ಸಾರಿಗೆ ಇಲಾಖೆಯಿಂದ 679 ಜನರ ಡಿಎಲ್ ಅಮಾನತು
ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ನೂರಾರು ಮಂದಿ ಚಾಲನಾ ಪರವಾನಿಗೆಯನ್ನು ಸಾರಿಗೆ ಇಲಾಖೆ ರದ್ದು ಮಾಡಿದೆ.
ಬೆಂಗಳೂರು [ನ.17]: ಪ್ರಸ್ತಕ ವರ್ಷದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 6,750 ಮಂದಿ ಪೈಕಿ 679 ಜನರ ಚಾಲನಾ ಪರವಾನಗಿಯನ್ನು ಸಾರಿಗೆ ಇಲಾಖೆ ಅಮಾನತುಗೊಳಿಸಿದೆ.
ಈ ವರ್ಷದ ಜನವರಿ 1ರಿಂದ ಅಕ್ಟೋಬರ್ 31ರ ವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ, ಅಪಾಯಕಾರಿ ಚಾಲನೆ, ವೀಲಿಂಗ್, ಡ್ರ್ಯಾಗ್ ರೇಸಿಂಗ್, ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ, ಟ್ರಾಫಿಕ್ ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ, ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರ ಕರೆದೊಯ್ಯುವುದು, ಹಿಟ್ ಆ್ಯಂಡ್ ರನ್ ಹಾಗೂ ಅಪಘಾತ (ಐಪಿಸಿ 304ಎ) ಪ್ರಕರಣಗಳಲ್ಲಿ ಚಾಲಕರು ಮತ್ತು ಸವಾರರು ಸೇರಿದಂತೆ ಒಟ್ಟು 6,750 ಜನರ ಚಾಲನಾ ಪರವಾನಗಿಗಳನ್ನು ಸಂಚಾರ ಪೊಲೀಸರು ಜಪ್ತಿ ಮಾಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳಿಕ ಈ ಚಾಲನಾ ಪರವಾನಗಿಗಳನ್ನು ಅಮಾನುತುಗೊಳಿಸುವಂತೆ ಸಂಬಂಧಪಟ್ಟಆರ್‌ಟಿಓ ಕಚೇರಿಗಳಿಗೆ ನಗರದ 44 ಸಂಚಾರ ಠಾಣೆ ಪೊಲೀಸರು ಶಿಫಾರಸು ಮಾಡಿದ್ದರು.
ಆದರೆ ಇವುಗಳನ್ನು ಪರಿಶೀಲಿಸಿದ ಸಾರಿಗೆ ಇಲಾಖೆ, ಕೊನೆಗೆ 679 ಡಿಎಲ್‌ಗಳನ್ನು ಮಾತ್ರ ಅಮಾನತು ಮಾಡಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.