ಮಂಗಳೂರು(ಜ.31): ಪ್ರಾಕೃತಿಕ ವಿಕೋಪದಂತಹ ಕಷ್ಟಗಳು ತಾಲೂಕಿನಲ್ಲಿ ಸಂಭವಿಸಿದಲ್ಲಿ ಕೂಡಲೇ ನೆರವಿಗೆ ಧಾವಿಸುವ ಉದ್ದೇಶದಿಂದ ಸುಮಾರು 600 ಯುವಕರನ್ನೊಳಗೊಂಡು ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ ಉದ್ಘಾಟನೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನೆರವೇರಿತು.

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರ ವಾರ್ಷಿಕ ಜಾತ್ರೆಯ ರಥೋತ್ಸವದ ಸಂದರ್ಭ ಸಮಿತಿಯನ್ನು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಉದ್ಘಾಟಿಸಿದರು. ಸದಾ ಜನಸಾಮಾನ್ಯರೊಂದಿಗೆ ಬೆರೆತು ಸಮಾಜಮುಖಿಯಾಗಿ ಸೇವಾ ಕಾಯಕದಲ್ಲಿ ನಿರತರಾಗಿರುವ ಯುವ ಶಾಸಕ ಹರೀಶ್‌ ಪೂಂಜರ ಸೇವಾ ವೈಖರಿಯನ್ನು ಶ್ಲಾಘಿಸಿದರು.

'ಬಲೆ ಪಂಪ್‌ವೆಲ್‌ಗೇ' BJPಯಿಂದ ತುಳುವಿನಲ್ಲೇ ಆಹ್ವಾನ..!

ಇದೀಗ 600 ಮಂದಿ ಸಕ್ರಿಯ ಸದಸ್ಯರನ್ನೊಳಗೊಂಡ ಬೆಳ್ತಂಗಡಿಯ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ರಚಿಸಿದ್ದು ಮುಂದೆ ಪ್ರಾಕೃತಿಕ ವಿಕೋಪವಾದಾಗ ಅಥವಾ ಯಾವುದೇ ಸಂಕಷ್ಟದ ಸಂದರ್ಭ ಸೇವೆಗೆ ಸಮಿತಿ ಕಟಿಬದ್ಧವಾಗಿದೆ. ಬಹುದಿನಗಳ ಕನಸಾದ ಸ್ವಚ್ಛ ಹಾಗೂ ಸುಂದರ ಉಜಿರೆಯನ್ನು ರೂಪಿಸಲು ಸಮಿತಿಯವರು ದೃಢ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಮುಖಂಡ ಕೆ.ಪ್ರತಾಪಸಿಂಹ ನಾಯಕ್‌ ಮಾತನಾಡಿ, ಸತ್ಯ, ಧರ್ಮ, ನ್ಯಾಯ, ನೀತಿಯ ನೆಲೆಯಲ್ಲಿ ಭಾರತವು ವಿಶ್ವಕ್ಕೆ ಆಧ್ಯಾತ್ಮಗುರು ಆಗುವ ಎಲ್ಲಾ ರೀತಿಯಗೌರವ ಹಾಗೂ ಮಾನ್ಯತೆ ಹೊಂದಿದೆ. ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಯುವಜನತೆ ಸನ್ಮಾರ್ಗದಲ್ಲಿ ನಡೆದು ಆದರ್ಶಜೀವನ ನಡೆಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಹರೀಶ್‌ ಪೂಂಜ ಮಾತನಾಡಿ, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಮನೋಭಾವದಿಂದ ಯುವಜನತೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಕೆಲಸಮಾಡಬೇಕು ಎಂದರು.

ಪ್ರಶಸ್ತಿ ಪ್ರದಾನ:

ಬರೋಡಾದ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿಅವರಿಗೆ ಕಾಯಕರತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಶರತ್‌ಕೃಷ್ಣ ಪಡ್ವೆಟ್ನಾಯ, ಶ್ರೀ ಶಾರದಾ ಸೇವಾ ಟ್ರಸ್ಟ್‌ಅಧ್ಯಕ್ಷ ಭರತ್‌ಕುಮಾರ್‌ ಮತ್ತು ಮೋಹನ್‌ಕುಮಾರ್‌ ಇದ್ದರು. ರಾಜೇಶ್‌ ಪೈ ಸ್ವಾಗತಿಸಿದರು. ತಿಮ್ಮಯ್ಯ ನಾಯ್‌್ಕ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ನಿರ್ವಹಿಸಿದರು.