ಯಾದಗಿರಿ: ಮೈಲಾಪುರ ಜಾತ್ರೆಯಲ್ಲಿ ಎಸೆಯಲು ತಂದಿದ್ದ 737 ಆಡು-ಕುರಿಮರಿ ವಶ

ಮೈಲಾರಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ, ಹರಕೆಯ ಹೆಸರಿನಲ್ಲಿ ದೇವರ ಪಲ್ಲಕ್ಕಿ ಮೇಲೆ ಭಕ್ತರು ಎಸೆಯುವ ಸಾವಿರಾರು ಕುರಿಮರಿಗಳ ಮೇಲಾಗುತ್ತಿದ್ದ ಅಮಾನವೀಯ ಸಂಪ್ರದಾಯವನ್ನು ಕೊನೆಗಾಣಿಸುವಲ್ಲಿ ಈ ಬಾರಿ ಜಿಲ್ಲಾಡಳಿತ-ಪೊಲೀಸ್‌ ಕಟ್ಟೆಚ್ಚರ ವಹಿಸಿತ್ತು. ಈ ಫಲವಾಗಿ, ಸಾವಿರಾರು ಮೂಕಪ್ರಾಣಿಗಳ ಜೀವ ಉಳಿದಂತಾಯ್ತು

737 goats and lambs seized who brought to throw in Mailapur Fair in Yadgir

ಯಾದಗಿರಿ(ಜ.15):  ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹು ಪ್ರಸಿದ್ಧಿ ಪಡೆದ, ಪೌರಾಣಿಕ ಐತಿಹ್ಯದ, ಯಾದಗಿರಿಗೆ ಸಮೀಪದ ಶ್ರೀಕ್ಷೇತ್ರ ಮೈಲಾಪುರದಲ್ಲಿ, ಮಕರ ಸಂಕ್ರಮಣ ದಿನವಾದ ಮಂಗಳವಾರ ಶ್ರೀ ಮೈಲಾರಲಿಂಗೇಶ್ವರನ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ- ಸಂಭ್ರಮದಿಂದ ನಡೆಯಿತು.

ರಾಜ್ಯದ ವಿವಿಧೆಡೆ ಸೇರಿದಂತೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತಸಾಗರ ಶ್ರೀಕ್ಷೇತ್ರ ಮೈಲಾಪುರದತ್ತ ಹೆಜ್ಜೆ ಹಾಕಿತ್ತು. ಜ.11ರಿಂದಲೇ ಮೈಲಾಪುರದತ್ತ ಭಕ್ತಸಮೂಹ ದಾಪುಗಾಲು ಹಾಕುತ್ತಿದ್ದು, ಅಲ್ಲಲ್ಲಿ ಟೆಂಟ್‌ಗಳನ್ನು ಹಾಕಿ ವಾಸ್ತವ್ಯ ಮಾಡಿದ್ದರು. ಜ.18ರವರೆಗೆ ಜಾತ್ರೆ ನಡೆಯಲಿದೆ. ಮಕರ ಸಂಕ್ರಮಣ ದಿನವಾದ ಜ.14ರಂದು ಜಾತ್ರೆ ಮುಖ್ಯ ಆಕರ್ಷಣೆ.ಇಡೀ ಬೆಟ್ಟಗುಡ್ಡಗಳ ಮಧ್ಯೆಯಿರುವ ಶ್ರೀಮೈಲಾರಲಿಂಗನ ದರುಶನಕ್ಕೆಂದು ಆಗಮಿಸಿದ್ದ ಭಕ್ತಸಮೂಹದ ಕಂಠಗಳಿಂದ ಝೇಂಕರಿಸಿ ‘ಏಳು ಕೋಟಿಗೆ, ಏಳು ಕೋಟಿ... ಮೈಲಾರಲಿಂಗ’ ಧ್ವನಿ ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಪ್ರತಿಧ್ವನಿಸುತ್ತಿತ್ತು.

ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಿಷ್ಟು

ಮೈಲಾಪುರದ ಬೆಟ್ಟಗಳು ಹಾಗೂ ಅಲ್ಲಿನ ಪರಿಸರ ಭಂಡಾರಮಯವಾಗಿ, ಇಡೀ ಮುಗಿಲು ಅರಿಶನಮಯವಾಗಿ ಕಂಗೊಳಿಸುತ್ತಿತ್ತು. ಸಾವಿರಾರು ಭಕ್ತರು, ಪೂಜಾರಿಗಳು, ಗೊರವರು ಮಂತ್ರಮುಗ್ಧರಾಗಿ ಮೈಲಾರಲಿಂಗೇಶ್ವರ ಸನ್ನಿಧಿಗೆ ತೆರಳಿ, ಭಕ್ತಿ ಭಾವ ಮೆರೆಯುತ್ತಿದ್ದರು.

ಇಲ್ಲಿನ ಹೊನ್ನೆಕೆರೆಯಲ್ಲಿ ಮಹಿಳೆಯರ, ಮಕ್ಕಳು, ವೃದ್ಧರಾದಿಯಾಗಿ ಸೇರಿದಂತೆ ಲಕ್ಷಾಂತರ ಜನರು ಮಿಂದು ಶುಚಿರ್ಭೂತರಾಗಿ, ಸಾಲುಗಟ್ಟಿ ನಿಂತು ನೂರಾರು ಮೆಟ್ಟಿಲುಗಳೇರಿ ಗುಹಾಂತರ ದೇಗುಲದಲ್ಲಿರುವ ಮೈಲಾರಲಿಂಗದ ದರ್ಶನ ಪಡೆದು ಪುನೀತರಾಗುತ್ತಿದ್ದರು. ಮಲ್ಲಯ್ಯನ ಮೂರ್ತಿಯನ್ನು ಗಂಗಾ ಸ್ನಾನ ಮಾಡಿಸಿದ ನಂತರ ದೇವಸ್ಥಾನದ ಮುಂಭಾಗದಲ್ಲಿ ದೇವರ ಸರಪಳಿ ಹರಿಯಲಾಯಿತು. ಸಂಪ್ರದಾಯದಂತೆ ಪೂಜಾರಿ ಸರಪಳಿ ಹರಿಯುವ ಕೈಂಕರ್ಯ ಎಂದಿನಂತೆ ನಡೆದು, ಅಲ್ಲಿಯೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಈ ‘ಪವಾಡ’ ವೀಕ್ಷಿಸಿದರು.

ಪಲ್ಲಕ್ಕಿ ವೈಭವ ಕಣ್ತುಂಬಿಕೊಳ್ಳಲು ಬೆಟ್ಟಗುಡ್ಡಗಳ ಆಶ್ರಯಿಸಿದ ಭಕ್ತರ ದಂಡು..!

ಯಾದಗಿರಿ: ಹೊನ್ನಕೆರೆಯಿಂದ ಮೈಲಾರಲಿಂಗನ ಉತ್ಸಮ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು, ಹೊನ್ನಕೆರೆಯಲ್ಲಿ ಸ್ನಾನಮಾಡಿಸಿ, ಕರೆತರುವ ಮಾರ್ಗಮಧ್ಯೆ ಪಲ್ಲಕ್ಕಿ ಮೇಲೆ ಭಕ್ತರು ಹೂ, ಹಣ್ಣುಗಳು, ಉತ್ತುತ್ತಿಕಾಯಿ, ಸಂಕ್ರಾಂತಿಯ ಸುಗ್ಗೀಕಾಲದಲ್ಲಿ ಬೆಳೆದಿದ್ದ ಮೊದಲ ಪೈರನ್ನು ಎಸೆದು, ಧನ್ಯತಾಭಾವ ಅರ್ಪಿಸುತ್ತಿದ್ದರು. ಭಂಡಾರದೊಡೆಯನ ಜೈಕಾರುಗಳ ಕೂಗು ಈ ವೇಳೆ ಝೇಂಕರಿಸುತ್ತಿತ್ತು.

ಈ ಸಂದರ್ಭದಲ್ಲಿ ದಾರಿಯ ಇಕ್ಕೆಲಗಳಲ್ಲಿನ ಬೆಟ್ಟದ ಕಲ್ಲು ಬಂಡೆಗಳ, ಮರಗಳ ಮೇಲೆ ಜೀವದ ಹಂಗು ತೊರೆದು ಕುಳಿತಿದ್ದ ಭಕ್ತಾದಿಗಳು, ಮಲ್ಲಯ್ಯನ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಂಡರು. ಮಲ್ಲಯ್ಯನ ಮೂರ್ತಿ ಮೇಲೆ ಭಂಡಾರ, ಕುರಿ ಉಣ್ಣೆ ಹಾಗೂ ಜಮೀನಿನಲ್ಲಿ ಬೆಳೆದ ಜೋಳ, ಶೇಂಗಾ ಬೆಳೆಯನ್ನು ಎಸೆದು ಏಳು ಏಳು ಕೋಟಿಗೆ ಮಲ್ಲಯ್ಯ ಎಂದು ಘೋಷಣೆ ಹಾಕಿ ಭಕ್ತಿ ಭಾವ ಮೆರೆದರು. ಹೊನ್ನಕೆರೆ ಮಾರ್ಗಮಧ್ಯೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಕೆಲಕಾಲ ಆತಂಕದ ವಾತಾವರಣಕ್ಕೆ ಕಾರಣವಾಗಿತ್ತು.

ಭಕ್ತರು ಮಲ್ಲಯ್ಯನ ಭಂಡಾರ, ಸಿಹಿ ತಿನಿಸುಗಳು ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡುತ್ತಿರುವುದು ಹಾಗೂ ಚಿಕ್ಕ ಮಕ್ಕಳು ಜೋಕಾಲಿ ಮತ್ತು ತೊಟ್ಟಿಲಲ್ಲಿ ಕುಳಿತು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಿಷೇಧದ ಮಧ್ಯೆಯೂ ಹರಕೆಯ ಕುರಿಮರಿಗಳ ಎಸೆಯುವ ಯತ್ನ!

ಯಾದಗಿರಿ: ಮೈಲಾರಲಿಂಗೇಶ್ವರ ಜಾತ್ರೆಯ ಸಂದರ್ಭದಲ್ಲಿ, ಹರಕೆಯ ಹೆಸರಿನಲ್ಲಿ ದೇವರ ಪಲ್ಲಕ್ಕಿ ಮೇಲೆ ಭಕ್ತರು ಎಸೆಯುವ ಸಾವಿರಾರು ಕುರಿಮರಿಗಳ ಮೇಲಾಗುತ್ತಿದ್ದ ಅಮಾನವೀಯ ಸಂಪ್ರದಾಯವನ್ನು ಕೊನೆಗಾಣಿಸುವಲ್ಲಿ ಈ ಬಾರಿ ಜಿಲ್ಲಾಡಳಿತ-ಪೊಲೀಸ್‌ ಕಟ್ಟೆಚ್ಚರ ವಹಿಸಿತ್ತು. ಈ ಫಲವಾಗಿ, ಸಾವಿರಾರು ಮೂಕಪ್ರಾಣಿಗಳ ಜೀವ ಉಳಿದಂತಾಯ್ತು. ಲಕ್ಷಾಂತರ ಭಕ್ತರ ಕಾಲ್ತುಳಿತಕ್ಕೆ ಬಲಿಯಾಗಲಿದ್ದ ಸಾವಿರಾರು ‘ಹರಕೆಯ ಕುರಿಗಳು’ ಬದುಕುಳಿದವು.
ಆದರೂ, ಮೌಢ್ಯಗಳಿಗೆ ಮೊರೆಹೋಗಿದ್ದ ಕೆಲವು ಭಕ್ತರು ಅಡಗಿಸಿಟ್ಟು ತಂದಿದ್ದ ಹರಕೆಯ ಕುರಿಮರಿಗಳನ್ನ ಪಲ್ಲಕ್ಕಿಯತ್ತ ಎಸೆಯುವ ಪ್ರಯತ್ನ ನಡೆಸಿದ್ದರು. ಧೋತರ, ಕಂಬಳಿ, ಸೀರೆಗಳ ಮಧ್ಯೆ ಅಡಗಿಸಿ ಕುರಿಮರಿಗಳನ್ನು ತಂದು ಪಲ್ಲಕ್ಕಿ ಮೇಲೆ ಎಸೆಯುವ ಅವರನ್ನು ತಡೆದ ಜಿಲ್ಲಾಡಳಿತ, ಪೊಲೀಸ್‌ ಹಾಗೂ ಹೋಂಗಾರ್ಡ್‌ ಸಿಬ್ಬಂದಿ, ಭಕ್ತರ ಮನವೊಲಿಸಿ, ಕುರಿಮರಿಗಳನ್ನು ವಶಪಡಿಸಿಕೊಳ್ಳುತ್ತಿರುವುದು ಕಂಡುಬಂತು. ಈ ಮಧ್ಯೆಯೇ, ಪಲ್ಲಕ್ಕಿ ಸಂಚರಿಸುವ ವೇಳೆ ಕುರಿಮರಿ ಎಸೆದು, ಭಕ್ತನೊಬ್ಬ ಮೌಢ್ಯಭಕ್ತಿಯ ಪರಾಕಾಷ್ಠೆ ಮೆರೆದಂತಿದ್ದ. ಕುರಿಮರಿಗಳ ರಕ್ಷಿಸಲು ಮೈಲಾಪುರದ ಸುತ್ತಮುತ್ತ ಚೆಕ್ ಪೋಸ್ಟ್‌ಗಳ ನಿರ್ಮಿಸಿ, ಭಕ್ತರಿಂದ ಅಲ್ಲೇ ಪಡೆಯಲಾಗುತ್ತಿತ್ತು. ಎಲ್ಲೆಡೆ ಬಿಗಿ ಬಂದೋಬಸ್ತ್ ಮೂಲಕ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಜನರಿಗೆ ಈ ಬಗ್ಗೆ ಮನವರಿಕೆ ಮಾಡಿ, ಜಪ್ತಿ ಮಾಡಿದ ಕುರಿಮರಿಗಳನ್ನು ಟೆಂಡರ್‌ ಹರಾಜು ಹರಾಜು ಹಾಕಿ, ಬರುವ ಲಕ್ಷಾಂತರ ರುಪಾಯಿಗಳ ಆದಾಯವನ್ನು ಮೈಲಾಪುರದ ಅಭಿವೃದ್ಧಿಗಾಗಿ ನೀಡಲಾಗುತ್ತದೆ.

ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್. ರೇಖಾ, ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ್‌, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್‌, ತಹಸೀಲ್ದಾರ್‌ ಸುರೇಶ ಅಂಕಲಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಮಲ್ಲಯ್ಯನ ದರ್ಶನ ಪಡೆದರು. ಭಕ್ತ ಸಮೂಹ ನಿಯಂತ್ರಿಸಲು ಹಾಗೂ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಲು ಪೊಲೀಸ್‌ ಹಾಗೂ ಹೋಂ ಗಾರ್ಡ್‌ ಪಡೆಗಳು ಹರಸಾಹಸ ಪಡುತ್ತಿದ್ದರು.

ವಿಚಿತ್ರ, ವಿಶಿಷ್ಟ ಸಂಪ್ರದಾಯಗಳ ಮೈಲಾಪುರ

ಯಾದಗಿರಿ: ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿಗೆ ಹೆಸರಾದ ಮೈಲಾಪುರ ಗ್ರಾಮದ ಬಹುತೇಕ ಆಚರಣೆಗಳು, ವೈಜ್ಞಾನಿಕವಾಗಿ ಮುಂದುವರೆಯುತ್ತಿರುವ 21ನೇ ಈ ಶತಮಾನದಲ್ಲೂ ಅಚ್ಚರಿ ಹುಟ್ಟಿಸುತ್ತವೆ. ಗ್ರಾಮದ ಅಧಿದೇವರು ಮೈಲಾರಲಿಂಗನ ಆಸನ ‘ಮಂಚ’ ಆಗಿರೋದರಿಂದ ಇಲ್ಯಾರೂ ಅದರ ಮೇಲೆ ಮಲಗೋಲ್ಲ, ಕುಳಿತು ಕೊಳ್ಳುವುದೂ ಇಲ್ಲ. ಅಷ್ಟೇ ಅಲ್ಲ, ಹಸಿ ಬಾಣಂತಿಗೂ ಆಚರಣೆ ಕಾವು ತಪ್ಪಿರೋಲ್ಲವಾಗಿದ್ದರಿಂದ, ಕಲ್ಲಿನ ಮೇಲೆ ಹಾಸಿಗೆ ಹಾಸಿ ಮಲಗಬೇಕು. ಇನ್ನು, ದೇವರ ವಾಹನ ಕುದುರೆಯಾಗಿದ್ದರಿಂದ ಯಾರೂ ಕುದುರೆ ಹತ್ತೋಲ್ಲ, ಪೌರಾಣಿಕ ಕತೆಯೊಂದರ ಹಿನ್ನೆಲೆಯಲ್ಲಿ, ಕೋಳಿ ಇಲ್ಲಿ ಯಾರೂ ಸಾಕೋಲ್ಲ, ಮುಂಜಾನೆಯ ಕೋಳಿ ಕೂಗು ಇಲ್ಲಿ ಕೇಳಿಸೋದೇ ಇಲ್ಲ.. ಕುಂಬಾರರು ಗಡಿಗೆ ಮಾಡುವಂತಿಲ್ಲವಂತೆ.

ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗ್ಬೇಕು, ಜಾರಕಿಹೊಳಿ ಸಿಎಂ ಆದ್ರೆ ಸ್ವಾಗತ, ಜೆಡಿಎಸ್‌ ಶಾಸಕ ಕಂದಕೂರ

737 ಆಡು-ಕುರಿಮರಿಗಳ ರಕ್ಷಣೆ 

ಯಾದಗಿರಿ: ಮೈಲಾಪೂರ ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ನಿಷೇಧ ಧಿಕ್ಕರಿಸಿ ಎಸೆಲೆಯಲು ತಂದಿದ್ದ 737 ಆಡು-ಕುರಿಮರಿಗಳನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. 

ಇಲ್ಲಿ ಗ್ರಾಮೀಣ ಭಾಗದ ಭಕ್ತರು ಕುರಿ-ಆಡು ಮರಿಗಳನ್ನು ತಂದು ಪಲ್ಲಕ್ಕಿ ಮೆರವಣಿಗೆ ಮೇಲೆ ಎಸೆದು ಮಲ್ಲಯ್ಯನಿಗೆ ತಮ್ಮ ಭಕ್ತಿ ಭಾವ ಮೆರೆಯುವ ಅಮಾನವೀಯ ಸಂಪ್ರದಾಯ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಆದರೆ, ಪ್ರಾಣಿ ಹಿಂಸೆ ಕಾನೂನಿನಡಿ ನಿಷೇಧ ಹೇರಿದ ಮೇಲೆ ಇತ್ತೀಚಿನ ವರ್ಷಗಳಲ್ಲಿ ಇದು ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಈ ವರ್ಷವೂ ಜಿಲ್ಲಾಡಳಿತ ನಿಷೇಧ ಆದೇಶ ಹೊರಡಿಸಿ, ಜಾಗೃತಿ ಕೂಡ ಮೂಡಿಸಿತ್ತು. ಆದರೂ ಸಹ ಕೆಲ ಭಕ್ತರು ಕದ್ದುಮುಚ್ಚಿ ಹರಕೆ ಕುರಿಮರಿಗಳನ್ನು ತಂದಿದ್ದು, ಜಾತ್ರೆ ಸುತ್ತಮುತ್ತ ಜಿಲ್ಲಾಡಳಿತ ನಿರ್ಮಿಸಿದ್ದ ಚೆಕ್‌ಫೊಸ್ಟ್‌ಗಳಲ್ಲಿ ಅಧಿಕಾರಿಗಳು ಅವನ್ನು ವಶಕ್ಕೆ ಪಡೆದರು.

ನಂತರ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣಭೂಪಾಲರಡ್ಡಿ ನಾಯ್ಕಲ್ ನೇತೃತ್ವದಲ್ಲಿ ಸಿಬ್ಬಂದಿ ಸಹಕಾರದೊಂದಿಗೆ ಟೆಂಡರ್ ಪಡೆದ ವ್ಯಕ್ತಿಗಳು ಕುರಿ ಮರಿಗಳನ್ನು ತೆಗೆದುಕೊಂಡು ಮರಳಿದರು.

Latest Videos
Follow Us:
Download App:
  • android
  • ios