Tumakur : ಜಿಲ್ಲೆಯಲ್ಲಿ ಶೇ.70 ರಷ್ಟು ಮಳೆ ಕೊರತೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೆನಿ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು
ತುಮಕೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೆನಿ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಕೃಷಿ ಇಲಾಖೆಯ ಪ್ರಗತಿಯನ್ನು ವಿವರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರಮೇಶ್ ಎನ್. ಅವರು, ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಶೇಕಡಾ 70ರಷ್ಟುಮಳೆ ಕೊರತೆಯಾಗಿದ್ದು, ಒಟ್ಟಾರೆ ಕೊರತೆ ಶೇ.17ರಷ್ಟಿದೆ. ಜಿಲ್ಲೆಯಲ್ಲಿ 3,14,630 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿಯನ್ನು ಹೊಂದಿದ್ದು, ಇದರ ಪೈಕಿ 1,96,782 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟಾರೆ ಶೇ.62.5 ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸ ಗೊಬ್ಬರ ರೈತರಿಗೆ ಪೂರೈಕೆ ಮಾಡುವಷ್ಟುದಾಸ್ತಾನು ಇದೆ. ತುಮಕೂರು ಮತ್ತು ತಿಪಟೂರು ಉಪ ವಿಭಾಗಗಳಲ್ಲಿ ರಾಗಿಯನ್ನು ಹೆಚ್ಚಾಗಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಮಧುಗಿರಿ ಉಪವಿಭಾಗದಲ್ಲಿ ಶೇಂಗಾ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಎಂದು ತಿಳಿಸಿದರು.
ತೋಟಗಾರಿಕೆ ಬೆಳೆಗಳು ಜಿಲ್ಲೆಯಲ್ಲಿ 2,93,000 ಹೆಕ್ಟೇರ್ ವಿಸ್ತೀರ್ಣದಲ್ಲಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಬಾಳೆ, ಮಾವು, ತೆಂಗು, ಅಡಿಕೆ, ಟೊಮೆಟೋ, ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಪ್ರಸ್ತುತ ಈಗ ಈ ಬೆಳೆಗಳಿಗೆ ನೀರಿನ ಸಮಸ್ಯೆ ಇಲ್ಲ. ಮುಂದಿನ ಮೂರುನಾಲ್ಕು ತಿಂಗಳಲ್ಲಿ ಮಳೆ ಬಾರದೆ ಹೋದರೆ ಕಷ್ಟವಾಗುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2023-24ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿಯಡಿ ವಿವಿಧ ತೋಟಗಾರಿಕಾ ಬೆಳೆಗಳಾದ ತೆಂಗು, ಮಾವು, ಬಾಳೆ, ದಾಳಿಂಬೆ, ಹುಣಸೆ, ನುಗ್ಗೆ, ಇನ್ನಿತರೆ ಬೆಳೆಗಳಿಗೆ ಪ್ರದೇಶ ವಿಸ್ತರಣೆ ಮಾಡಿಕೊಳ್ಳಲು ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುತ್ತಿದೆ. ಜಿಲ್ಲೆಯ ತೆಂಗಿನ ಗಿಡಗಳಿಗೆ ಬಾಧಿಸುವ ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದ್ದು, ಅದರಲ್ಲಿಯೂ ಪ್ರಮುಖವಾಗಿ ಕಾಂಡ ಸೋರುವ ರೋಗ ಹತೋಟಿ ಕ್ರಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಜುಲೈ 2023ರ ಅಂತ್ಯಕ್ಕೆ ಹಿಪ್ಪುನೇರಳೆ ವಿಸ್ತೀರ್ಣ 6226.76 ಹೆಕ್ಟೇರ್ ಇದ್ದು, 10498 ರೇಷ್ಮೆ ಬೆಳೆಗಾರರು ರೇಷ್ಮೆ ಕೃಷಿಯನ್ನು ಅವಲಂಬಿತರಾಗಿದ್ದಾರೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕರು ತಿಳಿಸಿದರು.
ಜಿಲ್ಲೆಯಲ್ಲಿ ರಾಜ್ಯದಲ್ಲಿ ಬೆಳೆಯುವ ಎಲ್ಲಾ ತಳಿಯ ರೇಷ್ಮೆ ಗೂಡುಗಳನ್ನು ಬೆಳೆಯಲಾಗುತ್ತಿದೆ. ಕುಣಿಗಲ್ ತಾಲೂಕು ಮತ್ತು ಹೆಬ್ಬೂರು ಹೋಬಳಿಯಲ್ಲಿ ಸಾಂಪ್ರದಾಯಕ ಶುದ್ಧ ಮೈಸೂರು ತಳಿ ಬಿತ್ತನೆ ಗೂಡು ಹಾಗೂ ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಶುದ್ಧ ದ್ವಿತಳಿ ಬಿತ್ತನೆ ಗೂಡನ್ನು ಬೆಳೆಯಲಾಗುತ್ತಿದೆ. ಉಳಿದ 6 ತಾಲೂಕುಗಳಾದ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ತುಮಕೂರು ಹಾಗೂ ಗುಬ್ಬಿ ಇಲ್ಲಿ ದ್ವಿತಳಿ ಸಂಕರಣ ಹಾಗೂ ಮಿಶ್ರತಳಿ ಗೂಡುಗಳನ್ನು ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿಯೇ ದ್ವಿತಳಿ ಗೂಡು ಉತ್ಪಾದನೆಯಲ್ಲಿ ತುಮಕೂರು ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯು ಜಿಲ್ಲೆಯ ಎಲ್ಲಾ ಮಕ್ಕಳಿಗೆ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಅವರಿಗೆ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದಕ್ಕೆ ಕ್ರಮ ವಹಿಸಬೇಕೆಂದು ಎರಡು ವಿಭಾಗಗಳ ಡಿಡಿಪಿಐ ಅವರಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕ್ರೈಸ್ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ನಿರ್ವಹಣೆಗೆಂದು 1 ಲಕ್ಷ ರು. ಅನುದಾನವನ್ನು ನೀಡಲಾಗುತ್ತಿದ್ದು, ಸದರಿ ಕಾರ್ಯಕ್ರಮವನ್ನು ಮುಂದುವರೆಸುವಂತೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಹೇಳಿದರು. ಇದಕ್ಕೆ ಪತ್ರಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಒಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಇದರ ಕುರಿತು ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.