Asianet Suvarna News Asianet Suvarna News

ಬೆಂಗ್ಳೂರಿಗೆ ಬಂತು 5ನೇ ವಂದೇ ಭಾರತ್ ರೈಲು: ಪ್ರಾಯೋಗಿಕ ಸಂಚಾರ ಯಶಸ್ವಿ

ದಂಡು ರೈಲ್ವೆ ನಿಲ್ದಾಣದ ಹೊಸ ಪ್ಲಾಟ್‌ಫಾರಂಗೆ ಬಂದ ಈ ಸೆಮಿ ಸ್ಪೀಡ್ ವಂದೇ ಭಾರತ್ ರೈಲು ಸುಮಾರು 370 ಕಿ.ಮೀ. ಅಂತರವನ್ನು 6.30 ಗಂಟೆಯಲ್ಲಿ ಕ್ರಮಿಸಿದೆ. 6 ಚೇರ್‌ಕಾರ್‌, ಒಂದು ಎಕ್ಸಿಕ್ಯೂಟಿವ್‌ ಕ್ಲಾಸ್ ಬೋಗಿಯನ್ನು ಒಳಗೊಂಡಿದೆ. ಸೇಡಂ ಘಾಟ್‌ ಸೆಕ್ಷನ್‌ನಲ್ಲಿ ಶಿವಾಡಿಯಿಂದ ಮಾರಂಡಹಳ್ಳಿವರೆಗೆ ಆನೆ ಕಾರಿಡಾರ್‌ ಇರುವುದರಿಂದ ಇಲ್ಲಿ ರೈಲಿನ ವೇಗವನ್ನು ಕಡಿಮೆ ಮಾಡಲಾಗುತ್ತದೆ. 

5th Vande Bharat Express Train Arrived in Bengaluru grg
Author
First Published Dec 28, 2023, 6:37 AM IST

ಬೆಂಗಳೂರು(ಡಿ.28):  ರಾಜ್ಯದ ಐದನೇ ವಂದೇ ಭಾರತ್‌ ರೈಲು ‘ಕೊಯಮತ್ತೂರು- ಬೆಂಗಳೂರು’ ನಡುವೆ ಪ್ರಾಯೋಗಿಕ ಸಂಚಾರ ನಡೆಸಿದ್ದು, ನಿಗದಿತ ಅವಧಿಯೊಳಗೆ ಬೆಂಗಳೂರು ನಗರ ತಲುಪಿತು. ದಂಡು ರೈಲ್ವೆ ನಿಲ್ದಾಣದ ಹೊಸ ಪ್ಲಾಟ್‌ಫಾರಂಗೆ ಬಂದ ಈ ಸೆಮಿ ಸ್ಪೀಡ್ ವಂದೇ ಭಾರತ್ ರೈಲು ಸುಮಾರು 370 ಕಿ.ಮೀ. ಅಂತರವನ್ನು 6.30 ಗಂಟೆಯಲ್ಲಿ ಕ್ರಮಿಸಿದೆ. 6 ಚೇರ್‌ಕಾರ್‌, ಒಂದು ಎಕ್ಸಿಕ್ಯೂಟಿವ್‌ ಕ್ಲಾಸ್ ಬೋಗಿಯನ್ನು ಒಳಗೊಂಡಿದೆ. ಸೇಡಂ ಘಾಟ್‌ ಸೆಕ್ಷನ್‌ನಲ್ಲಿ ಶಿವಾಡಿಯಿಂದ ಮಾರಂಡಹಳ್ಳಿವರೆಗೆ ಆನೆ ಕಾರಿಡಾರ್‌ ಇರುವುದರಿಂದ ಇಲ್ಲಿ ರೈಲಿನ ವೇಗವನ್ನು ಕಡಿಮೆ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ತ್ರಿನೇತ್ರ ಮಾತನಾಡಿ, ಈ ರೈಲು ಬೆಳಗ್ಗೆ 5 ಗಂಟೆಗೆ ಕೊಯಮತ್ತೂರಿನಿಂದ ಹೊರಟು ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣಕ್ಕೆ 11.40ಕ್ಕೆ ತಲುಪಿತು. ಮಧ್ಯಾಹ್ನ 1.40ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8ಕ್ಕೆ ಕೊಯಮತ್ತೂರು ತಲುಪುತ್ತದೆ. ಇದು ತಿರುಪುರ, ಸೇಲಮ್‌, ಈರೋಡ್‌, ಪಾಲಕ್ಕಾಡ್‌, ತ್ರಿಸ್ಸುರ್ ಸೇರಿ ಐದು ಕಡೆ ನಿಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ರಂದು ಚಾಲನೆ ನೀಡಲಿದ್ದು, ಡಿ.31 ಅಥವಾ ಜ.1ರಿಂದ ಪ್ರಯಾಣಿಕ ಸೇವೆ ಕಾರ್ಯಾರಂಭ ಮಾಡಲಿದೆ, ಪ್ರಯಾಣ ದರ ಇನ್ನಷ್ಟೇ ನಿಗದಿ ಆಗಬೇಕಿದೆ ಎಂದು ತಿಳಿಸಿದರು.

ಬೆಂಗಳೂರಿಗೆ 2 ಸೇರಿ 5 ವಂದೇ ಭಾರತ್, 2 ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಡಿ. 30 ರಂದು ಹಸಿರು ನಿಶಾನೆ

ರಾಜ್ಯಕ್ಕೆ ಪ್ರಯೋಜನ ಶೂನ್ಯ

ರೈಲ್ವೆ ಸಾರಿಗೆ ತಜ್ಞ ಕೃಷ್ಣಪ್ರಸಾದ್‌ ಮಾತನಾಡಿ, ಬೆಂಗಳೂರು-ಕಾಚಿಗುಡ ವಂದೇ ಭಾರತ್‌ ರೈಲಿನಂತೆ ಈ ವಂದೇ ಭಾರತ್‌ ರೈಲಿಂದಲೂ ರಾಜ್ಯಕ್ಕೆ ಪ್ರಯೋಜನ ಇಲ್ಲ. ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ 200 ಕಿ.ಮೀ. ಸಂಚರಿಸಿದರೂ ರಾಜ್ಯದಲ್ಲಿ ಕೇವಲ 45 ಕಿ. ಮೀ ಮಾತ್ರ ಓಡುತ್ತದೆ. ದಂಡು ರೈಲ್ವೆ ನಿಲ್ದಾಣ ಬಿಟ್ಟರೆ ಸೀದಾ ಹೊಸೂರಿಗೆ ಈ ರೈಲು ಹೋಗುತ್ತದೆ. ಕರ್ನಾಟಕದಲ್ಲಿ ಮತ್ತೆಲ್ಲೂ ನಿಲ್ಲುವುದಿಲ್ಲ. ತಮಿಳುನಾಡಿಗೆ ಹೆಚ್ಚಿನ ಪ್ರಯೋಜನ ಆಗಲಿದ್ದು, ಹೊಸೂರು, ಧರ್ಮಾಪುರಿಗೆ ಬರಲು ಅಲ್ಲಿನವರಿಗೆ ಅನುಕೂಲವಾಗಲಿದೆ. ಬಂಗಾರಪೇಟೆ, ಕುಪ್ಪಂ ಮೇಲೆ ಬಂದಿದ್ದರೆ ಒಂದಿಷ್ಟು ಅನುಕೂಲವಾಗುತ್ತಿತ್ತು. ಆದರೆ, ಹೊಸೂರಲ್ಲಿ ಪಿಟ್‌ಲೈನ್‌ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಮಾತ್ರ ಬೆಂಗಳೂರುವರೆಗೆ ಈ ರೈಲು ಬರುತ್ತಿದೆ ಎಂದು ತಿಳಿಸಿದರು. 

Latest Videos
Follow Us:
Download App:
  • android
  • ios