ಬೆಂಗಳೂರು(ಜು.15): ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಮಂಗಳವಾರ 56 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ಏಕ ದಿನದ ಸಾವಿನ ದಾಖಲೆಯಾಗಿದೆ.

ಸೋಮವಾರವಷ್ಟೇ 47 ಮಂದಿ ಮೃತಪಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು. ಮೃತಪಟ್ಟ56 ಮಂದಿಯ ಪೈಕಿ 35 ಮಂದಿ ಪುರುಷರು, 21 ಮಂದಿ ಮಹಿಳೆಯರಾಗಿದ್ದಾರೆ. 23 ಹಾಗೂ 29 ವರ್ಷದ ಯುವತಿಯರು ಸೇರಿದಂತೆ ಒಟ್ಟು 20 ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ನಾಲ್ಕು ಮಂದಿ ಕೊರೋನಾ ಸೋಂಕಿತರು ಮನೆಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಖಾಸಗಿ ಆಸ್ಪತ್ರೆಗಳ ಕೊರೋನಾ ಚಿಕಿತ್ಸೆ ಹಾಸಿಗೆ ವಿವರ ವೆಬ್‌ಸೈಟ್‌ನಲ್ಲಿ ಲಭ್ಯ

ಒಂದು ವಾರದಲ್ಲಿ 224 ಮಂದಿ ಬಲಿ:

ಕಳೆದ ಒಂದು ವಾರದಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ಕೊರೋನಾ ಸೋಂಕಿಗೆ ಒಟ್ಟು 224 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 377ಕ್ಕೆ ಏರಿಕೆಯಾಗಿದೆ. ಸದ್ಯ 317 ಮಂದಿ ನಗರದ ವಿವಿಧ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

20 ಸಾವಿರ ಗಡಿ ದಾಟಿದ ಸೋಂಕು

ಮಂಗಳವಾರ ನಗರದಲ್ಲಿ ಹೊಸದಾಗಿ 1,267 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಒಟ್ಟು ಸೋಂಕಿತಗೊಂಡವರ ಸಂಖ್ಯೆ 20,969ಕ್ಕೆ ಏರಿಕೆಯಾಗಿದೆ. ಈ ಪೈಕಿ ಈಗಾಗಲೇ 4,992 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನೂ 15,599 ಸಕ್ರಿಯ ಪ್ರಕರಣಗಳು ಇವೆ.

ಚೇತರಿಕೆ ಪ್ರಮಾಣ ಏರಿಕೆ:

ಮಂಗಳವಾರ ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 664 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ ಒಂದು ವಾರದಲ್ಲಿ 3183 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.