ಬೆಂಗಳೂರು [ಆ.28]:  ಬಿಬಿಎಂಪಿ ವ್ಯಾಪ್ತಿಯ 1,400 ಕಿ.ಮೀ. ಉದ್ದದ ಮುಖ್ಯ ರಸ್ತೆ ಹಾಗೂ ವಾರ್ಡ್‌ ಮಟ್ಟದ ರಸ್ತೆಗಳಲ್ಲಿನ ಗುಂಡಿ ಮುಚ್ಚಲು 58 ಕೋಟಿ ರು. ಮೀಸಲಿಟ್ಟು ಕಾಮಗಾರಿಗೆ ಗುತ್ತಿಗೆದಾರರನ್ನು ನೇಮಿಸಲಾಗಿದೆ ಎಂದು ಆಯುಕ್ತ ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, ನಗರದ 1,400 ಕಿ.ಮೀ. ಮುಖ್ಯರಸ್ತೆಯಲ್ಲಿ ಗುಂಡಿ ಮುಚ್ಚುವುದಕ್ಕೆ 12 ಕೋಟಿ ರು., ವಾರ್ಡ್‌ ರಸ್ತೆ ಗುಂಡಿ ಮುಚ್ಚುವುದಕ್ಕೆ ಒಟ್ಟು 46 ಕೋಟಿ ರು. ಮೀಸಲಿಡಲಾಗಿದೆ. ಈಗಾಗಲೇ ಗುತ್ತಿಗೆದಾರರನ್ನೂ ನೇಮಿಸಲಾಗಿದೆ. ಗುಂಡಿ ಮುಚ್ಚುವ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಪಾಲಿಕೆಯ ಹತ್ತು ಎಂಜಿನಿಯರ್‌ಗಳಿಗೆ ಈಗಾಗಲೇ ತಲಾ 2 ಸಾವಿರ ರು. ದಂಡ ವಿಧಿಸಲಾಗಿದೆ. ರಸ್ತೆ ಗುಂಡಿಯಿಂದ ಅಪಘಾತವಾಗಿ ಸಾವು ನೋವು ಸಂಭವಿಸಿದ ಪಕ್ಷದಲ್ಲಿ ಸಂಬಂಧಪಟ್ಟಎಂಜಿನಿಯರ್‌ ವೇತನದಲ್ಲಿ ಕಡಿತಗೊಳಿಸಿ ಪರಿಹಾರ ನೀಡಲಾಗುವುದು ಎಂದು ಸಮಜಾಯಿಷಿ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿಕ್ಲಿಕ್ಕಿಸಿ

2ನೇ ಹಂತದ ವೈಟ್‌ಟಾಪಿಂಗ್‌ ಸ್ಥಗಿತ:  ರಾಜ್ಯ ಸರ್ಕಾರ 2016-17ನೇ ಸಾಲಿನಲ್ಲಿ ರೂಪಿಸಿದ ಯೋಜನೆಯಂತೆ 2 ಹಂತದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿತ್ತು. ಅದರಂತೆ ಮೊದಲ ಹಂತದಲ್ಲಿ 40 ಕಿ.ಮೀ. ಉದ್ದದ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. ಸರ್ಕಾರದ ಸೂಚನೆಯಂತೆ 2ನೇ ಹಂತದ ಕಾಮಗಾರಿಯ ಎಲ್ಲ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಅದೇ ರೀತಿ ಟೆಂಡರ್‌ಶ್ಯೂರ್‌ನ 20 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಕಾಮಗಾರಿ ಚಾಲ್ತಿಯಲ್ಲಿದೆ ಎಂದು ವಿವರಿಸಿದರು.

ಮಂಜುನಾಥ್‌ ಮುಂದುವರಿಸಲು ನಿರ್ಣಯ

ಬಿಬಿಎಂಪಿಗೆ ಆರ್ಥಿಕ ಶಿಸ್ತು, ಪಾಲಿಕೆ ಆಸ್ತಿ ಋುಣ ಮುಕ್ತಗೊಳಿಸುವುದು, ಇಂದಿರಾ ಕ್ಯಾಂಟೀನ್‌ ಯೋಜನೆ ಅನುಷ್ಠಾನ, ವೈಟ್‌ಟಾಪಿಂಗ್‌ ಮತ್ತು ಟೆಂಡರ್‌ ಶ್ಯೂರ್‌ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಅವರ ಪಾತ್ರ ಮಹತ್ವದಾಗಿದೆ. ಆಯುಕ್ತರ ವರ್ಗಾವಣೆಯಿಂದ ಪಾಲಿಕೆ ಕೈಗೊಂಡ ಅಭಿವೃದ್ಧಿ ಯೋಜನೆಗಳಿಗೆ ಅಡಚಣೆಯಾಗಲಿದೆ. ಹಾಗಾಗಿ, ಸದಸ್ಯರ ಅವಧಿ ಮುಕ್ತಾಯ ಆಗುವವರೆಗೆ ಮಂಜುನಾಥ್‌ ಪ್ರಸಾದ್‌ ಅವರನ್ನು ಮುಂದುವರಿಸುವಂತೆ ಸರ್ಕಾರವನ್ನು ಕೋರಿ ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಅಧಿಕಾರಿಗಳ ಗೈರಿಗೆ ಸದಸ್ಯರ ಆಕ್ಷೇಪ

ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆಯೇ ಅಧಿಕಾರಿಗಳ ಸಾಲಿನಲ್ಲಿ ಐದಾರು ಮಂದಿ ಅಧಿಕಾರಿಗಳು ಮಾತ್ರ ಕುಳಿತಿದ್ದರು. ಇದನ್ನು ಕಂಡು ಕಾಂಗ್ರೆಸ್‌ ಸದಸ್ಯ ಗುಣಶೇಖರ್‌ ಅವರು ಆಕ್ಷೇಪ ವ್ಯಕ್ತಪಡಿಸಿ, ಸಭಾ ತ್ಯಾಗಕ್ಕೆ ಮುಂದಾದರು. ಗುಣಶೇಖರ್‌ ಅವರನ್ನು ಮೇಯರ್‌ ಸಮಾಧಾನಪಡಿಸಿ, ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯುಕ್ತರಿಗೆ ಆದೇಶಿಸುವುದಾಗಿ ಹೇಳಿದರು. ಮಾಹಿತಿ ನೀಡದೇ ಸಭೆಗೆ ಗೈರಾದ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡುವುದಾಗಿ ಮಂಜುನಾಥ್‌ ಪ್ರಸಾದ್‌ ತಿಳಿಸಿದರು.

ಸಸಿ ನೆಡುವುದು ಬೇಡ, ಇರುವ ಮರ ಉಳಿಸಿ!

ಮತ್ತಿಕೆರೆಯ ಜೆ.ಪಿ.ಪಾರ್ಕ್ನಲ್ಲಿ ಕಾಂಪೌಂಡ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದಕ್ಕೆ 70ರಿಂದ 80 ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಅರಣ್ಯ ವಿಭಾಗ ಸಸಿ ನೆಡುವುದು ಬೇಡ. ಇರುವ ಮರಗಳನ್ನು ಸಂರಕ್ಷಣೆ ಮಾಡಲಿ ಸಾಕು ಎಂದು ಜೆ.ಪಿ. ಪಾರ್ಕ್ ವಾರ್ಡ್‌ ಸದಸ್ಯೆ ಮಮತಾ ಆಗ್ರಹಿಸಿದರು.

ಅದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಚೋಳರಾಜಪ್ಪ, ಕಳೆದ ಎರಡು ತಿಂಗಳಿಂದ ಯಾವುದೇ ಮರ ಕತ್ತರಿಸುವುದಕ್ಕೆ ಅನುಮತಿ ನೀಡಿಲ್ಲ. ಅನಧಿಕೃತವಾಗಿ ಮರ ಕತ್ತರಿಸುವುದರ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜೇಟ್ಲಿಗೆ ಸಂತಾಪ : ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರಿಗೆ ಬಿಬಿಎಂಪಿಯಲ್ಲಿ ಸಂತಾಪ ಸೂಚಿಸಲಾಯಿತು. ಮೇಯರ್‌ ಗಂಗಾಂಬಿಕೆ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಸೇರಿದಂತೆ ಹಲವು ಸದಸ್ಯರು ಸಂತಾಪ ವ್ಯಕ್ತಪಡಿಸಿದರು.