ಮಂಗಳೂರು(ಜೂ.06): ಇಲ್ಲಿನ ನೆಟ್ಲಮುಡ್ನೂರು ಗ್ರಾಮದ ವೃದ್ಧ ಮಹಿಳೆಯೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದು ತಾಲೂಕಿನಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

ಅವರು ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆಂದು ದಾಖಲಾಗಿದ್ದರು. ಈ ಮಧ್ಯೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೋನಾ ಪಾಸಿಟಿವ್‌ ವರದಿ ಬಂದಿದ್ದು, ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಟ್ಲಮುಡ್ನೂರು ಗ್ರಾಮದ ಕುಕ್ಕರಬೆಟ್ಟುವಿನಲ್ಲಿರುವ ಅವರ ಮನೆಯಲ್ಲಿದ್ದ ಇತರ ಇಬ್ಬರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ದಕ್ಷಿಣ ಕನ್ನಡ ಕೊರೋನಾದ ಮುಂಬೈ ಸಂಪರ್ಕ ಮತ್ತೆ ಮುಂದುವರಿದಿದೆ. ಶುಕ್ರವಾರ ಒಟ್ಟು 8 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಏಳು ಮಂದಿ ಮುಂಬೈನಿಂದ ಆಗಮಿಸಿದವರಾಗಿದ್ದರೆ, ಒಂದು ಪ್ರಕರಣದಲ್ಲಿ ಬಂಟ್ವಾಳದ ನಿವಾಸಿಯೊಬ್ಬರಿಗೂ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಒಟ್ಟು 12 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 88ಕ್ಕೇರಿದೆ.

ರಾಜ್ಯಸಭೆ ಟಿಕೆಟ್‌ ಪಕ್ಷದ ತೀರ್ಮಾನವೇ ಅಂತಿಮ: ಜಾರಕಿಹೊಳಿ

ಮೇ ತಿಂಗಳಲ್ಲಿ ಮುಂಬೈನಿಂದ ಆಗಮಿಸಿದ 58, 36, 52, 43, 24, 48, 43 ವರ್ಷದ ಪುರುಷರು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಮಂಗಳೂರಿಗೆ ಆಗಮಿಸಿದ್ದರು. ಈ ಎಲ್ಲರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದೀಗ ಪಾಸಿಟಿವ್‌ ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಬಂಟ್ವಾಳದ 60 ವರ್ಷ ವಯಸ್ಸಿನ ಮಹಿಳೆಗೆ ಕೊರೋನಾ ದೃಢಪಟ್ಟಿದ್ದು, ಈ ಸೋಂಕಿನ ಮೂಲವನ್ನು ಜಿಲ್ಲಾಡಳಿತ ಪ್ರಕಟಪಡಿಸಿಲ್ಲ. ಇದು ಆತಂಕ ಮೂಡಿಸಿದೆ. ಸದ್ಯ ಇವರೆಲ್ಲರನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.

‘ಕೆಲವು ಮೆಂಟಲ್‌ಗಳು ಈಗ ಮನ ಬಂದಂತೆ ಮಾತಾಡ್ತಾರೆ’

12 ಮಂದಿ ಗುಣಮುಖ: ಆಶಾದಾಯಕ ಬೆಳವಣಿಗೆಯಲ್ಲಿ ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ಮಂದಿ ಪುರುಷರು, 4 ಮಹಿಳೆಯರು ಸೇರಿ 12 ಮಂದಿ ಶುಕ್ರವಾರ ಡಿಸ್ಚಾಜ್‌ರ್‍ ಆಗಿದ್ದಾರೆ. ಇವರೆಲ್ಲರೂ 52 ವರ್ಷದೊಳಗಿನವರು ಎನ್ನುವುದು ವಿಶೇಷ. 29, 48, 30, 17, 52, 31, 34, 47 ವರ್ಷದ ಪುರುಷರಾಗಿದ್ದರೆ, ಉಳಿದವರು 31, 38, 35, 46 ವರ್ಷದ ಮಹಿಳೆಯರು. ಇವರ ಡಿಸ್ಚಾಜ್‌ರ್‍ನೊಂದಿಗೆ ಪ್ರಸ್ತುತ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 56ಕ್ಕೆ ಇಳಿದಿದೆ.

ಪರೀಕ್ಷೆ ಸಂಖ್ಯೆ ಇಳಿಮುಖ!

ಕೊರೋನಾ ಆರಂಭದಲ್ಲಿ ನೂರಾರು ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದರೆ, ಇದೀಗ ಈ ಸಂಖ್ಯೆ ತೀವ್ರ ಇಳಿಮುಖವಾಗಿದೆ. ಶುಕ್ರವಾರ ಕೇವಲ 84 ಮಂದಿಯ ಸ್ಯಾಂಪಲ್‌ ಮಾತ್ರ ಸಂಗ್ರಹಿಸಲಾಗಿದೆ. ಶುಕ್ರವಾರ 100 ಮಂದಿಯ ವರದಿ ಬಂದಿದ್ದು, ಅವರಲ್ಲಿ 92 ನೆಗೆಟಿವ್‌ ಆಗಿವೆ. 50 ಮಂದಿಯ ಮಂದಿಯ ವರದಿ ನಿರೀಕ್ಷಣೆಯಲ್ಲಿದೆ.