರೈಲ್ವೆಯಿಂದ ವಿಸ್ಟಾಡೋಮ್‌ ಕೋಚ್‌ ಪರಿಚಯ ಮಾಡಿ ಆರು ತಿಂಗಳು ಕಳೆದರೂ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದೇ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಬಸ್‌ಗಳನ್ನು ಬಳಸುತ್ತಿದ್ದಾರೆ.ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರು- ಶಿವಮೊಗ್ಗ ಮಾರ್ಗದ ರೈಲಿಗೂ ವಿಸ್ಟಾಡೋಮ್‌ ಬೋಗಿಗಳನ್ನು ಅಳವಡಿಸಲಾಗಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವಲ್ಲಿ ರೈಲ್ವೆ ಇಲಾಖೆ ಹಿಂದೆ ಬಿದ್ದಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವಿಸ್ಟಾಡೋಮ್‌ ವಿಶೇಷ: ಪ್ರತಿ ವಿಸ್ಟಾಡೋಮ್‌ ಬೋಗಿ 44 ಆಸನ ಸಾಮರ್ಥ್ಯ ಹೊಂದಿದೆ, ಅಗಲವಾದ, ದೊಡ್ಡ ಕಿಟಕಿಗಳನ್ನು ಅಳವಡಿಸಿರುವುದು ಹಾಗೂ ಬೋಗಿಗಳು ಗಾಜಿನ ಮೇಲ್ಛಾವಣೆ ಇರುವುದರಿಂದ ಹೊರಗಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್‌ಇಡಿ, ಓವನ್‌ ಮತ್ತು ರೆಫ್ರಿಜರೇಟರ್‌, ಮಿನಿ ಪ್ಯಾಂಟ್ರಿ, ಮಲ್ಟಿ-ಟೈರ್ಡ್‌ ಸ್ಟೀಲ್‌ ಲಗೇಜ್‌ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್‌ ಚಾರ್ಜಿಂಗ್‌ ಸಾಕೆಟ್‌ಗಳಿವೆ. ಕೋಚ್‌ ಸ್ವಯಂಚಾಲಿತ ಸ್ಲೈಡಿಂಗ್‌ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ. ಅಲ್ಲದೆ, ಎಲ್ಲ ಆಸನಗಳು 180 ಡಿಗ್ರಿ ತಿರುಗಲಿವೆ.

ಕಾರವಾರಕ್ಕೆ ಬಂತು ವಿಸ್ಟಾಡೋಮ್‌ ರೈಲು: ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಅನುಕೂಲ

ವಿಸ್ಟಾಡೋಮ್‌ ಪರಿಚಯಿಸಿದ ಪ್ರಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದರು. ಕೊರೋನಾ ಕಾರಣದಿಂದ ಪ್ರಯಾಣಿಕರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕ್ಷೀಣಿಸಿದೆ. ಮುಂದಿನ ದಿನಗಳಲ್ಲಿ ಈ ಕೋಚ್‌ಗಳಲ್ಲಿ ಪ್ರಯಾಣ ಬೆಳೆಸುವವರ ಸಂಖ್ಯೆ ಹೆಚ್ಚಾಗಲಿದೆ.
-ಡಾ. ಮಂಜುನಾಥ್‌, ವಿಭಾಗೀಯ ಪ್ರಧಾನ ವ್ಯವಸ್ಥಾಪಕ, ನೈಋುತ್ಯ ರೈಲ್ವೆ.