ಬೆಂಗಳೂರು [ಜ.31]:  ಬೆಂಗಳೂರಿನಲ್ಲಿದ್ದ 7 ಶಂಕಿತ ಕೊರೋನ ವೈರಸ್ ತಗುಲಿರುವ ಪ್ರಕರಣದ ವರದಿ ಲಭ್ಯವಾಗಿದ್ದು, ಏಳು ವರದಿಗಲು ನೆಗೆಟಿವ್ ಆಗಿವೆ. 

ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ‌ ಹಿನ್ನೆಲೆಯಲ್ಲಿ  ಸಿಲಿಕಾನ್ ಸಿಟಿಯಲ್ಲಿ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಒಟ್ಟು 7 ಮಂದಿಗೆ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಇದರಲ್ಲಿ ಓರ್ವ ಚೈನಿಸ್ ಯುವತಿಯು ಇದ್ದಳು. 

ಇದೀಗ 7 ಜನರ ಪರೀಕ್ಷೆ ನಡೆಸಿದ್ದು, 7 ಮಂದಿಯಲ್ಲಿಯೂ ಯಾವುದೇ ರೀತಿಯ ವೈರಸ್ ಪತ್ತೆಯಾಗಿಲ್ಲ ಎನ್ನಲಾಗಿದೆ. 

ಮೊದಲ ಬಾರಿಗೆ NIV ಪ್ರಯೋಗಾಲಯ ಸ್ಥಾಪನೆ : ರಾಜೀವ್ ಗಾಂಧಿ ಆಸ್ಪತ್ರೆ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ NIV ಪ್ರಯೋಗಾಲಯ ಸ್ಥಾಪನೆ ಮಾಡಲಾಗಿದ್ದು, ಶಂಕಿತ ರೋಗಿಗಳ ರಕ್ತ ಹಾಗೂ ಕಫದ ಮಾದರಿ ಬೆಂಗಳೂರಿನಲ್ಲೇ ಪರೀಕ್ಷೆ ಮಾಡುವ ವ್ಯವಸ್ಥೆ ಆರಂಭ ಮಾಡಲಾಗಿದೆ.

24 ಗಂಟೆಯೊಳಗೆ ಕೊರೋನಾ ಸೋಂಕು ಇದೆಯಾ ಇಲ್ಲವೇ ಎಂದು ವರದಿ ಲಭ್ಯವಾಗಲಿದೆ. ದಿನಕ್ಕೆ 20 ರೋಗಿಗಳ ಸ್ಯಾಂಪಲ್ ಟೆಸ್ಟ್ ಬೆಂಗಳೂರಿನಲ್ಲಿಯೇ ನಡೆಯಲಿದೆ.  ಎರಡು ಪರೀಕ್ಷಾ ಲ್ಯಾಬ್ ಗಳು ಸೋಮವಾರದಿಂದಲೇ ಕಾರ್ಯನಿರ್ವಹಿಸಲಿವೆ. 

ಕೊರೋನಾ ವೈರಸ್‌ನಿಂದ ಪಾರಾಗಲು ನಮ್ಮ ಬಳಿ ಇದೆ ಉಪಾಯ!..

ರೋಗಿಯ ವರದಿ ಬೇಗ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ವರದಿ ಪುಣೆಯ NIV ಇಂದ ಪಡೆಯಲಾಗುತ್ತಿತ್ತು. ವರದಿ ಪಡೆಯಲು 72 ಗಂಟೆ ಸಮಯ ಬೇಕಾಗುತಿತ್ತು. ಆದರೆ ಬೆಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪನೆಯಿಂದ ಬೇಗ ವರದಿ ಲಭ್ಯವಾಗಲಿದೆ. 

 ಸದ್ಯ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 3 ಶಂಕಿತ ರೋಗಿಗಳ ಮೇಲೆ ನಿಗಾ ಇಡಲಾಗಿದೆ. ಉಳಿದವರನ್ನ ಡಿಸ್ಚಾರ್ಜ್ ಮಾಡಲಾಗಿದ್ದು, ಶಂಕಿತ ರೋಗಿಗಳಿಗೆ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ನಿಗಾ ವಹಿಸಲಾಗಿದೆ.