Asianet Suvarna News Asianet Suvarna News

ರಾಜಧಾನಿಯ ಎಲ್ಲೆಡೆ ರಾರಾಜಿಸಿದ ತಿರಂಗಾ: ಶಾಲೆ ಕಾಲೇಜುಗಳಲ್ಲಿ ಸಂಭ್ರಮ

ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಸಂಘ ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಉತ್ತಮ ಸಿಬ್ಬಂದಿಗೆ ಸನ್ಮಾನ, ರೋಗಿಗಳಿಗೆ ಹಣ್ಣುಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.

77th Independence Day celebrations in bengaluru gvd
Author
First Published Aug 16, 2023, 6:23 AM IST

ಬೆಂಗಳೂರು (ಆ.16): ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಸಂಘ ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಉತ್ತಮ ಸಿಬ್ಬಂದಿಗೆ ಸನ್ಮಾನ, ರೋಗಿಗಳಿಗೆ ಹಣ್ಣುಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಹಬ್ಬವನ್ನು ಆಚರಿಸಲಾಯಿತು. 

ಆಟೋ, ಬೈಕ್‌ ಸೇರಿ ಇತರೆ ವಾಹನಗಳಲ್ಲಿ ಚಾಲಕರು ತ್ರಿವರ್ಣ ಧ್ವಜ ಕಟ್ಟಿಕೊಂಡು, ತ್ರಿವರ್ಣದ ಬಲೂನ್‌ಗಳನ್ನು ಅಳವಡಿಸಿಕೊಂಡು ನಗರದೆಲ್ಲೆಡೆ ಸಂಚರಿಸಿ ಸಂಭ್ರಮಿಸಿದರು. ಶಾಲಾ ಕಾಲೇಜುಗಳಲ್ಲಿನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಸೈನಿಕರು, ಅರೆಸೇನಾಪಡೆ, ಪೊಲೀಸ್‌, ಸ್ಕೌಟ್ಸ್‌ ಮತ್ತು ಗೈಡ್‌್ಸ, ಎನ್‌ಸಿಸಿ, ಗೃಹ ರಕ್ಷಕದಳದ ಸ್ವಯಂ ಸೇವಕರು ಪಥಸಂಚಲನದ ಮೂಲಕ ಗಮನ ಸೆಳೆದರು.

ಮುಂದಿನ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ

ಹೋರಾಟಗಾರರ ತ್ಯಾಗದ ಫಲ: ಹೋರಾಟಗಾರರ ತ್ಯಾಗದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಜೋಶಿ ಅಭಿಪ್ರಾಯ ಪಟ್ಟರು. ಕಸಾಪ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಾಂತಿ, ಅಹಿಂಸೆ ಹಾಗೂ ಅಧ್ಯಾತ್ಮಿಕ ಕ್ರಾಂತಿಯ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಎಂದು ತಿಳಿಯದೇ ನಮ್ಮ ದೇಶವನ್ನು ನಾವು ಕಾಪಾಡಿಕೊಂಡು ಅಭಿಮಾನದಿಂದ ಇರುವ ಜವಾಬ್ದಾರಿ ಎಂದರು. ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ.ಬಿ.ಎಂ.ಪಟೇಲ್‌ ಪಾಂಡು, ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್‌.ಎಸ್‌.ಶ್ರೀಧರ ಮೂರ್ತಿ ಇದ್ದರು.

‘ವೀರರ ಶೌರ್ಯ ಸ್ಮರಿಸೋಣ’: ನಗರದ ಏರ್‌ಫೋರ್ಸ್‌ ಸ್ಟೇಷನ್‌ನ ಡಿಪೋ ಕ್ರೀಡಾಂಗಣಲ್ಲಿ ಸ್ವಾತಂತ್ರ್ಯ ಸಂಭ್ರಮದಿಂದ ನಡೆಯಿತು. ಕಮಾಂಡಿಂಗ್‌ ಅಧಿಕಾರಿ ರಾಜೇಶ್‌ ಭಂಡಾರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಡಿದ ವೀರರ ಶೌರ್ಯ, ತ್ಯಾಗವನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ಸೈನಿಕರಾಗಿ ದೇಶಸೇವೆಗೆ ಸದಾ ಸಿದ್ಧರಾಗಿರಬೇಕು ಎಂದರು. ವಿದ್ಯಾರ್ಥಿಗಳಿಂದ ವಾಯುದಳದ ಸಾಹಸ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಹಸ ಮೆರೆದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ರೈಲ್ವೆ ಆಸ್ಪತ್ರೆಯ ಶುದ್ಧ ನೀರಿನ ಯಂತ್ರಕ್ಕೆ ಚಾಲನೆ: ನೈಋುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ರೈಲ್ವೆ ಇನ್‌ಸ್ಟಿಟ್ಯೂಟ್‌ ಮೈದಾನದಲ್ಲಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೀಶ್‌ ಮೋಹನ್‌ ಧ್ವಜಾರೋಹಣ ನೆರವೇರಿಸಿದರು. ನಂತರ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್‌) ಹಾಗೂ ಸ್ಕೌಟ್ಸ್‌ ಮತ್ತು ಗೈಡುಗಳ ಪರೇಡ್‌ ವೀಕ್ಷಿಸಿ ಆರ್‌ಪಿಎಫ್‌ನಿಂದ ಗೌರವಾರ್ಪಣೆ ಸ್ವೀಕರಿಸಿದರು. ಕೇಂದ್ರೀಯ ವಿದ್ಯಾಲಯ, ಶಾಮ ವಿದ್ಯಾಶಾಲೆ ಹಾಗೂ ಸ್ಟೆಪ್ಪಿಂಗ್‌ ಸ್ಟೋನ್‌ನ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಆರ್‌ಪಿಎಫ್‌ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ನೈಋುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಬೆಂಗಳೂರು ವಿಭಾಗೀಯ ಅಧ್ಯಕ್ಷೆ ಶಿಖಾ ಅಗರ್ವಾಲ್‌ ಅವರು ರೈಲ್ವೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು, ಪಾನೀಯ ವಿತರಿಸಿದರು. ರೈಲ್ವೆ ಆಸ್ಪತ್ರೆಗೆ 50 ಲೀಟರ್‌ ಸಾಮರ್ಥ್ಯದ ನೀರು ಶುದ್ಧೀಕರಣ ಯಂತ್ರಕ್ಕೆ ಮುಖ್ಯ ವೈದ್ಯಕೀಯ ನಿರೀಕ್ಷಕಿ ಡಾ.ಶೋಭಾ ಜಗನ್ನಾಥ್‌ ಚಾಲನೆ ನೀಡಿದರು.

ಬಿಎಂಟಿಸಿ ಸಿಬ್ಬಂದಿಗೆ ಬಹುಮಾನ ವಿತರಣೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ಧ್ವಜಾರೋಹಣ ನಡೆಸಿದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು. ಉತ್ತಮ ಸಿಬ್ಬಂದಿಗೆ ನಗದು ಬಹುಮಾನ ಹಾಗು ಪ್ರಶಂಸನಾ ಪತ್ರ ವಿತರಿಸಿದರು. ನಿಗಮದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

‘ಜವಾಬ್ದಾರಿಯಿಂದ ಕೆಲಸ ಮಾಡೋಣ’: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್‌ ಧ್ವಜಾರೋಹಣ ನಡೆಸಿ ಗಾಂಧೀಜಿ, ಅಂಬೇಡ್ಕರ್‌ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿ, ಸಾಕಷ್ಟುಮಹಾತ್ಮರ ತ್ಯಾಗ ಮತ್ತು ಬಲಿದಾನದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂಬುದನ್ನು ನೆನಪಿಟ್ಟುಕೊಂಡು ಜವಾಬ್ದಾರಿ, ನಿಷ್ಠೆ ಮತ್ತು ದಕ್ಷತೆಯಿಂದ ನಮ್ಮ ಕಾರ್ಯಗಳಲ್ಲಿ ತೊಡಗಬೇಕು ಎಂದರು. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಸರ್ಕಾರಿ ಉದ್ಯಾನವನ ಸ್ಪರ್ಧೆಯಲ್ಲಿ ನಿಗಮಕ್ಕೆ ಪ್ರಥಮ ಬಹುಮಾನ ಲಭಿಸಿದ ಹಿನ್ನೆಲೆಯಲ್ಲಿ ಉದ್ಯಾನವನ ನಿರ್ವಹಣೆ ಮಾಡುತ್ತಿರುವ ಕಾರ್ಮಿಕರಿಗೆ ಅಭಿನಂದಿಸಿದರು.

ನಾಡು ಕಟ್ಟೋಣ, ಲಿಂಗರಾಜ ಗಾಂಧಿ: ದೇಶ, ನಾಡು ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು. ನಗರ ವಿವಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹಾಪುರುಷರು ತ್ಯಾಗ, ಬಲಿದಾನ ಮಾಡಿದ್ದು ಅವರ ಆದರ್ಶ ಪಾಲಿಸೋಣ. ವಿವಿಧತೆಯಲ್ಲಿ ಏಕತೆ ಒಳಗೊಂಡ ನಮ್ಮ ನಾಡಿನ ಯುವ ಶಕ್ತಿಯು ದೇಶ, ನಾಡು ಕಟ್ಟುವಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಕುಲಸಚಿವ ಜವರೇಗೌಡ, ವಿ.ಲೋಕೇಶ್‌, ವಿತ್ತಾಧಿಕಾರಿ ಜಿ.ಪಿ.ರಘು, ಪ್ರೊ.ಶಿವಶಂಕರ್‌ ಇದ್ದರು.

ಬಿಇಎಲ್‌ನಲ್ಲಿ ಸ್ವಾತಂತ್ರ್ಯ ದಿನ: ಜಾಲಹಳ್ಳಿಯ ಭಾರತ್‌ ಎಲೆಕ್ಟ್ರಾನಿಕ್ಸ್‌ನ ಸಪ್ತ ಶೈಕ್ಷಣಿಕ ಸಂಸ್ಥೆಗಳಿಂದ ಬಿಇಎಲ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಬಿಇಇಐ ಅಧ್ಯಕ್ಷ ಬಿ.ಪಿ.ಪಹುಜ್‌ ನೆರವೇರಿಸಿದರು. ನಂತರ ಅವರು ಎನ್‌ಸಿಸಿ, ಪ್ಯಾರಡೇಯ ಕೆಡೆಟ್ಸ್‌ಗಳೊಂದಿಗೆ ಪಥ ಸಂಚಲನದಲ್ಲಿ ಪಾಲ್ಗೊಂಡು ಭಾರತಾಂಬೆಗೆ ಗೌರವ ಸಲ್ಲಿಸಿದರು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ವಿದ್ಯಾರ್ಥಿಗಳು ದೇಶ ಭಕ್ತಿ ಎತ್ತಿಹಿಡಿಯುವ ಅದ್ಭುತ ನೃತ್ಯಗಳ ಪ್ರದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ದೇಶಕ ಹಾಗೂ ಬೆಂಗಳೂರು ಕಂಪ್ಲೆಕ್ಸ್‌ ಹೆಚ್ಚುವರಿ ನಿರ್ದೇಶಕ ಮನೋಜ್‌ ಜೈನ್‌ ಇದ್ದರು. ಬೆಂಗಳೂರು ಜಿಲ್ಲೆ ಮಹಿಳಾ ಖೋ-ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಜಾಲಹಳ್ಳಿಯ ಬಿಇಎಲ್‌ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ತಂಡಕ್ಕೆ ಈ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಇಇಐನ ಎಂ.ಸಿ.ಸಪ್ತ, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಇದ್ದರು.

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ರಾಜ್ಯದ ರೈತರ ಹಿತ ಕಾಯುವಂತೆ ಸಿಎಂಗೆ ಬೊಮ್ಮಾಯಿ ಪತ್ರ

ಸ್ಟೇಟ್‌ ಮಾರ್ಕೇಟಿಂಗಿಂದ ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕ ಸ್ಟೇಟ್‌ ಮಾರ್ಕೆಟಿಂಗ್‌ ಕಮ್ಯೂನಿಕೇಷನ್‌ ಆ್ಯಂಡ್‌ ಅಡ್ವರ್ಟೈಸಿಂಗ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಬಿ.ಪೂಜಾರಿ ಧ್ವರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾನವ ಕಂಪ್ಯೂಟರ್‌ ಖ್ಯಾತಿಯ ಬಸವರಾಜ ಉಮ್ರಾಣಿ ಆಗಮಿಸಿದ್ದರು. ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್‌.ನಂದೀಶ್‌, ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಬೃಹತ್‌ ತಿರಂಗಾ ಯಾತ್ರೆ: ಕಾರ್ಲಟನ್‌ ಮೀಡಿಯಾ ಈವೆಂಟ್ಸ್‌ ಮತ್ತು ಕಲಿಯುಗ್‌ ಈವೆಂಟ್ಸ್‌ನಿಂದ ನಗರದ ಸ್ವಾತಂತ್ರ ಉದ್ಯಾನವನದಿಂದ ವಿಧಾನಸೌಧದವರೆಗೆ ಬೃಹತ್‌ ತಿರಂಗಾ ಯಾತ್ರೆ ನಡೆಯಿತು. 500 ಮೀಟರ್‌ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು 300ಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಭಾಗವಹಿಸಿದ್ದರು. ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್‌, ಸುದಯ ಫೌಂಡೇಷನ್‌ನ ದಿವ್ಯಾ ರಂಗೇನಹಳ್ಳಿ, ಡಾ.ಪಿ.ಎಸ್‌.ಕುಮಾರಸ್ವಾಮಿ ಇದ್ದರು.

Follow Us:
Download App:
  • android
  • ios