ಬೆಂಗಳೂರು (ನ.02): ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ವಿದ್ಯಾರ್ಥಿಯೊಬ್ಬನ ಪೋಷಕರನ್ನು ನಂಬಿಸಿದ ವಂಚಕರು 8 ಲಕ್ಷ ವಸೂಲಿ ಮಾಡಿರುವ ಘಟನೆ ನಡೆದಿದೆ.

ರಾಜಸ್ಥಾನದ ಮೂಲದ ಉದ್ಯಮಿ ಅಮಿತ್‌ ಶರ್ಮಾ ಎಂಬುವರೇ ಮೋಸ ಹೋಗಿದ್ದು, ಈ ಸಂಬಂಧ ಜತಿನ್‌, ಮನೇಶ್‌ ಕುಮಾರ್‌ ಮತ್ತು ಪುಸ್ಕರ್‌ ಎಂಬುವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ಅಮಿತ್‌ ಅವರ ಮೊಬೈಲ್‌ಗೆ ಕರೆ ಮಾಡಿದ ಜತಿನ್‌, ಮೆಡಿಕಲ್‌, ಇಂಜಿನಿಯರಿಂಗ್‌ ಸೀಟ್‌ ಕೊಡಿಸುವ ಏಜೆನ್ಸಿ ನಡೆಸುತ್ತಿದ್ದೇನೆ. ದೆಹಲಿಯಲ್ಲಿ ಕಚೇರಿ ಇದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ನಿಮ್ಮ ಮಗನಿಗೆ ಕಂಪ್ಯೂಟರ್‌ ಸೈನ್ಸ್‌ ಸೀಟ್‌ ಕೊಡಿಸುತ್ತೇವೆ. ಇದಕ್ಕೆ .8 ಲಕ್ಷ ವೆಚ್ಚವಾಗಲಿದೆ ಎಂದಿದ್ದ.

ಈ ಮಾತು ನಂಬಿದ ಅಮಿತ್‌, ಅ.28ರಂದು ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾಲೇಜು ಬಳಿಗೆ ಹೋಗಿದ್ದರು. ಆ ವೇಳೆಗೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕಾಯುತ್ತಿದ್ದ ಜತಿನ್‌ ಅವರಿಂದ .8.4 ಲಕ್ಷ ಹಾಗೂ ವಿದ್ಯಾರ್ಥಿಯ ದಾಖಲೆಗಳನ್ನು ಪಡೆದಿದ್ದ. ಬಳಿಕ ಇಲ್ಲಿಯೇ ಕುಳಿತುಕೊಳ್ಳಿ. ಒಳಗೆ ಹೋಗಿ ಕಾಲೇಜಿನ ಆಡಳಿತ ಮಂಡಳಿ ಬಳಿ ಮಾತನಾಡಿಕೊಂಡು ಬರುವುದಾಗಿ ಹೇಳಿ ಆತ ಪರಾರಿಯಾಗಿದ್ದ. ಇತ್ತ ಕ್ಯಾಂಟಿನ್‌ನಲ್ಲಿ ಕಾಯುತ್ತಿದ್ದ ಅಮಿತ್‌ಗೆ ಎಷ್ಟುಹೊತ್ತಾದರೂ ಜತಿನ್‌ ಸುಳಿವು ಸಿಕ್ಕಿಲ್ಲ. ಕೊನೆಗೆ ಬೇಸತ್ತ ಆತನ ಮೊಬೈಲ್‌ ಕರೆ ಮಾಡಿದರೆ ಸಂಪರ್ಕ ಕಡಿತವಾಗಿತ್ತು. ಬಳಿಕ ಅವರಿಗೆ ಮೋಸ ಹೋಗಿರುವುದು ಅರಿವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.