ಮಂಗಳೂರು(ಆ.28):  ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 209 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಒಬ್ಬ ವೃದ್ಧರು ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 297 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ. 257 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಉಡುಪಿ ಜಿಲ್ಲೆಯ ಸೋಂಕಿತರಲ್ಲಿ 114 ಮಂದಿ ಪುರುಷರು ಮತ್ತು 95 ಮಂದಿ ಮಹಿಳೆಯರಾಗಿದ್ದಾರೆ. ಅವರಲ್ಲಿ 106 ಮಂದಿ ಉಡುಪಿ ತಾಲೂಕಿನವರು, 60 ಮಂದಿ ಕುಂದಾಪುರ ತಾಲೂಕಿನವರು ಮತ್ತು 45 ಮಂದಿ ಕಾರ್ಕಳ ತಾಲೂಕಿನವರಾಗಿದ್ದರೆ, 8 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ.

ರೇವಣ್ಣಗೂ ಕೊರೋನಾ: ಒಂದೇ ಜಿಲ್ಲೆಯ ಮೂವರು ಜೆಡಿಎಸ್ ಶಾಸಕರಿಗೆ ಸೋಂಕು..

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 10,906 ಮಂದಿಗೆ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 8,187 (ಶೇ 75.06) ಮಂದಿ ಗುಣಮುಖರಾಗಿದ್ದು, ಪ್ರಸ್ತುತ 2,623 (ಶೇ.24.05) ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುರುವಾರ ಮತ್ತೆ 969 ಮಂದಿಯ ಗಂಟಲದ್ರವದ ಮಾದರಿಗಳನ್ನು ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿದೆ. ಅವುಗಳಲ್ಲಿ 461 ಕೊರೋನಾ ಶಂಕಿತರು, 239 ಮಂದಿ ಹಾಟ್‌ಸ್ಪಾಟ್‌ ನಿಂದ ಬಂದವರು, 220 ಮಂದಿ ಸಂಪರ್ಕಿತರು ಮತ್ತು 49 ಮಂದಿ ಕೊರೋನಾ ಲಕ್ಷಣ ಉಳ್ಳವರಾಗಿದ್ದಾರೆ.

ಒಟ್ಟು 925 ವರದಿಗಳು ಲಭಿಸಿದ್ದು, ಇವುಗಳಲ್ಲಿ 209 (ಶೇ.22.59) ಪಾಸಿಟಿವ್‌ ಆಗಿದ್ದರೆ, 708 (ಶೇ.76.54) ನೆಗೆಟಿವ್‌ ಆಗಿವೆ. ಇನ್ನೂ 783 ವರದಿಗಳು ಬಾಕಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೊರೋನಾ ಸೋಂಕಿನಿಂದ ಒಬ್ಬರು ಮೃತರಾಗಿದ್ದು, ಇದುವರೆಗೆ ಕೊರೋನಾದಿಂದ ಮೃತರ ಸಂಖ್ಯೆ 93 (ಶೇ.0.85)ಕ್ಕೇರಿದೆ. ಮೃತರು ಉಡುಪಿ ತಾಲೂಕಿನ 72ರ ವೃದ್ಧ. ಹೃದ್ರೋಗ, ಕಿಡ್ನಿ ಸಮಸ್ಯೆ, ರಕ್ತದೊತ್ತಡ, ಮಧುಮೇಹದಿಂದ ಬಳಲುತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ 5 ಮಂದಿ ಇತರ ಜಿಲ್ಲೆಯ ಇಬ್ಬರು ಸೇರಿದ್ದಾರೆ. ಇದರೊಂದಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 337ಕ್ಕೆ ಏರಿಕೆಯಾಗಿದೆ.

ಅಂಡಮಾನ್‌ ದ್ವೀಪದ ಬುಡಕಟ್ಟು ಜನರಿಗೂ ಕೊರೋನಾ ಸೋಂಕು...

ಗುರುವಾರ ಹೊಸದಾಗಿ ಸೋಂಕು ಪತ್ತೆಯಾದ 297 ಮಂದಿಯ ಪೈಕಿ 61 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. 99 ಸಾಮಾನ್ಯ ಶೀತಜ್ವರ ಪ್ರಕರಣ, ಉಸಿರಾಟ ಸಮಸ್ಯೆಯ 14 ಪ್ರಕರಣ ಸೇರಿದೆ. 123 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ. ಇವರಲ್ಲಿ 160 ಮಂದಿ ಮಂಗಳೂರಿನವರಾಗಿದ್ದರೆ, ಬಂಟ್ವಾಳದ 36, ಪುತ್ತೂರಿನ 14, ಸುಳ್ಯದ 42, ಬೆಳ್ತಂಗಡಿಯ 21 ಮಂದಿ ಸೋಂಕಿತರಾಗಿದ್ದಾರೆ. 123 ಮಂದಿಗೆ ಮಾತ್ರ ಸೋಂಕಿನ ಲಕ್ಷಣಗಳಿದ್ದರೆ, 174 ಮಂದಿಯಲ್ಲಿ ಇದುವರೆಗೆ ಯಾವ ಲಕ್ಷಣವೂ ಕಂಡುಬಂದಿಲ್ಲ ಎಂದು ಜಿಲ್ಲಾ ಕೊರೋನಾ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

ಗುರುವಾರ ಸೋಂಕು ಮುಕ್ತರಾದ 257 ಮಂದಿಯಲ್ಲಿ 9 ಮಂದಿ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆಯಲ್ಲಿದ್ದರೆ, ಬರೋಬ್ಬರಿ 185 ಮಂದಿ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. 63 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದರು. ದ.ಕ. ಜಿಲ್ಲೆಯಲ್ಲಿ ಇದುವರೆಗೆ 89,937 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷಿಸಲಾಗಿದ್ದು, 76,853 ನೆಗೆಟಿವ್‌, 11,389 ಪಾಸಿಟಿವ್‌ ಆಗಿದೆ.