ಹಾವೇರಿ: ನಿರಂತರ ಮಳೆಗೆ 5 ಸಾವಿರ ಎಕರೆ ಬೆಳೆ ಹಾನಿ
ಕಳೆದ ಎರಡು ದಿನಗಳಿಂದ ಅಬ್ಬರದ ಮಳೆಯಿಲ್ಲದಿದ್ದರೂ ಜಿಟಿಜಿಟಿ ಮಳೆ ಮುಂದುವರಿದಿದೆ. ಶುಕ್ರವಾರ ಕೂಡ ಆಗಾಗ ಮಳೆ ಬೀಳುತ್ತಿದೆ. ಮಳೆ ನಿಂತರೂ ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಉಕ್ಕೇರಿ ಹರಿಯುತ್ತಿವೆ
ಹಾವೇರಿ(ಜು.16): ಕಳೆದ ಹತ್ತು ದಿನಗಳಿಂದ ಬೀಳುತ್ತಿರುವ ನಿರಂತರ ಮಳೆಗೆ ಜಿಲ್ಲೆಯಲ್ಲಿ 1611 ಹೆಕ್ಟೇರ್ ಕೃಷಿ ಹಾಗೂ 335 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಸೇರಿದಂತೆ ಸುಮಾರು 5 ಸಾವಿರ ಎಕರೆಯಷ್ಟು ಬೆಳೆ ಹಾನಿಯಾಗಿದೆ. ಜತೆಗೆ, 342 ಮನೆಗಳು ಬಿದ್ದು ಆ ಕುಟುಂಬಗಳು ಬೀದಿಗೆ ಬರುವಂತಾಗಿವೆ. ಕಳೆದ ಎರಡು ದಿನಗಳಿಂದ ಅಬ್ಬರದ ಮಳೆಯಿಲ್ಲದಿದ್ದರೂ ಜಿಟಿಜಿಟಿ ಮಳೆ ಮುಂದುವರಿದಿದೆ. ಶುಕ್ರವಾರ ಕೂಡ ಆಗಾಗ ಮಳೆ ಬೀಳುತ್ತಿದೆ. ಮಳೆ ನಿಂತರೂ ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳು ಉಕ್ಕೇರಿ ಹರಿಯುತ್ತಿವೆ. ಇದರಿಂದ ನದಿ ಪಾತ್ರದ ಹೊಲಗದ್ದೆಗಳು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾಳಾಗಿವೆ. ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಹತ್ತಿ, ಸೋಯಾಬಿನ್ ಇತ್ಯಾದಿ ಬೆಳೆಗಳು ಹಲವು ದಿನಗಳ ಕಾಲ ನೀರಿನಲ್ಲು ಮುಳುಗಿ ಕೊಳೆಯ ತೊಡಗಿವೆ. ಟೊಮ್ಯಾಟೋ, ಮೆಣಸಿನಕಾಯಿ ಇತ್ಯಾದಿ ತರಕಾರಿ ಬೆಳೆಗಳಂತೂ ಸಂಪೂರ್ಣ ಹಾಳಾಗಿವೆ. ಎಡಬಿಡದೇ ಸುರಿಯುತ್ತಿರುವ ಮಳೆಗೆ ತರಕಾರಿ ಕೊಳೆತು ರೈತರು ಕಣ್ಣೀರು ಹಾಕುವಂತಾಗಿದೆ.
1946 ಹೆಕ್ಟೇರ್ ಬೆಳೆ ಹಾನಿ:
ಮಳೆಗೆ ಬೆಳೆಗಳು ಹಾಳಾಗುತ್ತಿದ್ದರೂ ಸರಿಯಾಗಿ ಹಾನಿ ಸರ್ವೇ ನಡೆಸದ್ದಕ್ಕೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಚುರುಕಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಇದುವರೆಗೆ ಆಗಿರುವ ಹಾನಿ ವರದಿ ಸಿದ್ಧಪಡಿಸಿವೆ. ಅದರಂತೆ 1611 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ, 335 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿವೆ.
ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ
ಜಿಲ್ಲೆಯಲ್ಲಿ ಮೆಕ್ಕೆಜೋಳ ಅತಿಹೆಚ್ಚು 1347 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿವೆ. 145 ಹೆಕ್ಟೇರ್ ಹತ್ತಿ, 69 ಹೆಕ್ಟೇರ್ ಸೋಯಾ, 21 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆ ಹಾಳಾಗಿವೆ. ಹಾವೇರಿ ತಾಲೂಕಿನಲ್ಲಿ 88ಹೆಕ್ಟೇರ್, ಹಾನಗಲ್ಲ 115, ಸವಣೂರು 58, ಶಿಗ್ಗಾಂವಿ 24, ಬ್ಯಾಡಗಿ 220, ಹಿರೇಕೆರೂರು 230, ರಾಣಿಬೆನ್ನೂರು 448, ರಟ್ಟೀಹಳ್ಳಿ ತಾಲೂಕಿನಲ್ಲಿ 427 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ.
ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಹಾವೇರಿ ತಾಲೂಕಿನಲ್ಲಿ 32,ರಾಣಿಬೆನ್ನೂರು 29, ಬ್ಯಾಡಗಿ 15, ಹಿರೇಕೆರೂರು 138, ರಟ್ಟೀಹಳ್ಳಿ 41, ಸವಣೂರು 48, ಶಿಗ್ಗಾಂವಿ 5, ಹಾನಗಲ್ಲ ತಾಲೂಕಿನಲ್ಲಿ 25 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದೆ.
ನದಿ ಹಾಗೂ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ಹೊಲಗಳಲ್ಲಿ ನೀರು ತುಂಬಿ ಸಸಿ ಹಂತದಲ್ಲಿರುವ ಬೆಳೆಗಳು ಕೊಳೆಯುತ್ತಿವೆ. ತರಕಾರಿ,ಸೊಪ್ಪು ಸಂಪೂರ್ಣ ನಾಶವಾಗಿವೆ. ಮುಂಗಾರು ಆರಂಭದಲ್ಲೇ ಬೆಳೆ ಹಾನಿಯಾಗಿರುವುದರಿಂದ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಆತಂಕ ಎದುರಾಗಿದೆ.
Kodagu News: ಮೂರು ವರ್ಷ ಕಳೆದರೂ ನಿರಾಶ್ರಿತ ಕುಟುಂಬಕ್ಕೆ ಸಿಕ್ಕಿಲ್ಲ ಸೂರು!
ಧರೆಗುರುಳಿದ 342 ಮನೆಗಳು:
ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಬಿಡದೇ ಮಳೆಯಾಗುತ್ತಿರುವುದರಿಂದ ತೇವಾಂಶ ಹೆಚ್ಚಿ ಬಡ ಕುಟುಂಬಗಳು ವಾಸಿಸುವ ಮಣ್ಣಿನ ಗೋಡೆಗಳಿರುವ ಮನೆಗಳು ಬೀಳುತ್ತಲೇ ಇವೆ. ಕೆಲವೇ ದಿನಗಳಲ್ಲಿ 342 ಮನೆಗಳು ಬಿದ್ದು,ಆ ಕುಟುಂಬಗಳು ಬೀದಿ ಪಾಲಾಗುವಂತಾಗಿದೆ. ಸವಣೂರು ತಾಲೂಕೊಂದರಲ್ಲೇ 216 ಮನೆಗಳು ಬಿದ್ದಿವೆ. ಹಾವೇರಿ ತಾಲೂಕಿನಲ್ಲಿ 23, ರಾಣಿಬೆನ್ನೂರು 6, ಬ್ಯಾಡಗಿ 24, ಹಿರೇಕೆರೂರು 22, ರಟ್ಟೀಹಳ್ಳಿ 23, ಶಿಗ್ಗಾಂವಿ 13, ಹಾನಗಲ್ಲ
ತಾಲೂಕಿನಲ್ಲಿ 15 ಮನೆಗಳು ಬಿದ್ದಿವೆ.
ಬಿದ್ದ ಮನೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಸರ್ಕಾರ ಸೂಚಿಸಿದ್ದರೂ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಹಾನಿಗೊಳಗಾದ ಮನೆಗಳ ಸಾವಿರಾರು ಜನರು ದಿಕ್ಕು ತೋಚದಂತಾಗಿದ್ದಾರೆ. ಮಳೆ ಹೆಚ್ಚಿದಂತೆಲ್ಲ ಜಿಲ್ಲೆಯ ಜನತೆ ಬೆಚ್ಚಿ ಬೀಳುತ್ತಿದ್ದಾರೆ. ನದಿ ತೀರದ ಜನರು ಪ್ರವಾಹ ಭೀತಿಯಲ್ಲೇ ಕಾಲ ಕಳೆಯುತ್ತಿದ್ದಾರೆ.