ಕೊಪ್ಪಳ(ಏ.12): ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸುವಾಗ ಪತ್ತೆ ಹಚ್ಚಿದ ಗುಜರಾತ್‌ನ ಆನಂದ್‌ ಜಿಲ್ಲೆಯಿಂದ ಪಟ್ಟಣಕ್ಕೆ ಬಂದಿರುವ 8 ಜನರನ್ನು ಶನಿವಾರ ಸಂಜೆ ಆರೋಗ್ಯ ಪರೀಕ್ಷೆ ನಡೆಸಿದ್ದು ಪರಿಣಾಮ ಗಂಭೀರವಾದರೆ ಕ್ವಾರಂಟೈನ್‌ಗೆ ಸೇರಿಸಲು ಗಂಗಾವತಿಗೆ ಕರೆದೊಯ್ಯಲಾಗಿದೆ.

"

ಜಿಲ್ಲೆಯ ಕಾರಟಗಿ ಪಟ್ಟಣದ ಜೆಪಿ ನಗರ ನಿವಾಸಿಗಳ 7 ಜನ ಮತ್ತು ನವಲಿಯಲ್ಲಿದ್ದ ಒಬ್ಬರು ಸೇರಿ ಒಟ್ಟು 8 ಜನರನ್ನು ಕಾರಟಗಿ ಪಿಎಸ್‌ಐ ಅವಿನಾಶ ಕಾಂಬಳ ನೇತೃತ್ವದಲ್ಲಿ ಶನಿವಾರ ರಾತ್ರಿ ಆ್ಯಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವರದಿ: ಸಂಕಷ್ಟಕ್ಕೀಡಾದ ಕುಟುಂಬಕ್ಕೆ ಹಲವರ ಆಸರೆ

ಒಟ್ಟು 8 ಜನರು ಪತ್ತೆಯಾದ ಬಳಿಕ ಅವರನ್ನು ಮೊದಲ ಹಂತವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ನಾಗರಾಜ್‌ ಅವರು ಆರೋಗ್ಯ ಪರೀಕ್ಷೆ ನಡೆಸಿದ ಬಳಿಕ ಹೆಚ್ಚಿನ ಪರೀಕ್ಷೆಗೊಳಪಡಿಸಲು ಪೊಲೀಸರ ಮೂಲಕ ಗಂಗಾವತಿಗೆ ಕಳುಹಿಸಲಾಗಿದೆ.

ಕಳೆದ ಜನವರಿ 11ರಂದು ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಿಂದ ಒಟ್ಟು 13 ಜನರು ಗುಜರಾತ್‌ನ ಆನಂದ ಜಿಲ್ಲೆ ಸಹಿತ ವಿವಿಧೆಡೆ ಸಂಚರಿಸಿ ಫೆ. 19ರಂದು ಜಿಲ್ಲೆಗೆ ಆಗಮಿಸಿದ್ದಾರೆ. ಸ್ಥಳೀಯವಾಗಿ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸುವಾಗ ವಿಷಯ ಹೊರಬಂದಿದೆ. ಜೆಪಿ ನಗರದ 7, ನವಲಿಯ ಒಬ್ಬರನ್ನು ಪರೀಕ್ಷೆಗೆ ಕರೆತರಲಾಗಿದೆ. ಉಳಿದ ಐವರಲ್ಲಿ ಇಬ್ಬರು ಜಿಲ್ಲೆಯ ಕುಷ್ಟಗಿಯಲ್ಲಿ ಮತ್ತಿಬ್ಬರು ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ಹಾಗೂ ಇನ್ನೊಬ್ಬರು ಗೋವಾದಲ್ಲಿ ಇದ್ದಾರೆಂಬ ಮಾಹಿತಿ ಲಭ್ಯವಾಗಿದೆ ಎಂದು ಸಬ್‌ ಇನ್ಸ್‌ಪೆಕ್ಟರ್‌ ಅವಿನಾಶ ಕಾಂಬಳೆ ವಿವರಿಸಿದರು.

ಗಂಗಾವತಿಯಲ್ಲಿ ವೈದ್ಯರ ಪರೀಕ್ಷೆಯ ಬಳಿಕ ಈ 8 ಜನರನ್ನು ಕ್ವಾರೆಟೇನ್‌ಗೆ ಸೇರಿಸುವ ವಿಷಯ ಖಚಿತವಾಗಲಿದೆ ಎಂದು ಸಬ್‌ ಇನ್ಸ್‌ಪೆಕ್ಟರ್‌ ಅವಿನಾಶ ಕಾಂಬಳೆ ತಿಳಿಸಿದರು.