ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಹಕ್ಕು ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ಆಶಯದಿಂದ ದೂರದೃಷ್ಟಿಯ ವಿವಿಧ ಯೋಜನೆ ರೂಪಿಸಿದ ರಾಜ್ಯ ಸರ್ಕಾರ: ಸಚಿವ ಕೋಟ

ಕಾರವಾರ(ಆ.16): ಸಮಾಜ ಕಲ್ಯಾಣ ಇಲಾಖೆಯೂ ಸರ್ಕಾರಕ್ಕೆ ಮನವಿ ಮಾಡಿದ್ದರ ಫಲವಾಗಿ ರಾಜ್ಯದ 24 ಲಕ್ಷ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಬಡ ಕುಟುಂಬಗಳಿಗೆ 75 ಯುನಿಟ್‌ ಉಚಿತ ವಿದ್ಯುತ್‌ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಎಲ್ಲರಿಗೂ ಸಮಾನವಾಗಿ ಹಕ್ಕು ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ಆಶಯದಿಂದ ರಾಜ್ಯ ಸರ್ಕಾರವೂ ದೂರದೃಷ್ಟಿಯ ವಿವಿಧ ಯೋಜನೆ ರೂಪಿಸಿದ್ದು, ರೈತರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿ ವೇತನ, ಬಡವರಿಗೆ ಸಂಧ್ಯಾ ಸುರಕ್ಷಾ ಯೋಜನೆ, ವಿಧವೆಯರ ಹಾಗೂ ಅಂಗವಿಕಲರ ಮಾಸಾಶನ ಮೊತ್ತ ಹೆಚ್ಚಿಸಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆಯಡಿ ಜಿಲ್ಲೆಗೊಂದು ಗೋ ಶಾಲೆ ತೆರೆಯುವ ಉದ್ದೇಶದಿಂದ ಹಳಿಯಾಳ ತಾಲೂಕಿನಲ್ಲಿ .50 ಲಕ್ಷ ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಿದೆ. ಹೊಸದಾಗಿ 5 ಗೋಶಾಲೆಗಳು ಮಂಜೂರು ಮಾಡಲಾಗಿದೆ. ಜಾನುವಾರು ಚಿಕಿತ್ಸೆಗಾಗಿ ಪ್ರತಿ ತಾಲೂಕಿಗೆ ಪಶು ಸಂಜೀವಿನಿ ವಾಹನ ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

UTTARA KANNADA: ವೃಕ್ಷಮಾತೆಗೆ ಕೊಟ್ಟ ಮಾತು ಉಳಿಸಿದ ಶಾಸಕಿ ರೂಪಾಲಿ ನಾಯ್ಕ್‌

ಹಳಿಯಾಳ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಿ ಎಸ್‌. ಅವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಅಮೃತ ಮಹೋತ್ಸವದ ಅಂಗವಾಗಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ವಿವಾಹ ಸಹಾಯ ಧನ, ಹೆರಿಗೆ ಸಹಾಯಧನ, ಹಾಗೂ ನ್ಯೂಟ್ರಿಶನ್ಸ್‌ ಕಿಟ್‌ ಮತ್ತು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಿಸಲಾಯಿತು. ನಂತರ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೆಕರ್‌, ಕಾರವಾರ ನಗರಸಭೆ ಅಧ್ಯಕ್ಷ ಡಾ. ನೀತಿನ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನಾ ಪೆನ್ನೆಕರ್‌, ಜಿಪಂ ಸಿಇಒ ಪ್ರಿಯಾಂಗಾ ಎಂ., ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮೊದಲಾದವರು ಇದ್ದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ: ಸರ್ವೆ ಕಾರ್ಯಕ್ಕೆ ಮುಂದಾದ ಕೇಂದ್ರ ಭೂ ವಿಜ್ಞಾನಿಗಳು

ಗೌರವ ವಂದನೆ ಸ್ವೀಕಾರ:

ಧ್ವಜಾರೋಹಣಕ್ಕೂ ಪೂರ್ವ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ, ಜಿಲ್ಲಾ ಉಸ್ತುವಾರಿ ಸಚಿವರಿಂದ ತೆರದ ಜೀಪಿನಲ್ಲಿ ಗೌರವ ವಂದನೆ ಸ್ವೀಕಾರ ನಡೆಯಿತು.

ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್‌ ತುಕಡಿ, ಮಹಿಳಾ ಪೊಲೀಸ್‌ ಪಡೆ, ಅರಣ್ಯ ಇಲಾಖೆ, ಚೆಂಡಿಯಾ ಘಟಕದ ಗೃಹ ರಕ್ಷಕ ದಳ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕರ್ನಾಟಕ ನೇವಲ್‌ ಯುನಿಟ್‌ ಹಾಗೂ ಕರ್ನಾಟಕ ಬಟಾಲಿಯನ್‌ ಒಳಗೊಂಡು ವಿವಿಧ ತಂಡ ಭಾಗವಹಿಸಿತ್ತು.