ಮದ್ದೂರು [ಸೆ.02]:   ಸಹಕಾರ ಸಂಘಗಳ ಬೈಲಾ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಏಳು ಮಂದಿ ಕಾಂಗ್ರೆಸ್‌ ಹಾಗೂ ಓರ್ವ ಜೆಡಿಎಸ್‌ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ಸಹಕಾರ ಸಂಘಗಳ ಉಪ ನಿಬಂಧಕರು ಶನಿವಾರ ಆದೇಶ ಹೊರಡಿಸಿದ್ದಾರೆ.

ಸಂಘದ ನಿರ್ದೆಶಕರಾದ ಶಂಕರ, ರಮೇಶ, ಕೆಂಪರಾಜು, ಸಾವಿತ್ರಮ್ಮ, ಲಕ್ಷ್ಮಮ್ಮ, ಬೋರಮ್ಮ, ಪುಟ್ಟಸ್ವಾಮಿ ಹಾಗೂ ಜಿ.ಎಸ್‌.ಬೋರಯ್ಯ ಅವರ ಸದಸ್ಯತ್ವ ಅನರ್ಹಗೊಳಿಸಿ ಸಹಕಾರ ಸಂಘಗಳ ಉಪನಿಬಂಧಕ ವಾಸುದೇವಮೂರ್ತಿ ಆದೇಶ ಹೊರಡಿಸಿದ್ದಾರೆ.

ಸಂಘದ ಮನ್ಮುಲ್ ನಿರ್ದೆಶಕ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿದ್ದ ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಹಾಲಿ ನಿರ್ದೆಶಕ ಶಂಕರ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಸಹಕಾರ ಇಲಾಖೆ ಬೈ ಲಾ ಪ್ರಕಾರ ಸಹಕಾರ ವರ್ಷದಲ್ಲಿ ಯಾವುದೇ ವ್ಯಕ್ತಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೆಶಕ ಸಂಘದ ಚುನಾವಣೆಗೆ ಸ್ಪರ್ಧೆ ಮಾಡಬೇಕಾದರೆ ಅಥವಾ ನಿರ್ದೆಶಕನಾಗಿ ಆಯ್ಕೆಯಾದ ನಂತರ ಒಂದು ವರ್ಷದಲ್ಲಿ ಕನಿಷ್ಠ 180ದಿನ ಸಂಘಕ್ಕೆ ಹಾಲು ಪೂರೈಸುವುದು ನಿಯಮವಾಗಿದೆ. ಆದರೆ, ಗೊರವನಹಳ್ಳಿ ಹಾಲು ಉತ್ಪಾದಕರ ಸಂಘದ ಅನರ್ಹಗೊಂಡಿರುವ 8 ಮಂದಿ ನಿರ್ದೆಶಕರು ಸಹಕಾರ ಸಂಘದ ಬೈಲಾ ಉಲ್ಲಂಘಿಸಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಜೆಡಿಎಸ್‌ ಬೆಂಬಲಿತ ಸದಸ್ಯರಾದ ಸಂತೋಷ್‌, ಕೃಷ್ಣ, ಚಂದ್ರಶೇಖರ್‌,ಚಿಕ್ಕಣ್ಣ, ರಾಮಚಂದ್ರ ಸೇರಿದಂತೆ ಹಲವರು ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಸಲ್ಲಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಜೆಡಿಎಸ್‌ ಬೆಂಬಲಿತ ಸದಸ್ಯರ ಪ್ರತಿಭಟನೆಗೆ ಮಣಿದ ಇಲಾಖೆಯ ಉಪನಿಬಂಧಕ ವಾಸುದೇವಮೂರ್ತಿ, ಏಳು ಕಾಂಗ್ರೆಸ್‌ ಹಾಗೂ ಓರ್ವ ಜೆಡಿಎಸ್‌ ಸದಸ್ಯನ ಸದಸ್ಯತ್ವ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಪನಿಬಂಧಕರ ಆದೇಶ ಪ್ರಶ್ನಿಸಿ ಅನರ್ಹಗೊಂಡ ಸದಸ್ಯರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.