ದಾವಣಗೆರೆ(ಜೂ.24): ಒಂದು ಸಣ್ಣ ಪ್ರಮಾದ ನವಜಾತ ಶಿಶುವಿನ ಬಲಿ ಪಡೆದುಕೊಂಡಿದೆ. ಖಾಸಗಿ ಲ್ಯಾಬ್‌ವೊಂದು ನೀಡಿದ ತಪ್ಪು ವರದಿಯಿಂದಾಗಿ ಏನೂ ಮಾಡದ ತಪ್ಪಿಗೆ ಎಳೆಮಗು ಜೀವ ಕಳೆದುಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ತಾಯಿಗೆ ಕೊರೋನಾ ಪಾಸಿಟಿವ್ ಇದೆ ಎಂದು ಖಾಸಗಿ ಲ್ಯಾಬ್ ವರದಿ‌ ನೀಡಿತ್ತು. ಜೂನ್ 18 ರಂದು ಕೋವಿಡ್ ಆಸ್ಪತ್ರೆಯಲ್ಲಿ ಆ ಮಹಿಳೆಗೆ ನಾರ್ಮಲ್ ಡಿಲೆವರಿ ಆಗಿತ್ತು. ತಾಯಿಗೆ ಮೊದಲು ಪಾಸಿಟಿವ್ ಇದೆ ಎನ್ನುವ ರಿಪೋರ್ಟ್ ಆಧರಿಸಿ ಮಗುವನ್ನು ICU ನಲ್ಲಿ ಪ್ರತ್ಯೇಕ ಇರಿಸಲಾಗಿತ್ತು. ಲ್ಯಾಬ್‌ನ ತಪ್ಪು ವರದಿಯಿಂದ ತಾಯಿ ಮಗುವನ್ನು ಪ್ರತ್ಯೇಕವಾಗಿ ಇರಿಸಿದ್ದರು. ಇದೀಗ ಉಸಿರಾಟದ ಸಮಸ್ಯೆಯಿಂದ ನವಜಾತ ಶಿಶು ಸಾವನ್ನಪ್ಪಿದೆ.

ದಾವಣಗೆರೆಯ ಆ ಮಹಿಳೆಗೆ ಮೊದಲು ಪಾಸಿಟಿವ್ ಎಂದು ವರದಿ‌ ನೀಡಿದ್ದ ಖಾಸಗಿ ಲ್ಯಾಬ್ ನಂತರದ ಪರೀಕ್ಷೆ ವೇಳೆ ನೆಗೆಟಿವ್ ವರದಿ ನೀಡಿದೆ. ನೆಗೆಟಿವ್ ಎಂದು ವರದಿ ಬಂದ ಮೇಲು ತಾಯಿಯನ್ನು ಹೊರಗೆ ಬಿಟ್ಟಿಲ್ಲ. ಲ್ಯಾಬ್ ನ ವರದಿ ತಪ್ಪಿನಿಂದ ಎಳೆಮಗು ಜೀವ ಕಳೆದುಕೊಂಡಿದೆ. ಆಸ್ಪತ್ರೆ ಸಿಬ್ಬಂದಿ ಮೃತ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರಾಣಿಗಳಾಯ್ತು, ಈಗ ಗರ್ಭನಾಳದ ಕಷಾಯ ಕುಡೀತಿದ್ದಾರೆ ಚೀನಾ ಮಂದಿ!

ಮೃತ ನವಜಾತ ಶಿಶುವನ್ನು ನೋಡುತ್ತಲೇ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ರೀತಿ ಅನ್ಯಾಯ ಯಾರಿಗು ಆಗಬಾರದು. ಈ ಸಾವಿಗೆ ನ್ಯಾಯ ಕೊಡಿಸುವವರು ಯಾರು ಎಂದು ಪೋಷಕರು ಅಳಲನ್ನು ತೋಡಿಕೊಂಡಿದ್ದಾರೆ.   

ಮಂಗಳವಾರ(ಜೂ.23)ವಷ್ಟೇ ದಾವಣಗೆರೆ ಜಿಲ್ಲಾಧಿಕಾರಿ ಲ್ಯಾಬ್ ನಿಂದ ಆರು ಜನರ ವರದಿ ತಪ್ಪಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಒಟ್ಟು ಆರು ಜನರಲ್ಲಿ ನಾಲ್ವರ ಗರ್ಭಿಣಿಯರಿಗೆ ನೆಗೆಟಿವ್ ಇದ್ದರು ಪಾಸಿಟಿವ್ ಎಂದು‌ ಬಂದಿತ್ತು.