243 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ಮಾಡಿ ಟೆಂಡರ್‌, ಸೆ.28 ಟೆಂಡರ್‌ ಬಿಡಿಂಗ್‌ಗೆ ಕೊನೆಯ ದಿನ

ಬೆಂಗಳೂರು(ಸೆ.03):  ಸಿಲಿಕಾನ್‌ ಸಿಟಿ ಬೆಂಗಳೂರಿನ ಕಸದ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಆರಂಭಿಸಲಾದ ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ’ಯಿಂದ ಪಾಲಿಕೆಯ 243 ವಾರ್ಡ್‌ಗಳಿಗೆ ಹಸಿ, ಒಣ ಕಸ ಸೇರಿದಂತೆ ಎಲ್ಲಾ ಮಾದರಿಯ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 590 ಕೋಟಿ ರು. ಅಂದಾಜು ವೆಚ್ಚದ ಟೆಂಡರ್‌ ಆಹ್ವಾನಿಸಲಾಗಿದೆ.

ಕಳೆದೊಂದು ದಶಕದಿಂದ ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೈಗೊಂಡ ಟೆಂಡರ್‌ ಪ್ರಕ್ರಿಯೆಗಳು ವಿಫಲವಾಗಿವೆ. ಇದೀಗ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮೂಲಕ ಟೆಂಡರ್‌ ಆಹ್ವಾನಿಸಲಾಗಿದೆ. ಸದ್ಯ ಆಯಾ ವಾರ್ಡ್‌ಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಮೂರರಿಂದ ನಾಲ್ಕು ವಾರ್ಡ್‌ಗಳನ್ನು ಒಟ್ಟು ಗೂಡಿಸಿ ಪ್ಯಾಕೇಜ್‌ ರಚಿಸಲಾಗಿದೆ. ಅದರಂತೆ 243 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ಮಾಡಿ ಟೆಂಡರ್‌ ಕರೆಯಲಾಗಿದೆ.

ರಾಜ್ಯದಲ್ಲೇ ಮೊದಲು: ಗ್ರಾಮೀಣ ಪ್ರದೇಶದ ಕಸ ವಿಲೇವಾರಿ ವಾಹನಕ್ಕೆ ಜಿಪಿಎಸ್‌..!

ಸೆ.8 ರಂದು ಗುತ್ತಿಗೆದಾರರೊಂದಿಗೆ ಪೂರ್ವ ಬಿಡ್‌ ಸಭೆ ನಡೆಸಲಾಗುತ್ತದೆ. ಸೆ.28 ಟೆಂಡರ್‌ ಬಿಡಿಂಗ್‌ಗೆ ಕೊನೆಯ ದಿನವಾಗಿದೆ. ಅಂದೇ ತಾಂತ್ರಿಕ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ. ಸೆ.30 ರಂದು ಟೆಂಡರ್‌ ಬಿಡ್‌ ತೆರೆಯಲಾಗುತ್ತದೆ ಎಂದು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ’ಯ ಮುಖ್ಯ ಪ್ರಧಾನ ವ್ಯವಸ್ಥಾಪಕರು ಪರಮೇಶ್ವರಯ್ಯತಿಳಿಸಿದ್ದಾರೆ.

590 ಕೋಟಿ ರು. ಅಂದಾಜು

ಈ ಹಿಂದೆ ಹಸಿ ತ್ಯಾಜ್ಯ ಸಂಗ್ರಹಿಸುವುದಕ್ಕೆ ಬಿಬಿಎಂಪಿ ಸುಮಾರು 450 ಕೋಟಿ ರು. ವಾರ್ಷಿಕ ವೆಚ್ಚ ಮಾಡುವ ಯೋಜನೆ ಸಿದ್ಧಪಡಿಸಲಾಗಿತ್ತು. ಒಣ ತ್ಯಾಜ್ಯವನ್ನು ಸ್ವಯಂ ಸೇವಾ ಸಂಸ್ಥೆಗಳೇ ಸಂಗ್ರಹಿಸುತ್ತಿದ್ದವು. ಬಿಬಿಎಂಪಿ ಈ ಸ್ವಯಂ ಸೇವಾ ಸಂಸ್ಥೆಗಳಿಗೆ ಹಣ ಕೊಡುತ್ತಿರಲಿಲ್ಲ. ಆದರೆ, ಇದೀಗ ಬಿಬಿಎಂಪಿ ಆಹ್ವಾನಿಸಿರುವ ಟೆಂಡರ್‌ ಮೊತ್ತ 590 ಕೋಟಿ ರು.ಗೆ ಹೆಚ್ಚಳವಾಗಿದೆ. ಗುತ್ತಿಗೆದಾರರು ಬಿಡ್‌ ಮಾಡುವ ಸಂದರ್ಭದಲ್ಲಿ ಟೆಂಡರ್‌ನ ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಗುತ್ತಿಗೆದಾರನಿಗೆ ಸಂಪೂರ್ಣ ಹೊಣೆ

ಮನೆ ಮನೆಯಿಂದ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸುವುದು. ಬ್ಲಾಕ್‌ಸ್ಪಾಟ್‌ ಸ್ವಚ್ಛಗೊಳಿಸುವುದು, ಮಾಂಸ ತ್ಯಾಜ್ಯ ಸಂಗ್ರಹಣೆ, ಕಟ್ಟಡ ತ್ಯಾಜ್ಯ ವಿಲೇವಾರಿ, ರಸ್ತೆ, ಮೈದಾನ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಗುತ್ತಿಗೆದಾರನ ಜವಾಬ್ದಾರಿಯಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಗುತ್ತಿಗೆದಾರರಿಗೆ ಭಾರೀ ಪ್ರಮಾಣ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Waste Disposal: ಇದೊಮ್ಮೆ ಕರುಣೆ ತೋರಿಸಿ, ಹೈಕೋರ್ಟ್‌ಗೆ ಕ್ಷಮೆ ಕೇಳಿದ ಬಿಬಿಎಂಪಿ

ಪ್ರಮುಖ ಷರತ್ತು ಅನ್ವಯ

ಕಸವನ್ನು ಗುತ್ತಿಗೆದಾರರು ಬೇರ್ಪಡಿಸಿದ ಮಾದರಿಯಲ್ಲಿ ಮನೆ-ಮನೆಯಿಂದ ಮುಚ್ಚಿದ ವಾಹನಗಳಲ್ಲಿ ಸಂಗ್ರಹಿಸುವುದು ಕಡ್ಡಾಯಗೊಳಿಸಲಾಗಿದೆ. ಒಬ್ಬ ಗುತ್ತಿಗೆದಾರರನಿಗೆ ಒಂದು ಪ್ಯಾಕೇಜ್‌ ಮಾತ್ರ ನೀಡಲಾಗುವುದು ಎಂದು ಷರತ್ತು ವಿಧಿಸಲಾಗಿದೆ.

ಯಾವ ವಲಯಕ್ಕೆ ಎಷ್ಟು ಪ್ಯಾಕೇಜ್‌?
ವಲಯ ಪ್ಯಾಕೇಜ್‌

ಪೂರ್ವ 16
ಪಶ್ಚಿಮ 16
ದಕ್ಷಿಣ 18
ಬೊಮ್ಮನಹಳ್ಳಿ 9
ದಾಸರಹಳ್ಳಿ 4
ಮಹದೇವಪುರ 11
ಆರ್‌ಆರ್‌ನಗರ 9
ಯಲಹಂಕ 6
ಒಟ್ಟು 89