2022ರಲ್ಲಿ ಬೆಂಗಳೂರಲ್ಲಿ ಅಪಘಾತಕ್ಕೆ 772 ಬಲಿ..!

ಕಳೆದ ವರ್ಷ 752 ಅಪಘಾತಕ್ಕೆ 772 ಬಲಿ, ವರ್ಷದಿಂದ ವರ್ಷಕ್ಕೆ ಅಪಘಾತಗಳು, ಮೃತರ ಸಂಖ್ಯೆ ಏರಿಕೆ, ಅನಕ್ಷರಸ್ಥರಿಗಿಂತಲೂ ಅಕ್ಷರಸ್ಥರೇ ಹೆಚ್ಚು ಅಪಘಾತದಿಂದ ಸಾವು 

772 People Dies of Accidents in Bengaluru in 2022 grg

ಬೆಂಗಳೂರು(ಜೂ.18):  ಸಾಕಷ್ಟು ಕಾನೂನು, ಬಿಗಿ ಕ್ರಮ ಕೈಗೊಂಡಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತ ಪ್ರಕರಣಗಳು ಹಾಗೂ ಮೃತರ ಸಂಖ್ಯೆ ಏರಿಕೆಯಾಗುತ್ತಿದೆ. 2022ನೇ ಸಾಲಿನಲ್ಲಿ ಸಂಭವಿಸಿದ ಒಟ್ಟು 752 ರಸ್ತೆ ಅಪಘಾತ ಪ್ರಕರಣಗಳಲ್ಲಿ 772 ಮಂದಿ ಮೃತಪಟ್ಟಿದ್ದು, ಈ ಪೈಕಿ ಹೆಲ್ಮೆಟ್‌ ಧರಿಸಿಯೂ 319 ಮಂದಿ ಹಾಗೂ 247 ಪಾದಚಾರಿಗಳು ಮೃತರಾಗಿದ್ದಾರೆ. ನಗರ ಸಂಚಾರ ಪೊಲೀಸರು 2020, 2021, 2022ನೇ ಸಾಲಿನಲ್ಲಿ ನಗರದ ರಸ್ತೆಗಳಲ್ಲಿ ಸಂಭವಿಸಿರುವ ಅಪಘಾತಗಳ ಕುರಿತು ಬಿಡುಗಡೆ ಮಾಡಿರುವ ವಿಮರ್ಶಾತ್ಮಕ ವರದಿಯಲ್ಲಿ ಈ ಅಂಶ ವಿವರಿಸಿದ್ದಾರೆ.

ವರದಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತ ಪ್ರಕರಣಗಳು, ಮಾರಣಾಂತಿಕ ಅಪಘಾತಗಳು, ಮೃತರ ಸಂಖ್ಯೆ, ಅಪಘಾತದ ಮಾದರಿ, ವಾಹನಗಳ ಮಾದರಿ, ಮೃತಪಟ್ಟರ ವಯಸ್ಸು, ವಿದ್ಯಾರ್ಹತೆ, ವೃತ್ತಿ, ರಸ್ತೆಗಳ ಮಾದರಿ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು, ಅಪಘಾತಕ್ಕೆ ಕಾರಣಗಳು, ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಸೇರಿದಂತೆ ಇತರೆ ಅಂಶಗಳು ಒಳಗೊಂಡಂತೆ ವಿಶ್ಲೇಷಣೆ ಮಾಡಲಾಗಿದೆ.

ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಕುಟುಂಬ ಕಾರಿಗೆ ಟ್ರಕ್ ಡಿಕ್ಕಿ; ಯುವತಿ ಸಾವು, 9 ಮಂದಿ ಗಂಭೀರ!

ಅಪಘಾತ ಪ್ರಕರಣಗಳನ್ನು ಮಾರಣಾಂತಿಕ ಅಪಘಾತ ಪ್ರಕರಣಗಳು ಹಾಗೂ ಸ್ವಯಂ ಅಪಘಾತ ಪ್ರಕರಣಗಳು ಎಂದು ಎರಡು ರೀತಿ ವಿಂಗಡಿಸಲಾಗಿದೆ. 2020, 2021, 2022ರಲ್ಲಿ ಕ್ರಮವಾಗಿ 468, 468, 577 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ಕ್ರಮವಾಗಿ 493, 499, 595 ಮಂದಿ ಮೃತಪಟ್ಟಿದ್ದಾರೆ. 164, 150, 175 ಸ್ವಯಂ ಅಪಘಾತಗಳು ಸಂಭವಿಸಿದ್ದು, ಕ್ರಮವಾಗಿ 164, 152, 177 ಮಂದಿ ಮೃತಪಟ್ಟಿದ್ದಾರೆ.

2020ಕ್ಕೆ ಹೋಲಿಕೆ ಮಾಡಿದಾಗ 2022ರಲ್ಲಿ 120 ಅಪಘಾತ ಪ್ರಕರಣಗಳು ಹೆಚ್ಚಳವಾಗಿದೆ. ಮೃತರ ಸಂಖ್ಯೆಯೂ 115 ಹೆಚ್ಚಳವಾಗಿದೆ. ಸ್ವಯಂ ಅಪಘಾತಗಳಲ್ಲಿ ಸರಾಸರಿ ಕಳೆದ ಮೂರು ವರ್ಷಗಳಲ್ಲಿ ವರ್ಷವೊಂದಕ್ಕೆ 163 ಮಂದಿ ಸ್ವಯಂ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2020ನೇ ಸಾಲಿನಲ್ಲಿ ಅಪಘಾತ ಪ್ರಮಾಣ ಗಣನೀಯವಾಗಿ ಇಳಿಕೆಯಾಗಲು ಕೊರೋನಾ ಸಮಯದಲ್ಲಿ ಲಾಕ್‌ಡೌನ್‌ ಸಲುವಾಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು ಪ್ರಮುಖ ಕಾರಣವಾಗಿದೆ.

3 ವರ್ಷದ ರಸ್ತೆ ಅಪಘಾತ ಪ್ರಕರಣ

ವಿವರ 2020 2021 2022
ಮಾರಣಾಂತಿಕ ಅಪಘಾತಗಳು 468 468 577
ಮೃತರು 493 499 595
ಸ್ವಯಂ ಅಪಘಾತ 164 150 175
ಮೃತರು 164 152 177
ಒಟ್ಟು ಅಪಘಾತಗಳು 632 618 752
ಒಟ್ಟು ಮೃತರು 657 651 772
ಪಾದಾಚಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾವು:
ಮೃತ ವ್ಯಕ್ತಿ 2020 2021 2022(ವರ್ಷ)
ಪಾದಚಾರಿ 164 161 247
ಸೈಕಲ್‌ ಸವಾರ 07 09 15
ದ್ವಿಚಕ್ರ ವಾಹನ 332 328 341
ದ್ವಿಚಕ್ರ ಹಿಂಬದಿ ಸವಾರ 80 76 90
ತ್ರಿಚಕ್ರ ವಾಹನ ಸವಾರ 17 16 17

ಪ್ರೌಢ ಶಿಕ್ಷಣ ಪಡೆದವರೇ ಅಪಘಾತಕ್ಕೆ ಹೆಚ್ಚು ಬಲಿ

ಕಳೆದ ಮೂರು ವರ್ಷಗಳ ಅಪಘಾತ ಪ್ರಕರಣಗಳಲ್ಲಿ ಪ್ರೌಢ ಶಿಕ್ಷಣ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತರಾಗಿದ್ದಾರೆ. 2022ರಲ್ಲಿ 71 ಮಂದಿ ಅನಕ್ಷರಸ್ಥರು, 146 ಮಂದಿ ಪ್ರಾಥಮಿಕ ಶಿಕ್ಷಣ, 194 ಮಂದಿ ಪ್ರೌಢ ಶಿಕ್ಷಣ, 121 ಮಂದಿ ಪದವಿ ಪೂರ್ವ ಶಿಕ್ಷಣ, 126 ಮಂದಿ ಪದವಿಧರರು, 13 ಮಂದಿ ಸ್ನಾತಕೋತ್ತರ ಪದವಿಧರರು, 5 ಮಂದಿ ವೈದ್ಯಕೀಯ ಶಿಕ್ಷಣ, 37 ಮಂದಿ ತಾಂತ್ರಿಕ ಶಿಕ್ಷಣ, 15 ಮಂದಿ ವೃತ್ತಿಪರ ಶಿಕ್ಷಣ ಪಡೆದವರು ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ.

ಮೃತರಲ್ಲಿ ಪುರುಷರು ಹೆಚ್ಚು

ಕಳೆದ ಮೂರು ವರ್ಷಗಳ ಅಪಘಾತ ಪ್ರಕರಣಗಳಲ್ಲಿ ಮೃತರಾಗಿರುವವರು ಪುರುಷರ ಸಂಖ್ಯೆಯೇ ಹೆಚ್ಚಿದೆ. 2020ರಲ್ಲಿ 580 ಮಂದಿ ಪುರುಷರು ಮತ್ತು 77 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. 2021ರಲ್ಲಿ 553 ಮಂದಿ ಮಹಿಳೆಯರು ಮತ್ತು 98 ಮಹಿಳೆಯರು, 2022ರಲ್ಲಿ 665 ಮಂದಿ ಪುರುಷರು ಮತ್ತು 107 ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ. 21ರಿಂದ 30 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತರಾಗಿದ್ದಾರೆ.

ಖಾಸಗಿ ನೌಕರರೇ ಹೆಚ್ಚು ಸಾವು

ಕಳೆದ ಮೂರು ವರ್ಷಗಳ ಅಪಘಾತ ಪ್ರಕರಣಗಳಲ್ಲಿ ಖಾಸಗಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. 2022ರಲ್ಲಿ 72 ಮಂದಿ ವಿದ್ಯಾರ್ಥಿಗಳು, 34 ಮಂದಿ ಸರ್ಕಾರಿ ನೌಕರರು, 30 ಮಂದಿ ಅರೆ ಸರ್ಕಾರಿ ನೌಕರರು, 294 ಮಂದಿ ಖಾಸಗಿ ನೌಕರರು, 198 ಮಂದಿ ಸ್ವಯಂ ಉದ್ಯೋಗಿಗಳು, 22 ಮಂದಿ ನಿರುದ್ಯೋಗಿಗಳು, 38 ಮಂದಿ ಚಾಲನ ವೃತ್ತಿ, 33 ಮಂದಿ ಗೃಹಿಣಿಯರು, 19 ಮಂದಿ ನಿವೃತ್ತ ಸರ್ಕಾರಿ ನೌಕರರು ಹಾಗೂ 32 ಮಂದಿ ಅಪರಿಚಿತರು ಮೃತಪಟ್ಟಿದ್ದಾರೆ.

ಮೃತರಲ್ಲಿ ನಗರದ ನಿವಾಸಿಗಳೇ ಹೆಚ್ಚು

ಅಪಘಾತ ಪ್ರಕರಣಗಳಲ್ಲಿ ಮೃತರಾದವರ ಪೈಕಿ ಬೆಂಗಳೂರು ನಗರ ನಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2020, 2021, 2022ರಲ್ಲಿ ಕ್ರಮವಾಗಿ 413, 381, 464 ಮಂದಿ ಬೆಂಗಳೂರು ನಿವಾಸಿಗಳು, 116, 137, 139 ಮಂದಿ ಇತರೆ ಜಿಲ್ಲೆಯವರು, 106, 110, 137 ಮಂದಿ ಹೊರರಾಜ್ಯದವರು, 3, 21, 28 ವಿದೇಶದವರು, 21, 21, 28 ಮಂದಿ ಅಪರಿಚಿತರು ಮೃತಪಟ್ಟಿದ್ದಾರೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಭೀಕರ ಕಾರು ಅಪಘಾತ: ಚಾಲಕ ಸಾವು, ಮೂವರ ಸ್ಥಿತಿ ಗಂಭೀರ

ಬಿಎಂಟಿಸಿ ಬಸ್‌ಗೆ 33 ಮಂದಿ ಬಲಿ

ಕಳೆದ ಮೂರು ವರ್ಷಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಒಟ್ಟು 159 ಮಂದಿ ಬಲಿಯಾಗಿದ್ದಾರೆ. 2020, 2021, 2022ರಲ್ಲಿ ಕ್ರಮವಾಗಿ ಬಿಎಂಟಿಸಿ ಬಸ್‌ಗಳಿಗೆ 27, 27, 33, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ 8, 7, 15, ಖಾಸಗಿ ಬಸ್‌ಗಳಿಗೆ 9, 12, 21 ಮಂದಿ ಬಲಿಯಾಗಿದ್ದಾರೆ.

ಹೆಲ್ಮೆಟ್‌ ಧರಿಸಿಯೂ 319 ಮಂದಿ ಸಾವು!

ನಗರದಲ್ಲಿ ಕಳೆದ ವರ್ಷ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್‌ ಧರಿಸದೆ 89 ಮಂದಿ ಸವಾರರು ಹಾಗೂ 23 ಮಂದಿ ಹಿಂಬದಿ ಸವಾರರು ಮೃತಪಟ್ಟಿದ್ದಾರೆ. 2020ರಲ್ಲಿ 72 ಮಂದಿ ಸವಾರರು, 21 ಮಂದಿ ಹಿಂಬದಿ ಸವಾರರು, 2021ರಲ್ಲಿ 84 ಮಂದಿ ಸವಾರರು ಹಾಗೂ 29 ಮಂದಿ ಹಿಂಬದಿ ಸವಾರರು ಮೃತಪಟ್ಟಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ, ಕಳೆದ ವರ್ಷ ಹೆಲ್ಮೆಟ್‌ ಧರಿಸಿಯೂ 319 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 252 ಮಂದಿ ಸವಾರರು ಹಾಗೂ 67 ಮಂದಿ ಹಿಂಬದಿ ಸವಾರರು ಮೃತಪಟ್ಟಿದ್ದಾರೆ. 2020ರಲ್ಲಿ 259 ಮಂದಿ ಸವಾರರು ಹಾಗೂ 50 ಮಂದಿ ಹಿಂಬದಿ ಸವಾರರು, 2021ರಲ್ಲಿ 241 ಮಂದಿ ಸವಾರರು ಹಾಗೂ 50 ಮಂದಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸಿಯೂ ಅಪಘಾತದ ವೇಳೆ ಮೃತಪಟ್ಟಿದ್ದಾರೆ.

Latest Videos
Follow Us:
Download App:
  • android
  • ios