ಬಸ್ಸಲ್ಲಿ ಜೊತೆಯಾಗಿ ಸಾಗುತ್ತಿದ್ದ ಅನ್ಯಕೋಮಿನ ಜೋಡಿಯ ಮೇಲೆ  ಗುಂಪೊಂದು ಹಲ್ಲೆ ನಡೆಸಿದ್ದು ಈ  ಸಂಬಂಧ 8 ಮಂದಿಯನ್ನು ಬಂಧಿಸಲಾಗಿದೆ. 

 ಮಂಗಳೂರು (ಏ.03):  ಮಂಗಳೂರಿನಿಂದ ಬೆಂಗಳೂರಿಗೆ ಜೊತೆಯಾಗಿ ಖಾಸಗಿ ಬಸ್‌ನಲ್ಲಿ ಸಂಚರಿಸುತ್ತಿದ್ದ ಭಿನ್ನ ಕೋಮಿನ ಜೋಡಿ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಗರದ ಪಂಪ್‌ವೆಲ್‌ ಬಳಿ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇರಿತಕ್ಕೊಳಗಾಗಿರುವ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಯುವತಿ ನೀಡಿದ ದೂರಿನನ್ವಯ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ವಿವರ: ಭಿನ್ನ ಕೋಮಿನ ಯುವಕ ಹಾಗೂ ಯುವತಿ ರಾತ್ರಿ ಬಿಜೈನಲ್ಲಿ ಬೆಂಗಳೂರಿಗೆ ತೆರಳಲು ಖಾಸಗಿ ಬಸ್ಸನ್ನೇರಿದ್ದರು. ಪಂಪ್‌ವೆಲ್‌ನಲ್ಲಿ ಬಸ್ಸನ್ನೇರಿದ ತಂಡ ಜೊತೆಯಾಗಿದ್ದ ಯುವಕ ಮತ್ತು ಯುವತಿಯನ್ನು ಕೆಳಗೆ ಇಳಿಸಿ ಯುವಕನಿಗೆ ಮಾರಕಾಯುಧದಿಂದ ಇರಿದ್ದರು. ಈ ವೇಳೆ ಯುವತಿ ಮೇಲೆಯೂ ಹಲ್ಲೆ ನಡೆದಿದೆ. ಗಾಯಗೊಂಡ ಯುವಕ ಜೋಕಟ್ಟೆಸಮೀಪದ ನಿವಾಸಿ ಅಸ್ಜಿದ್‌ ಅನ್ವರ್‌ ಮೊಹಮ್ಮದ್‌ ಎಂದು ಹೆಸರಿಸಲಾಗಿದೆ.

ಅಂತರ್ಜಾತಿ ಮದುವೆಯಾದವರಿಗೆ ಸರ್ಕಾರದ ರಕ್ಷಣೆ, ಏನಿದು ಸೇಫ್ ಹೌಸ್? ...

ಯುವಕ ಮತ್ತು ಯುವತಿ ಇಬ್ಬರೂ 23ರ ಹರೆಯದವರಾಗಿದ್ದು, ಸ್ಥಳೀಯರಾಗಿದ್ದರು. ಯುವತಿಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಲು ಸಂದರ್ಶನಕ್ಕೆ ತೆರಳಬೇಕಾಗಿತ್ತು. ಬೆಂಗಳೂರು ಪರಿಚಯ ಇಲ್ಲದ ಕಾರಣ ಸಹಪಾಠಿಯೇ ಆಗಿರುವ ಅನ್ಯಕೋಮಿನ ಯುವಕನನ್ನು ಜೊತೆಗೆ ಬರುವಂತೆ ಆಹ್ವಾನಿಸಿದ್ದಳು. ಇದು ತಂಡವೊಂದಕ್ಕೆ ಗೊತ್ತಾಗಿ ಹೊರಡುವಾಗಲೇ ತಡೆದಿದ್ದಾರೆ.