ಖಾಸಗಿ ಶಾಲೆಯ 8 ಶಿಕ್ಷಕರಿಗೆ ಸೋಂಕು, ಪುನಾರಂಭ ಚರ್ಚೆ ಹೊತ್ತಲ್ಲೇ ಆಘಾತಕಾರಿ ಘಟನೆ!
ಧಾರವಾಡ ಶಾಲೆಯ 8 ಶಿಕ್ಷಕರಿಗೆ ಸೋಂಕು!| ನಿನ್ನೆ ಒಂದೇ ದಿನ 7 ಶಿಕ್ಷಕರಿಗೆ ಕೊರೋನಾ ವ್ಯಾಧಿ ದೃಢ| ಶಾಲೆ ಪುನಾರಂಭ ಚರ್ಚೆ ಹೊತ್ತಲ್ಲೇ ಆಘಾತಕಾರಿ ಘಟನೆ
ಧಾರವಾಡ(ಜೂ.15): ಶಾಲೆ ಪುನಾರಂಭ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಧಾರವಾಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿ ಒಂದೇ ಶಾಲೆಯ 7 ಶಿಕ್ಷಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮೂರು ದಿನಗಳ ಹಿಂದೆ ಇದೇ ಶಾಲೆಯ ಶಿಕ್ಷಕಿಯೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಎಂಟು ಶಿಕ್ಷಕರಿಗೆ ಸೋಂಕು ತಗುಲಿದಂತಾಗಿದೆ.
ಧಾರವಾಡದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾರಂಭದ ಕುರಿತಂತೆ ಜೂ.6ರಂದು ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕಿಯಿಂದ (ಪಿ-5970) ಉಳಿದ ಏಳು ಶಿಕ್ಷಕರಿಗೆ ಸೋಂಕು ಹರಡಿದೆ. ಕೋವಿಡ್‌ನಿಂದಾಗಿ ಬಂದ್ ಆಗಿರುವ ಶಾಲೆಗಳನ್ನು ಆರಂಭಿಸಬೇಕೋ, ಬೇಡವೋ ಎಂಬ ಸಂದಿಗ್ಧದಲ್ಲಿರುವ ವೇಳೆಯೇ ಶಿಕ್ಷಕರಿಗೆ ಸೋಂಕು ತಗುಲಿರುವುದು ಪಾಲಕರು, ಮಕ್ಕಳಲ್ಲಿ ತೀವ್ರ ಆತಂಕ ಮೂಡಿಸಿದೆ.
ದಿಲ್ಲಿಯಲ್ಲಿ ವೈರಸ್ ನಿಗ್ರಹಕ್ಕೆ ಅಮಿತ್ ಶಾ ಮಾಸ್ಟರ್ ಪ್ಲಾನ್!
ನಗರದ ಕಿಲ್ಲಾ ಸಮೀಪದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭಕ್ಕೆ ಸಂಬಂಧಿಸಿ ಜೂ.6ರಂದು ಸಭೆ ನಡೆದಿತ್ತು. ಸಭೆಯಲ್ಲಿ ಶಿಕ್ಷಕವೃಂದ, ಬೋಧಕೇತರ ಸಿಬ್ಬಂದಿ ಸೇರಿ ಒಟ್ಟಾರೆ 24 ಮಂದಿ ಪಾಲ್ಗೊಂಡಿದ್ದರು. ಸಭೆಗೆ ಹಾಜರಾಗಿದ್ದ ಸೋಂಕಿತ ಶಿಕ್ಷಕಿಯಿಂದ 6 ಶಿಕ್ಷಕಿಯರು ಹಾಗೂ ಒಬ್ಬ ಶಿಕ್ಷಕ ಸೇರಿ ಒಟ್ಟು 7 ಮಂದಿಗೆ ವೈರಾಣು ಹರಡಿದೆ.
ಶಾಲೆ ಪುನರ್ ಆರಂಭಿಸುವ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದ ಧಾರವಾಡದ ಯಾಲಕ್ಕಿ ಶೆಟ್ಟರ ಕಾಲನಿ ನಿವಾಸಿಯಾದ ಶಿಕ್ಷಕಿಯೊಬ್ಬರು ಪಿ.5970 (31 ವರ್ಷ) ತೀವ್ರ ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದರು. ಇವರನ್ನು ತಪಾಸಣೆಗೆ ಒಳಪಡಿಸಿದಾಗ ಜೂ.11ರಂದು ಕೋವಿಡ್ ದೃಢಪಟ್ಟಿತ್ತು. ಇದರಿಂದ ಶಿಕ್ಷಕವೃಂದ ಮತ್ತು ಶಾಲಾ ಆಡಳಿತ ಮಂಡಳಿ ಗಾಬರಿಯಾಗಿದ್ದಲ್ಲದೆ ಎಲ್ಲರೂ ತಪಾಸಣೆಗೆ ಒಳಗಾಗಿದ್ದರು. ಆಗ ಇವರಲ್ಲಿ ಏಳು ಮಂದಿಗೆ ಸೋಂಕು ದೃಢಪಟ್ಟಿದೆ.
ಕೊರೋನಾ ಸಂಡೇ ಶಾಕ್: ದೇಶದಲ್ಲಿ 408 ಮಂದಿ ಸಾವು, 14178 ಹೊಸ ಕೇಸು!
ಇನ್ನುಳಿದಂತೆ ಸಭೆಯಲ್ಲಿ ಭಾಗವಹಿಸಿದ್ದ ಇತರರ ವರದಿ ಬರಬೇಕಿದ್ದು, ಅಲ್ಲಿವರೆಗೆ ಹೋಮ್ ಕ್ವಾರಂಟೈನ್‌ಲ್ಲುಳಿಯಲು ಆದೇಶಿಸಲಾಗಿದೆ. ಸೋಂಕು ದೃಢಪಟ್ಟಶಿಕ್ಷಕರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರ ಕುರಿತು ಆರೋಗ್ಯ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.