ಬೆಂಗಳೂರು [ನ.27]:  ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಚುನಾವಣಾಧಿಕಾರಿ ಮತ್ತು ಸಿಬ್ಬಂದಿಯನ್ನು ಕರ್ತವ್ಯ ಲೋಪದ ಮೇಲೆ ಅಮಾನತು ಮಾಡಲಾಗಿದೆ.

ಬೆಂಗಳೂರು ನಗರದ ಚೆಕ್‌ ಪೋಸ್ಟ್‌ಗಳಲ್ಲಿ ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಆರು ಮಂದಿಯನ್ನು ಅಮಾನತು ಮಾಡಲಾಗಿದೆ.

ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ನಗರದ ವಿವಿಧ ಚೆಕ್‌ ಪೋಸ್ಟ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದ ಟಿ.ಸಿ.ಪಾಳ್ಯ ಚೆಕ್‌ ಪೋಸ್ಟ್‌, ಯಶವಂತಪುರದ ಮಾಗಡಿ ನೈಸ್‌ ರಸ್ತೆಯ ದೊಡ್ಡ ಗೊಲ್ಲರಹಟ್ಟಿಚೆಕ್‌ ಪೋಸ್ಟ್‌, ತಾವರಕೆರೆ ಚೆಕ್‌ ಪೋಸ್ಟ್‌ನಲ್ಲಿ ತಲಾ ಒಬ್ಬರು ಮತ್ತು ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲಸೂರು ಚೆಕ್‌ ಪೋಸ್ಟ್‌ನಲ್ಲಿ ಇಬ್ಬರು ಸೇರಿ ಒಟ್ಟು 6 ಅಧಿಕಾರಿ/ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚುನಾವಣಾ ಆಯೋಗ ಹಿರಿಯ ಐಎಎಸ್‌ ಅಧಿಕಾರಿ ಮೌನಿಷ್‌ ಮುದ್ಗಿಲ್‌ ಅವರನ್ನು ಚುನಾವಣಾ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಪರಿವೀಕ್ಷಕರಾಗಿ ನೇಮಿಸಿ ಆದೇಶ ಹೊರಡಿಸಿದೆ.