ಬಂಟ್ವಾಳ(ಮೇ.07): ಬುಧವಾರ ಬಾಲಕಿಗೆ ಕೊರೋನಾ ಸೋಂಕು ದೃಢಪಡುವುದರೊಂದಿಗೆ ಬಂಟ್ವಾಳ ಪೇಟೆಯಲ್ಲಿ 6ನೇ ಪ್ರಕರಣ ದಾಖಲಾದಂತಾಗಿದೆ. ಒಟ್ಟು ಎರಡು ಮನೆಗಳ ಐವರಿಗೆ ಬಾಧಿಸಿದರೆ, ಈ ಮನೆಗಳಿಗೆ ನಿಕಟ ಸಂಪರ್ಕವಿರುವ ಮನೆಯವರೊಬ್ಬರಿಗೂ ಸೋಂಕು ಬಾಧಿಸಿದೆ.

6 ಮಂದಿಯ ಪೈಕಿ ಮೂವರು ಸಾವನ್ನಪ್ಪಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 69 ವರ್ಷದ ವೃದ್ಧ, 33 ವರ್ಷದ ಮಹಿಳೆ ಮತ್ತು 16ರ ಬಾಲಕಿ ಸೇರಿದ್ದಾರೆ.

ಮಂಗಳೂರಲ್ಲಿ ಹೆಚ್ಚಿದ ಕೊರೋನಾತಂಕ: ಊರಿಗೆ ಕಳುಹಿಸುವಂತೆ ಕಾರ್ಮಿಕರ ಪ್ರತಿಭಟನೆ

ಏ.19ರಂದು ಸೋಕಿನಿಂದ ಮಹಿಳೆ ಮೃತಪಟ್ಟಿದ್ದು, ನಾಲ್ಕು ದಿನಗಳ ನಂತರ ಅವರ ಅತ್ತೆ (ಏ.23ರಂದು) ಸಾವನ್ನಪ್ಪಿದ್ದರು. ಈಗ ಸೋಂಕಿನಿಂದ ಮೃತಪಟ್ಟಮೊದಲ ಮಹಿಳೆಯ ಮಗಳಿಗೆ ಸೋಂಕು ತಗುಲಿದೆ. ಮೃತಪಟ್ಟಪಕ್ಕದ ಮನೆಯ ಮಹಿಳೆಯ ಮಗಳಿಗೂ ಸೋಂಕು ಬಾಧಿಸಿತ್ತು. ಅವರ ಸಂಬಂಧಿ, ಪಕ್ಕದ ಬೀದಿಯ ನಿವಾಸಿ ವೃದ್ಧರೋರ್ವರಿಗೂ ಸೋಂಕು ಬಾಧಿಸಿದೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯೇ ಕೊರೋನಾ ಹಾಟ್‍ಸ್ಪಾಟ್: ಅಚ್ಚರಿಯಾದ್ರೂ ಸತ್ಯ

ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿಯ ಮಹಿಳೆಯೋರ್ವರೂ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂಲಕ ತಾಲೂಕಿನ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆಯಾದಂತಾಗಿದೆ. ಬಂಟ್ವಾಳ ತಾಲೂಕಿನಲ್ಲಿ 3 ಸಾವು ಈಗಾಗಲೇ ಸಂಭವಿಸಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ನಾಲ್ವರಲ್ಲಿ ಮೂವರು ಬಂಟ್ವಾಳ ಮತ್ತು ಒಬ್ಬರು ನರಿಕೊಂಬು ನಾಯಿಲದವರು.