ಮೂರು ದಿನಗಳಲ್ಲಿ ನಗರದಲ್ಲಿ ಹೊಸದಾಗಿ 500ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಬೆಂಗಳೂರು [ಆ.16]: ಕೇವಲ ಮೂರು ದಿನಗಳಲ್ಲಿ ನಗರದಲ್ಲಿ ಹೊಸದಾಗಿ 500ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರ ಜತೆಗೆ ಬಿಬಿಎಂಪಿಯನ್ನು ಚಿಂತೆಗೆ ಗುರಿ ಮಾಡಿದೆ.
ಆ.10ಕ್ಕೆ ನಗರದಲ್ಲಿ ಒಟ್ಟು 4,443 ಡೆಂಘೀ ಪ್ರಕರಣಗಳು ಪತ್ತೆಯಾಗಿತ್ತು, ಈ ನಡುವೆ ಡೆಂಘೀ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದರು. ಆದರೆ, ಆ.12ರ ವೇಳೆ ಡೆಂಘೀ ಪ್ರಕರಣಗಳ ಸಂಖ್ಯೆ 5,006ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೂರು ದಿನಗಳಲ್ಲಿ 563 ಡೆಂಘೀ ಪ್ರಕರಣಗಳು ಪತ್ತೆಯಾಗಿರುವುದು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಡೆಂಘೀ ಪ್ರಕರಣ ನಿಯಂತ್ರಣ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತಂತೆ ಅಧಿಕಾರಿಗಳ ಸಭೆಯಲ್ಲಿ ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಮೇಯರ್ ಗಂಗಾಂಬಿಕೆ ಕಳವಳ ವ್ಯಕ್ತಪಡಿಸಿ, ಅತಿ ಹೆಚ್ಚು ಡೆಂಘೀ ಪ್ರಕರಣ ದಾಖಲಾಗಿರುವ 50 ವಾರ್ಡ್‌ಗಳಲ್ಲಿ ತಲಾ ನಾಲ್ವರಂತೆ 200 ಸ್ವಯಂ ಸೇವಕರನ್ನು ನೇಮಿಸಲಾಗುತ್ತಿದೆ ಎಂದು ತಿಳಿಸಿದರು.
ಹೀಗೆ ನೇಮಕವಾಗುವ ಸ್ವಯಂ ಸೇವಕರಿಗೆ ಮಾಸಿಕ 15 ಸಾವಿರ ರು. ವೇತನ ನೀಡಬೇಕು. ಅವರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ತೆರಳಿ ಜನರಲ್ಲಿ ಡೆಂಘೀ ಹರಡುವುದನ್ನು ತಡೆಯುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ವಾರದಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುವ ಕಡೆಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಮಾಹಿತಿಯಿದೆ. ಹೀಗಾಗಿ ಶುದ್ಧ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ ಎಂಬುದನ್ನು ಜನರಿಗೆ ತಿಳಿಸಿ, ನೀರು ಶೇಖರಿಸಿಕೊಂಡಿದ್ದರೆ ಅದಕ್ಕೆ ಸರಿಯಾಗಿ ಮುಚ್ಚಳಗಳನ್ನು ಮುಚ್ಚುವ ಕುರಿತು ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಡೆಂಘೀ ನಿಯಂತ್ರಣ ಕ್ರಮ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ಮಾತನಾಡಿ, ಪ್ರತಿ ವಾರ್ಡ್‌ಗೆ ನಾಲ್ವರು ಗ್ಯಾಂಗ್‌ಮ್ಯಾನ್‌ಗಳನ್ನು ನಿಯೋಜಿಸಲಾಗಿದೆ. ಅವರು ನಿರಂತರವಾಗಿ ಫಾಗಿಂಗ್ ಮತ್ತು ಔಷಧ ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ. ಅತಿ ಹೆಚ್ಚು ಪ್ರಕರಣ ಕಂಡುಬಂದಿರುವ 61 ವಾರ್ಡ್ ಗುರುತಿಸಲಾಗಿದೆ. ಅದರಲ್ಲಿ 50 ವಾರ್ಡ್‌ಗಳಲ್ಲಿ ಆಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿ ಡೆಂಘೀ ಹರಡುವ ಕುರಿತು ತಿಳಿಸಲಾಗುತ್ತಿದೆ. ಜತೆಗೆ ಶಾಲೆಗಳ ಸಹಯೋಗದೊಂದಿಗೆ ಜಾಗೃತಿ ಜಾಥಾ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಿಂದ ಈವರೆಗೆ 5,006 ಡೆಂಘೀ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಪೂರ್ವ ವಲಯ ವ್ಯಾಪ್ತಿ ಒಂದರಲ್ಲೇ 1,937 ಪ್ರಕರಣಗಳು ಪತ್ತೆಯಾಗಿವೆ. ಹಾಗೆಯೇ, ಹಳೆಯ ವಲಯಗಳಾದ ದಕ್ಷಿಣದಲ್ಲಿ 786 ಮತ್ತು ಪಶ್ಚಿಮದಲ್ಲಿ 364 ಸೇರಿ ಒಟ್ಟು 3,087 ಪ್ರಕರಣಗಳು ದಾಖಲಾಗಿದೆ. ಉಳಿದ ಐದು ಹೊಸ ವಲಯಗಳಲ್ಲಿ 1,919 ಡೆಂಘೀ ಪೀಡಿತರು ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
24 ಟನ್ ಪ್ಲಾಸ್ಟಿಕ್ ಜಪ್ತಿ
ಕಳೆದ ಜುಲೈ 15ರಿಂದ ಈವರೆಗೆ ಎಲ್ಲ ವಾರ್ಡ್‌ಗಳಲ್ಲಿ ಆರೋಗ್ಯಾಧಿಕಾರಿಗಳು ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಜಪ್ತಿ ಮಾಡಿದ್ದು ಈವರೆಗೆ 24 ಟನ್ ನಿಷೇಧಿತ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಲ್ಲದೆ, .2.8 ಕೋಟಿ ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳ ಬದಲು ಯಾವ್ಯಾವ ವಸ್ತುಗಳನ್ನು ಬಳಸಬಹುದು ಎಂದು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಅದಕ್ಕಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಪ್ಲಾಸ್ಟಿಕ್ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯಾಧಿಕಾರಿ ವಿಜಯೇಂದ್ರ ಮಾಹಿತಿ ನೀಡಿದರು.
ವಲಯವಾರು ಡೆಂಘಿ ಪ್ರಕರಣಗಳ ವಿವರ
ವಲಯ ಪ್ರಕರಣಗಳ ಸಂಖ್ಯೆ ಬಗೆಹರಿದ ಸಂಖ್ಯೆ ಬಗೆಹರಿಸಬೇಕಿರುವ ಸಂಖ್ಯೆ
ಪೂರ್ವ 1,937 1,248 689
ದಕ್ಷಿಣ 786 569 217
ಪಶ್ಚಿಮ 364 302 62
ಮಹದೇವಪುರ 760 576 184
ಬೊಮ್ಮನಹಳ್ಳಿ 589 482 107
ಆರ್.ಆರ್.ನಗರ 269 140 129
ಯಲಹಂಕ 185 165 20
ದಾಸರಹಳ್ಳಿ 116 109 07
ಒಟ್ಟು 5006 3591 1415
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಡೆಗೆ ಮನವಿ
ನಗರದ ಹೊರಭಾಗದಿಂದ ಬರುವ ತರಕಾರಿ, ಹೂ, ಹಣ್ಣು, ಸೊಪ್ಪಿನೊಂದಿಗೆ ನಗರಕ್ಕೆ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು ಬರುತ್ತಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.
