ಕಲಬುರಗಿ: ಕೊನೆಗೂ ಬಾಲಕಿ ಬಲಿ ಪಡೆಯಿತು ಬಿಸಿಯೂಟದ ಅವ್ಯವಸ್ಥೆಯ ಕೂಟ..!

ಕುದಿಯುತ್ತಿದ್ದ ಸಾಂಬಾರ್‌ ತುಂಬಿದ್ದ ಪಾತ್ರೆಯಲ್ಲಿ ಬಿದ್ದು ಮೈಪೂರಾ ಸುಟ್ಟುಹೋಗಿದ್ದ ಅಫಜಲ್ಪುರ ತಾಲೂಕಿನ ಚಿಣಮಗೇರಾ ಸರಕಾರಿ ಪ್ರಾಥಮಿಕ ಶಾಲೆಯ 2 ನೇ ತರಗತಿ ಬಾಲಕಿ ಮಹಾಂತಮ್ಮ ನಾಲ್ಕು ದಿನಗಳ ಜೀವನ್ಮರಣ ಹೋರಾಟದಲ್ಲಿ ಉಸಿರು ಚೆಲ್ಲಿದ್ದಾಳೆ.

8 Years Old Girl Dies Due to Mid Day Meal Programme in Kalaburagi grg

ಶೇಷಮೂರ್ತಿ ಅವಧಾನಿ

ಕಲಬುರಗಿ(ನ.20):  ಬಿಸಿಯೂಟ ತಯಾರಿ ಹಾಗೂ ಹಂಚಿಕೆ ವಿಚಾರದಲ್ಲಿನ ಶಿಕ್ಷಣ ಇಲಾಖೆಯ ಚಲ್ತೇ ಹೈ ನೀತಿಗೆ ಅಫಜಲ್ಪೂರದಲ್ಲಿ ಪುಟಾಣಿ ಬಾಲಕಿ ಬಲಿಯಾಗಿದ್ದಾಳೆ! ಕುದಿಯುತ್ತಿದ್ದ ಸಾಂಬಾರ್‌ ತುಂಬಿದ್ದ ಪಾತ್ರೆಯಲ್ಲಿ ಬಿದ್ದು ಮೈಪೂರಾ ಸುಟ್ಟುಹೋಗಿದ್ದ ಅಫಜಲ್ಪುರ ತಾಲೂಕಿನ ಚಿಣಮಗೇರಾ ಸರಕಾರಿ ಪ್ರಾಥಮಿಕ ಶಾಲೆಯ 2 ನೇ ತರಗತಿ ಬಾಲಕಿ ಮಹಾಂತಮ್ಮ (8) ನಾಲ್ಕು ದಿನಗಳ ಜೀವನ್ಮರಣ ಹೋರಾಟದಲ್ಲಿ ಉಸಿರು ಚೆಲ್ಲಿದ್ದಾಳೆ.

ಬಿಸಿಯೂಟ ಉಂಡು ಆಟೋಟದಲ್ಲಿ ಮುಳುಗಬೇಕಿದ್ದ ಮಹಾಂತಮ್ಮ ಕುದಿ ಸಾಂಬಾರ್‌ ಬೋಗಣಿಯಲ್ಲಿ ಮುಳುಗಿ ಸಾವಿನ ಮನೆ ಸೇರಿದ್ದು ಬಹುದೊಡ್ಡ ದುರಂತವೆಂದೇ ಹೇಳಬೇಕು, ಈ ಘಟನೆ ಅಫಜಲ್ಪುರ ತಾಲೂಕಿನ ಬಿಸಿಯೂಟ, ಅಕ್ಷರ ದಾಸೋಹ ಯೋಜನೆಯಲ್ಲಿನ ಹುಳುಕು, ಕೊಳಕಿನ ಮೇಲೆ ಬೆಳಕು ಚೆಲ್ಲಿದೆ.

ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಕಲ್ಬುರ್ಗಿಯಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಳ: ಆಂದೋಲಶ್ರೀ

ಬಿಸಿಯೂಟ- ಬಿಸಿಬಿಸಿ ಚರ್ಚೆ:

ನ.16ರ ಗುರುವಾರ ಕುದಿಯುತ್ತಿದ್ದ ಸಾಂಬಾರ್‌ ಬೋಗಣಿಯಲ್ಲಿ ಆಯತಪ್ಪಿ ಬಿದ್ದು ಮೈಪೂರಾ ಸುಟ್ಟು ಹೋಗಿದ್ದ ಬಾಲಕಿಗೆ ಕಲಬುರಗಿಯಲ್ಲಿ ಆರಂಭಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತಾದರೂ ಆಕೆ ಅಲ್ಲೇ ಕೊನೆಯುಸಿರು ಎಳೆದಿರೋದು ಅಫಜಲ್ಪೂರ ತಾಲೂಕಿನ ಬಿಸಿಯೂಟದ ವ್ಯವಸ್ಥೆ ಎಂಬ ಅವ್ಯವಸ್ಥೆಯನ್ನೇ ಚರ್ಚೆಯ ಮುನ್ನೆಲೆಗೆ ಎಳೆದು ತಂದಿದೆ.

ಬೆಳಗ್ಗೆ ಮನೆಯಲ್ಲಿ ಹೊಟ್ಟೆತುಂಬ ಉಂಡು ಶಾಲೆಗೆ ಬಂದಿದ್ದ ಮಹಾಂತಮ್ಮ ಮಧ್ಯಾಹ್ನದ ಊಟಕ್ಕಾಗಿ ತಟ್ಟೆ ಸಮೇತ ಬಿಸಿಯೂಟ ಸಿದ್ಧಪಡಿಸಿದ್ದ ಕಡೆ ತೆರಳಿದಾಗ ಉಂಟಾದ ಮಕ್ಕಳ ನಡುವಿನ ಪರಸ್ಪರ ನೂಕುನುಗ್ಗಲಿಂದ ಆಯತಪ್ಪಿ ಸಾಂಬಾರ್‌ ತುಂಬಿದ್ದ ಬೋಗಣಿಯಲ್ಲಿ ಬಿದ್ದಳು, ಅದರಿಂದಲೇ ಸುಟ್ಟಗಾಯ ಅನುಭವಿಸುವಂತಾಯ್ತು ಎಂದು ಹೇಳುತ್ತ ಬಾಲಕಿಯದ್ದೇ ತಪ್ಪೆಂಬಂತೆ ಇಡೀ ಘಟನೆಯನ್ನು ಬಿಂಬಿಸಲಾಗುತ್ತಿದೆ. ಆದರೆ ಮಕ್ಕಳ ಮಾನಸಿಕ ಸ್ಥಿತಿಗತಿ, ಊಟೋಪಚಾರ, ತಿಂಡಿ ಇದ್ದಲ್ಲಿ ಮಕ್ಕಳು ತೋರುವ ವರ್ತನೆ ಇವನ್ನೆಲ್ಲ ಹಿನ್ನೆಲೆಯಲ್ಲಿಟ್ಟುಕೊಂಡು ಯಾರೂ ಘಟನೆಯನ್ನ ಪರಾಮರ್ಶಿಸುತ್ತಿಲ್ಲ!

ಈ ಪ್ರಶ್ನೆಗಳಿಗೆ ಉತ್ತಿರಿಸೋರು ಯಾರ್ರಿ?

ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ವಿತರಿಸುವ ವ್ಯವಸ್ಥೆಯನ್ನ ಚಿಣಮಗೇರಿ ಶಾಲೆಯಲ್ಲಿ ಈ ಪರಿಯಲ್ಲಿ ಅವ್ಯವಸ್ಥೆಯ ವಸ್ಥೆಯ ಕೂಪವಾಗಿಸಿದವರು ಯಾರು? ಮಕ್ಕಳು ಸಹಜವಾಗಿಯೇ ತಿಂಡಿ, ತೀರ್ಥ ಇದ್ದಲ್ಲಿ ಮುಗಿ ಬೀಳೋದು ಸಹಜ ಎಂಬ ಸರಳ ಸತ್ಯ ಅಲ್ಲಿದ್ದ ಅಡುಗೆಯವರಿಗೆ, ಸಹಾಯಕರಿಗೆ, ಶಿಕ್ಷಕರಿಗೆ ತಿಳಿಯಲಿಲ್ಲವೆ? ಅದರಲ್ಲೂ ಸಾಂಬಾರ್‌ನಂತಹ ಕುದಿ ಪದಾರ್ಥ ಬೋಗಣಿ ಇದ್ದಲ್ಲಿ ಮಕ್ಕಳಿಗೆ ಹೋಗಲು ಅನುಮತಿಸಿದ್ದೇಕೆ? ಶಿಕ್ಷಕರೋ, ಅಡುಗೆ ಸಿಬ್ಬಂದಿಯೋ ಒಟ್ಟಾರೆ ದೊಡ್ಡವರು ಯಾರಾದರೂ ಇಡೀ ಬಿಸಿಯೂಟ ಹಂಚಿಕೆಯನ್ನು ಮೇಲುಸ್ತುವಾರಿ ಮಾಡಬಹುದಿತ್ತಲ್ಲವೆ? ಯಾಕೆ ಈ ಪರಿಯ ಅಲಕ್ಷತನ ಬಿಸಿಯೂಟ ಹಂಚಿಕೆ, ಮಕ್ಕಳ ವಿಚಾರದಲ್ಲಿ ತೋರಲಾಯ್ತೋ? ಎಂಬಿತ್ಯಾದಿ ಪ್ರಶ್ನೆಗಳಿಗೆ

ಉತ್ತರ ನೀಡಲು ಯಾರೂ ಸಿದ್ಧರಿಲ್ಲ.

ಸದರಿ ಘಟನೆಯಲ್ಲಿ ಅಲಕ್ಷತನದ ಗುರುತರ ಆರೋಪ ಹೊರಿಸಿ ಸಾವನ್ನಪ್ಪಿರುವ ಮಹಾಂತಮ್ಮಳ ತಾಯಿ ಸಂಗೀತಾ ಇವರು ಚಿಣಮಗೇರಾ ಶಾಲೆಯ ಮುಖ್ಯ ಗುರು, ಅಡುಗೆ ಸಿಬ್ಬಂದಿ ಸೇರಿದಂತೆ 7 ಜನರ ಮೇಲೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಗಾಣಗಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯಲ್ಲಿ ಶಾಲೆಯ ಇಬ್ಬರು ಶಿಕ್ಷಕರು, ಅಡುಗೆ ಸಿಬ್ಬಂದಿ ಸೇವೆಯಿಂದ ಅಮಾನತು ಕೂಡಾ ಆಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡಾ ಕಿಂಚಿತ್ತಾದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಹ ಅಮಾಯಕ ಬಾಲಕಿಯ ದಾರುಣ ಸಾವು ತಡೆಯಬಹುದಿತ್ತಲ್ಲವೆ?

ಬಿಸಿಯೂಟದ ಸಾಂಬಾರ್‌ನಲ್ಲಿ ಬಿದ್ದು ಗಾಯಗೊಂಡಿದ್ದ ಮಗು ಸಾವು!

ಮಕ್ಕಳ ಜೀವದ ಜೊತೆಗೆ ಚೆಲ್ಲಾಟ- ಶಿಕ್ಷಣ ಇಲಾಖೆ ಚಲ್ತೇ ಹೈ ನೀತಿ!

ಬಿಸಿಯೂಟದ ಅವ್ಯವಸ್ಥೆ ಅಫಜಲ್ಪೂರದಲ್ಲಿ ಮಕ್ಕಳ ಬದುಕಿಗೇ ಮಾರಕವಾಗುತ್ತಿದ್ದರೂ ಶಿಕ್ಷಣ ಇಲಾಖೆ ಕಣ್ಣು ತೆರೆಯುತ್ತಿಲ್ಲ ಎಂಬುದೇ ದುರಂತದ ಸಂಗತಿ. ಈ ಹಿಂದೆ ಹಾವನೂರ ಸರ್ಕಾರಿ ಶಾಲೆಯಲ್ಲಿ ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 43 ವಿದ್ಯಾರ್ಥಿಗಳು ಅಸ್ವಸ್ಥಗೊಂಡರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಡುಗೆ ಸಿಬ್ಬಂದಿ ಎಚ್ಚೆತ್ತುಕೊಳ್ಳಲಿಲ್ಲ, ಹೀಗಾಗಿ ಅದೇ ಅವ್ಯವಸ್ಥೆ ಅಲಕ್ಷತನ ಚಿಣಮಗೇರಾದ ಶಾಲೆಯಲ್ಲಿಯೂ ಪುನರಾವರ್ತನೆಯಾಗಲು ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಸಿಯೂಟ ತಯ್ಯಾರಿ, ಹಂಚಿಕೆ ಶಿಸ್ತಿನಿಂದ ಕೂಡಿರದೆ ಅಶಿಸ್ತಿನ ತಾಣವಾಗಿರುವುದೇ ದುರಂತಗಳ ಪುನರಾವರ್ತನೆಗೆ ಕಾರಣವೆನ್ನಲಾಗುತ್ತಿದೆ.

ಅಫಜಲಪುರ ತಾಲೂಕಿನಲ್ಲಿ ಇಂತಹ ಘಟನೆ ಎರಡನೇಯದ್ದಾಗಿದೆ. ಬಿಸಿಯೂಟದಲ್ಲಿ ಆಗುತ್ತಿರುವ ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಶಿಕ್ಷಣ ಇಲಾಖೆ ಮುಗ್ಗರಿಸಿದೆ. ವಿದ್ಯಾರ್ಥಿಗಳ ಪರಸ್ಪರರ ತಳ್ಳಾಟದಿಂದ ಸಾಂಬಾರಿನಲ್ಲಿ ವಿದ್ಯಾರ್ಥಿನಿ ಬಿದ್ದಿದ್ದಾಳೆಂದು ಶಿಕ್ಷಕರ ಹಾಗೂ ಸಿಬ್ಬಂದಿಗಳ ಹೇಳಿಕೆ ಸರಿಯಲ್ಲ. ಬಿಸಿಯೂಟವನ್ನು ಸರದಿ ಸಾಲಿನಲ್ಲಿ ಕೊಡಬೇಕು. ಅವ್ಯವಸ್ಥೆಯ ಮೂಲಕವೇ ಬಿಸಿಯೂಟ ಹಂಚಿಕೆಯಾದರೆ ಇನ್ನೇನಾಗುತ್ತದೆ? ತಪ್ಪು ಯಾರದ್ದೆಂದು ಗುರುತಿಸಿ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಅಹಿತಕರ ಘಟನೆಗಳು ನಿಲ್ಲುತ್ತವೆ ಎಂದು ಅಫಜಲ್ಪುರ ಹೋರಾಟಗಾರ ಅವ್ವಣ್ಣಗೌಡ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios