Asianet Suvarna News Asianet Suvarna News

Kodagu: ಲಾರಿಯಿಂದ ಚಿಲ್ಲಿ ಸಾಸ್‌ ಸೋರಿಕೆ: 6 ವಿದ್ಯಾರ್ಥಿಗಳು ಅಸ್ವಸ್ಥ

*  ರಾಸಾಯನಿಕ ದ್ರವ ಸೋರಿಕೆ ಎಂಬ ಸುದ್ದಿ ಹಬ್ಬಿ ಆತಂಕ ಸೃಷ್ಟಿ
*  ಚಿಲ್ಲಿ ಸಾಸ್‌ ಎಂದು ಲಾರಿ ಚಾಲಕ ಹೇಳಿಕೆ
*  ಶಂಕಿತ ದ್ರವವನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ ಪ್ರಯೋಗಾಲಯಕ್ಕೆ ರವಾನೆ 
 

6 Students Ill Due to Chilly Sauce Leak in Kodagu grg
Author
Bengaluru, First Published May 25, 2022, 9:01 AM IST

ಕೊಡಗು(ಮೇ.25):  ಲಾರಿಯಿಂದ ರಸ್ತೆಯ ಮೇಲೆ ಕೆಂಪು ಬಣ್ಣದ ದ್ರವ ಸೋರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಆರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ದಾಖಲಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಮಂಗಳವಾರ ನಡೆದಿದೆ.

ಕುಶಾಲನಗರದಿಂದ ಸಿದ್ದಾಪುರ ಮಾರ್ಗವಾಗಿ ಕೇರಳಕ್ಕೆ ಹೊರಟ ಲಾರಿಯಿಂದ ರಸ್ತೆಯುದ್ದಕ್ಕೂ ದ್ರಾವಣವೊಂದು ಸೋರಿಕೆಯಾಗಿದೆ. ವಾಲ್ನೂರಿನಿಂದ ವಿರಾಜಪೇಟೆವರೆಗೆ ಈ ದ್ರಾವಣ ಸೋರಿಕೆಯಿಂದ ಹೊರ ಬಂದ ಘಾಟು ವಾಸನೆಯನ್ನು ಉಸಿರಾಡಿದ ಹಲವರಿಗೆ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಕೊಡಗಿನಲ್ಲಿ ಮತಾಂತರಕ್ಕೆ ಯತ್ನ: ಕೇರಳ ಮೂಲದ ದಂಪತಿ ಸೆರೆ

ದ್ರವದಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೆಮ್ಮು, ಕಣ್ಣುಮೂಗು ಗಂಟಲಿನಲ್ಲಿ ಉರಿ, ಸೀನುವಿಕೆ ಅಲರ್ಜಿಯಂತಹ ಲಕ್ಷಣಗಳು ಕಾಣಿಸಿಕೊಂಡಿವೆ. ಎಲ್ಲರೂ ಕಣ್ಣು ಮೂಗು ಮುಚ್ಚಿಕೊಂಡೇ ಓಡಾಡಲಾರಂಭಿಸಿದರು. ಆದರೂ ಘಾಟು ವಾಸನೆಯಿಂದ ಶಾಲೆಗೆ ತೆರಳುತ್ತಿದ್ದ ಆರು ವಿದ್ಯಾರ್ಥಿಗಳು ಉಸಿರಾಟದ ಸಮಸ್ಯೆ ತಲೆದೋರಿ ಆಸ್ಪತ್ರೆ ದಾಖಲಾಗಿದ್ದಾರೆ. ಅಸ್ವಸ್ಥರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆಯುದ್ದಕ್ಕೂ ದ್ರಾವಣ ಸೋರಿಕೆ ಮಾಡಿದ ಲಾರಿಯನ್ನು ವಿರಾಜಪೇಟೆ- ಕೇರಳ ರಾಜ್ಯ ಹೆದ್ದಾರಿಯ ಮಾಕುಟ್ಟಚೆಕ್‌ ಪೋಸ್ಟ್‌ ನಲ್ಲಿ ಪೊಲೀಸರು ವಶಕ್ಕೆ ಪಡೆದರು. ಲಾರಿಯಲ್ಲಿ ಮೆಣಸಿನ ಸಾಸ್‌ ಇದ್ದು ಟ್ಯಾಕರ್‌ಗೆ ಕಲ್ಲು ಬಡಿದು ರಂಧ್ರವಾಗಿ ಸಾಸ್‌ ಸೋರಿಕೆಯಾಗಿದೆ ಎಂದು ಚಾಲಕ ಹೇಳಿಕೆ ನೀಡಿದ್ದಾನೆ.

ಸಿದ್ದಾಪುರ ವೈದ್ಯಾಧಿಕಾರಿ ರಾಘವೇಂದ್ರ, ಠಾಣಾಧಿಕಾರಿ ಮೋಹನ್‌ ರಾಜ್‌ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಶಂಕಿತ ದ್ರವವನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಜಿಲ್ಲಾ ಡಿಎಚ್‌ಒ ಡಾ.ವೆಂಕಟೇಶ್‌ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಘಟನೆಯಿಂದ ನೆಲ್ಯಹುದಿಕೇರಿ ಮತ್ತು ಸಿದ್ದಾಪುರ ಭಾಗದಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

‘ಬಂದೂಕು ಹಿಡಿಯೋದು ನಮ್ಮ ಹಕ್ಕು, ಕೇಳೋಕ್ಕೆ ಸಿದ್ದು ಯಾರು?’

ಡಿಹೆಚ್‌ಒ ಡಾ. ವೆಂಕಟೇಶ ಮಾತನಾಡಿ, ಲಾರಿಯಿಂದ ಸೊರಿಕೆಯಾದ ದ್ರಾವಣವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಯಾವುದೇ ಆರೋಗ್ಯ ತೊಂದರೆ ಇಲ್ಲ. ಅವರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈ ಭಾಗದ ಯಾರಿಗಾದರೂ ಆರೋಗ್ಯ ಸಮಸ್ಯೆ ಉಂಟಾಗಿದೆಯಾ ಎಂದು ತಿಳಿಯಲು ಇಲಾಖಾ ಸಿಬ್ಬಂದಿಗಳನ್ನು ಸುತ್ತಮುತ್ತಲ ಭಾಗಗಳಿಗೆ ಕಳುಹಿಸಿ ಮಾಹಿತಿ ಕಲೆ ಹಾಕುತಿರುವುದಗಿ ತಿಳಿಸಿದರು.

ಬೆಳಗ್ಗೆ ಆತಂಕ ಸೃಷ್ಟಿ: 

ರಸ್ತೆಯುದ್ಧಕ್ಕೂ ಲಾರಿಯಿಂದ ಅನಿಲ ಸೋರಿಕೆಯಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆಂಬ ವಿಷಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್‌ ಆಗಿ ಕೆಲಕಾಲ ಆತಂಕ ಸೃಷ್ಟಿಸಿತು. ಆದರೆ ಮಾಕುಟ್ಟ ಚೆಕ್‌ ಪೋಸ್ಟ್‌ ಬಳಿ ಲಾರಿಯನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭ ಲಾರಿಯ ಚಾಲಕ ಬ್ಯಾಡಗಿ ಮೆಣಸಿನಕಾಯಿ ಸಾಸ್‌ ಎಂದು ಸ್ಪಷ್ಟಪಡಿಸಿದ್ದ. ಇದು ಅನಿಲ ಸೋರಿಕೆಯಲ್ಲ. ಮೆಣಸಿನ ಕಾಯಿ ಸಾಸ್‌ ನಿಂದಾಗಿ ಈ ರೀತಿಯಾಗಿದೆ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದರು.
 

Follow Us:
Download App:
  • android
  • ios