ನರೇಗಾ ಶ್ರಮದಿಂದ ಅಭಿವೃದ್ಧಿ ಕಂಡ 79 ಸ್ಮಶಾನ ಗ್ರಾಮೀಣ ಭಾಗದ ಚಿತಾಗಾರಕ್ಕೆ ಹೊಸ ರೂಪ ಮೂಲಭೂತ ಸೌಲಭ್ಯ ಕಲ್ಪಿಸಲು ಒತ್ತು

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ನ.20) : ಧಾರವಾಡ ಜಿಲ್ಲೆಯಲ್ಲಿರುವ ಸ್ಮಶಾನಗಳನ್ನು ನರೇಗಾ ಯೋಜನೆಯಡಿ ಹಂತ-ಹಂತವಾಗಿ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿರುವ ಒಟ್ಟು 374 ಸ್ಮಶಾನಗಳ ಪೈಕಿ ಈಗಾಗಲೇ 79 ಸ್ಮಶಾನಗಳಿಗೆ ಹೊಸ ರೂಪ ನೀಡಲಾಗುತ್ತಿದೆ. ಜತೆಗೆ ಕುಡಿಯುವ ನೀರು, ಬೆಳಕು ಸೇರಿ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ, ತಾಂತ್ರಿಕ ಸಹಾಯಕರ ನೇತೃತ್ವದಲ್ಲಿ ಗ್ರಾಪಂ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಕುರಿತು ತೀರ್ಮಾನಿಸಿ ಗ್ರಾಮ ಪಂಚಾಯಿತಿಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಅದನ್ನು ಪರಿಶೀಲಿಸಿ ಜಿಲ್ಲಾಡಳಿತ ಅನುಮೋದನೆ ನೀಡಲಿದೆ. ಈ ಮೂಲಕ ಈ ಹಿಂದೆ ಇದ್ದ ಸ್ಮಶಾನಕ್ಕೆ ಗ್ರಾಪಂ ಮೂಲಕ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಬ್ಯಾಲಾಳ ಗ್ರಾಮದಲ್ಲಿ ಇಲ್ಲ ಸ್ಮಶಾನ: ಅಂತ್ಯಕ್ರಿಯೆಗೆ ಪರದಾಟ

2022​​-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ 374 ಸ್ಮಶಾನಗಳಲ್ಲಿ 79 ಸ್ಮಶಾನಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಅನುಮೋದನೆ ನೀಡಿತ್ತು. ಅದರಂತೆ ಈಗಾಗಲೇ 50ಕ್ಕೂ ಅಧಿಕ ಸ್ಮಶಾನ ಅಭಿವೃದ್ಧಿ ಪೂರ್ಣಗೊಳಿಸಲಾಗಿದೆ. ಇನ್ನು ಕೆಲವಡೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಕೆಲವೆಡೆ ಕಾಮಗಾರಿ ಅರ್ಧಕ್ಕೆ ತಲುಪಿವೆ. ಜಿಲ್ಲೆಯ ಅಳ್ನಾವರ 2, ಅಣ್ಣಿಗೇರಿ 9, ಧಾರವಾಡ 34, ಹುಬ್ಬಳ್ಳಿ 7, ಕಲಘಟಗಿ 15, ಕುಂದಗೋಳ 4, ನವಲಗುಂದದಲ್ಲಿ 8 ಸ್ಮಶಾನಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

ಸ್ಮಶಾನದ ಜಾಗ ಆಧರಿಸಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಜಾಗ ಸಮತಟ್ಟುಗೊಳಿಸಿ, ಸುತ್ತಲೂ ಗಿಡ ನೆಟ್ಟು ತಂತಿಬೇಲಿ ಅಳವಡಿಸಲಾಗುತ್ತಿದೆ. ಕೆಲವೆಡೆ ತಡೆಗೋಡೆ ಅಗತ್ಯವಿದ್ದರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ . 16 ಲಕ್ಷ ವೆಚ್ಚದಲ್ಲಿ ಹೊಸ ಸ್ಮಶಾನ ನಿರ್ಮಿಸಲಾಗುತ್ತಿದೆ. 2 ಚಿತಾಗಾರವುಳ್ಳ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ಇನ್ನು ಅಗಡಿ, ಕೋಳಿವಾಡ, ಶರೇವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿ ಕಾಮಗಾರಿಯೂ ಪ್ರಗತಿಯಲ್ಲಿವೆ.

ಗ್ರಾಮೀಣ ಭಾಗದ ಸ್ಮಶಾನದಲ್ಲಿ ಜಾಗ ಸಮತಟ್ಟುಗೊಳಿಸಿ ಜನರು ಓಡಾಡಲೂ ಸೂಕ್ತ ರಸ್ತೆ ನಿರ್ಮಿಸಲಾಗುತ್ತಿದೆ. ಸುತ್ತಲು ಪ್ಲಾಂಟೇಶನ್‌ ಮಾಡಿ ಗಿಡ ನೆಡುವುದು, ಚಿತಾಗಾರ ದುರಸ್ತಿ ಮಾಡಲಾಗುತ್ತಿದೆ. ಒಟ್ಟಾರೆ ನರೇಗಾ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ ಸ್ಮಶಾನವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಎಂಐಎಸ್‌ ಸಂಯೋಜಕ ವಿನಾಯಕ ಕಬನೂರ.

Ballari News :ಹರಾಳು ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಪರದಾಟ

ಸ್ಮಶಾನದಲ್ಲಿ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಾಗ ಸಮತಟ್ಟುಗೊಳಿಸಿ ಸ್ಮಶಾನದ ಆವರಣದಲ್ಲಿ ಗಿಡ ನೆಟ್ಟು, ಅವಕಾಶವಿದ್ದರೆ ಕಾಂಪೌಂಡ್‌ ನಿರ್ಮಿಸುವಂತೆ ಎಲ್ಲ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಡಾ. ಸುರೇಶ ಇಟ್ನಾಳ, ಜಿಪಂ ಸಿಇಒ 

ತಾಲೂಕು ಒಟ್ಟು ಸ್ಮಶಾನ ಅಭಿವೃದ್ಧಿಪಡಿಸಿರುವುದು

  • ಅಳ್ನಾವರ 15 02
  • ಅಣ್ಣಿಗೇರಿ 25 09
  • ಧಾರವಾಡ 99 34
  • ಹುಬ್ಬಳ್ಳಿ 50 07
  • ಕಲಘಟಗಿ 87 15
  • ಕುಂದಗೋಳ 70 04
  • ನವಲಗುಂದ 28 08
  • ಒಟ್ಟು 374 79